samachara
www.samachara.com
ವಿಂಗ್‌ ಕಮಾಂಡರ್‌ ಅಭಿನಂದನ್‌ ನಾಳೆ ಬಿಡುಗಡೆ: ಪಾಕ್‌ ಸಂಸತ್‌ನಲ್ಲಿ ಇಮ್ರಾನ್‌ ಖಾನ್ ಘೋಷಣೆ
ಸುದ್ದಿ ಸಾರ

ವಿಂಗ್‌ ಕಮಾಂಡರ್‌ ಅಭಿನಂದನ್‌ ನಾಳೆ ಬಿಡುಗಡೆ: ಪಾಕ್‌ ಸಂಸತ್‌ನಲ್ಲಿ ಇಮ್ರಾನ್‌ ಖಾನ್ ಘೋಷಣೆ

ಅಭಿನಂದನ್‌ ಬಿಡುಗಡೆಯಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯೊಂದು ಮಧ್ಯಸ್ಥಿಕೆ ವಹಿಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ತನ್ನ ಸೆರೆಯಲ್ಲಿರುವ ಯುದ್ಧ ಖೈದಿ ಅಭಿನಂದನ್‌ ವರ್ಧಮಾನ್‌ರನ್ನು ನಾಳೆ ಬಿಡುಗಡೆಗೊಳಿಸುತ್ತಿರುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಘೋಷಿಸಿದ್ದಾರೆ.

“ಶಾಂತಿ ಸೂಚಕವಾಗಿ ನಾವು ವಿಂಗ್‌ ಕಮಾಂಡರ್‌ ಅಭಿನಂದನ್‌ರನ್ನು ಬಿಡುಗಡೆಗೊಳಿಸುತ್ತಿದ್ದೇವೆ,” ಎಂದು ಖಾನ್‌ ಪಾಕಿಸ್ತಾನದ ಜಂಟಿ ಅಧಿವೇಶನದಲ್ಲಿ ತಿಳಿಸಿದ್ದಾರೆ. ಅವರ ಈ ತೀರ್ಮಾನವನ್ನು ಪಾಕಿಸ್ತಾನದ ಜನಪ್ರತಿನಿಧಿಗಳು ಮೇಜುಕುಟ್ಟಿ ಸ್ವಾಗತಿಸಿದ್ದಾರೆ. ಈ ಮೂಲಕ ಯುದ್ಧ ಖೈದಿಯ ಬಿಡುಗಡೆಯಲ್ಲೂ ಇಮ್ರಾನ್‌ ಖಾನ್‌ ಜಾಗತಿಕ ಮೆಚ್ಚುಗೆಯನ್ನು ಸಂಪಾದಿಸಿದ್ದಾರೆ.

ಬುಧವಾರ ಮುಂಜಾನೆ ಪಾಕಿಸ್ತಾನದ ವಿಮಾನಗಳನ್ನು ಬೆದರಿಸಿಕೊಂಡು ಮಿಗ್‌ 21 ಹತ್ತಿ ಹೊರಟಿದ್ದ ಅಭಿನಂದನ್‌ ಯುದ್ಧ ವಿಮಾನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತನವಾಗಿತ್ತು. ಮತ್ತು ಅಭಿನಂದನ್‌ ಯುದ್ಧ ಖೈದಿಯಾಗಿ ಪಾಕಿಸ್ತಾನದ ಕೈಗೆ ಸೆರೆ ಸಿಕ್ಕಿದ್ದರು.

ಅವರನ್ನು ಆದಷ್ಟು ಬೇಗ ಸುರಕ್ಷಿತವಾಗಿ ತನಗೆ ಒಪ್ಪಿಸುವಂತೆ ಪಾಕಿಸ್ತಾನಕ್ಕೆ ಭಾರತ ಮನವಿ ಮಾಡಿಕೊಂಡಿತ್ತು. ಜನ ಸಾಮಾನ್ಯರೂ, ವಿವಿಧ ದೇಶಗಳೂ ಈ ಸಂಬಂಧ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ್ದರು. ಇದೀಗ ಪಾಕಿಸ್ತಾನ ಒತ್ತಡ ಬಲವಾಗುವ ಮೊದಲೇ ಅಭಿನಂದನ್‌ರನ್ನು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದೆ.

ಅಭಿನಂದನ್‌ ಬಿಡುಗಡೆಯಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯೊಂದು ಮಧ್ಯಸ್ಥಿಕೆ ವಹಿಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.