samachara
www.samachara.com
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣ; ಡಿಕೆಶಿ ವಿರುದ್ಧ ವಿಚಾರಣೆ ಕೈಬಿಟ್ಟ ವಿಶೇಷ ಕೋರ್ಟ್‌
ಸುದ್ದಿ ಸಾರ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣ; ಡಿಕೆಶಿ ವಿರುದ್ಧ ವಿಚಾರಣೆ ಕೈಬಿಟ್ಟ ವಿಶೇಷ ಕೋರ್ಟ್‌

ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಾಗಿರುವ ಮೂರು ಅಕ್ರಮ ಆಸ್ತಿ ಪ್ರಕರಣಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಯಿಂದ ಕೈಬಿಟ್ಟಿದೆ.

ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಪ್ರಭಾವಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಯಿಂದ ಕೈಬಿಟ್ಟಿದೆ.

ಸದ್ಯಕ್ಕೆ ನ್ಯಾಯಾಲಯದಲ್ಲಿ ಶಿವಕುಮಾರ್ ವಿರುದ್ದ ಹವಾಲಾ ವಹಿವಾಟು ನಡೆಸಿರುವ ಒಂದು ಪ್ರಕರಣ ಮಾತ್ರ ಬಾಕಿ ಇದೆ. 2017ರ ಆಗಸ್ಟ್ 1ರಂದು ಶಿವಕುಮಾರ್ ಮನೆ, ಕಚೇರಿ, ಸಂಬಂಧಿಕರು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಬೆಂಗಳೂರು, ಮೈಸೂರು, ಕನಕಪುರ, ರಾಮನಗರ, ನೆಲಮಂಗಲ ಸೇರಿದಂತೆ ಒಟ್ಟು 80 ಕಡೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಶಿವಕುಮಾರ್ ಹಾಗೂ ಅವರ ತಾಯಿ ಗೌರಮ್ಮ, ಪತ್ನಿ ಮತ್ತು ಪುತ್ರಿ ಸೇರಿದಂತೆ ಕುಟುಂಬ ಸದಸ್ಯರ ಹೆಸರಿನಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಆಸ್ತಿಯನ್ನು ಸಂಪಾದನೆ ಮಾಡಿದ್ದರು ಎಂದು ಐಟಿ ಅಧಿಕಾರಿಗಳು ಬೆಂಗಳೂರಿನ ಜನಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

Also read: ವರ್ಷ 22, ಆಸ್ತಿ 100 ಕೋಟಿ: ಐಟಿ ಕಣ್ಗಾವಲಿನಲ್ಲಿ ಡಿಕೆಶಿ ಪುತ್ರಿ ಐಶ್ವರ್ಯ

ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಗಳನ್ನು ವಿಚಾರಣೆಯಿಂದ ಕೈಬಿಡಬೇಕೆಂದು ಶಿವಕುಮಾರ್ ಪರ ವಕೀಲರು ಅವರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಐಟಿ ಅಧಿಕಾರಿಗಳು ದಾಖಲಿಸಿದ್ದ ನಾಲ್ಕು ಪ್ರಕರಣಗಳಲ್ಲಿ ಮೂರು ಪ್ರಕರಣಗಳನ್ನು ವಿಚಾರಣೆಯಿಂದ ಕೈಬಿಟ್ಟಿದ್ದಾರೆ.

"ನನ್ನ ವಿರುದ್ಧ ದಾಖಲಾಗಿರುವ ದೂರುಗಳು ರಾಜಕೀಯ ಪ್ರೇರಿತ. ಐಟಿ ಅಧಿಕಾರಿಗಳು ದೂರು ದಾಖಲಿಸಲು ಅಧಿಕಾರವೇ ಇಲ್ಲ. ತನಿಖಾ ಅಧಿಕಾರಿಗಳು ಮಾಡಿರುವ ಆರೋಪಗಳು ನಿರಾಧಾರ. ನಾನು ಕಾಲ ಕಾಲಕ್ಕೆ ಸರಿಯಾಗಿಯೇ ತೆರಿಗೆ ಪಾವತಿಸಿದ್ದೇನೆ. ಹೀಗಾಗಿ ಈ ವಿಚಾರಣೆಯನ್ನು ಕೈ ಬಿಡಬೇಕು" ಎಂದು ಶಿವಕುಮಾರ್‌ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.