samachara
www.samachara.com
ಲೋಕಸಭಾ ಚುನಾವಣೆ ಬಿಸಿ; ಸುಳ್ಳು ಸುದ್ದಿ ತಡೆಯಲು ಟ್ವಿಟರ್‌ನಿಂದ ಸಮನ್ವಯಾಧಿಕಾರಿ
ಸುದ್ದಿ ಸಾರ

ಲೋಕಸಭಾ ಚುನಾವಣೆ ಬಿಸಿ; ಸುಳ್ಳು ಸುದ್ದಿ ತಡೆಯಲು ಟ್ವಿಟರ್‌ನಿಂದ ಸಮನ್ವಯಾಧಿಕಾರಿ

ಚುನಾವಣೆ ಸಂದರ್ಭದಲ್ಲಿ ನಕಲಿ ಸುದ್ದಿ ನಿಯಂತ್ರಣ  ಹಾಗೂ ‘ವಿದೇಶಿ ಹಸ್ತಕ್ಷೇಪ’ ತಡೆಗಟ್ಟುವ ನಿಟ್ಟಿನಲ್ಲಿ ಟ್ವಿಟರ್‌ ಸಮನ್ವಯಾಧಿಕಾರಿ ನೇಮಕಕ್ಕೆ ಮುಂದಾಗಿದೆ. 

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಚುನಾವಣಾ ಆಯೋಗದೊಂದಿಗೆ ಕೆಲಸ ಮಾಡಲು ಭಾರತಕ್ಕೆ ‘ಸಮನ್ವಯಾಧಿಕಾರಿ’ಯೊಬ್ಬರ ನೇಮಕಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್‌ ಮುಂದಾಗಿದೆ. ಅಲ್ಲದೆ ಸುಳ್ಳು ಸುದ್ದಿ, ನಕಲಿ ಸುದ್ದಿಗಳ ತಡೆಗೂ ತಂಡ ರಚಿಸಲು ನಿರ್ಧರಿಸಿದೆ.

ಭಾರತಕ್ಕಾಗಿಯೇ ಸಮನ್ವಯಾಧಿಕಾರಿ ಹಾಗೂ ಟ್ವಿಟರ್‌ ಭಾರತೀಯ ವಿಭಾಗದ ವ್ಯವಹಾರಗಳ ಮುಖ್ಯಸ್ಥರ ನೇಮಕದ ಬಗ್ಗೆ ಟ್ವಿಟರ್‌ ಸಾರ್ವಜನಿಕ ನೀತಿಯ ಜಾಗತಿಕ ಉಪಾಧ್ಯಕ್ಷ ಕಾಲಿನ್ ಕ್ರೋವೆಲ್ ಮಾತನಾಡಿದ್ದಾರೆ ಸುದ್ದಿ ಸಂಸ್ಥೆ ‘ರಾಯ್ಟರ್ಸ್‌’ ಜತೆ ಮಾತನಾಡಿದ್ದಾರೆ.

ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಭಾರತದ ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಜೊತೆಗಿನ ಸಭೆಯ ಬಳಿಕ ಕ್ರೋವೆಲ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಾರಿ ‘ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ’ಯಲ್ಲಿ ಟ್ವಿಟರ್‌ ಪಾತ್ರ ಇರಲಿದೆ ಎಂದಿದ್ದಾರೆ ಕ್ರೋವೆಲ್.

“ಭಾರತದಲ್ಲಿ ಈ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುವುದನ್ನು ತಡೆಗಟ್ಟಲು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಟ್ವಿಟರ್‌ ಚುನಾವಣಾ ಆಯೋಗದ ಜೊತೆಗೆ ಹೆಚ್ಚು ತೊಡಗಿಸಿಕೊಳ್ಳಲಿದೆ. ಇದಕ್ಕಾಗಿ ಸಮನ್ವಯಾಧಿಕಾರಿ ನೇಮಿಸಿಕೊಳ್ಳಲಾಗುವುದು” ಎಂದು ಕ್ರೋವೆಲ್‌ ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಇಂಟರ್ನೆಟ್ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಸುಳ್ಳು ಸುದ್ದಿಗಳು ಹರಿದಾಟವೂ ಕಡಿಮೆ ಏನಿಲ್ಲ. ಹೀಗಾಗಿ ಚುನಾವಣಾ ಸಂದರ್ಭದಲ್ಲಿ ನಕಲಿ ಸುದ್ದಿ ನಿಯಂತ್ರಣ ಹಾಗೂ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಪರಿಶೀಲನೆಗೆ ಮುಂದಾಗಿವೆ. ಟ್ವಿಟರ್‌ ಈ ನಿಟ್ಟಿನಲ್ಲಿ ಚುನಾವಣಾ ಆಯೋಗದೊಂದಿಗೆ ಸಮನ್ವಯ ಸಾಧಿಸಲು ವಿಶೇಷಾಧಿಕಾರಿಯ ನೇಮಕಕ್ಕೆ ಮುಂದಾಗಿದೆ.

ಭಾರತದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಚುನಾವಣಾ ಸಂದರ್ಭದಲ್ಲಿ ಉಂಟಾಗಬಹುದಾದ ಯಾವುದೇ ಸಮಸ್ಯೆಗಳನ್ನು ನಿವಾರಿಸಲು ನಮ್ಮ ಬಳಿ ಪ್ರಕ್ರಿಯೆ ಹಾಗೂ ಕಾರ್ಯತಂತ್ರಗಳಿವೆ. ಚುನಾವಣಾ ಆಯೋಗದ ಕೋರಿಕೆಯಂತೆ ಅಧಿಕಾರಿಗಳನ್ನು ನೇಮಿಸಲು ಟ್ವಿಟರ್ ಸಿದ್ಧವಿದೆ ಎಂದು ಕ್ರೋವೆಲ್‌ ತಿಳಿಸಿದ್ದಾರೆ.

ಈ ನೇಮಕಾತಿಯ ಬಗ್ಗೆ ಮಾತನಾಡಿರುವ ಕ್ರೋವೆಲ್, ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ, ಎಷ್ಟು ದಿನಗಳ ಒಳಗಾಗಿ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಕಳೆದ ವರ್ಷ ಟ್ವಿಟರ್‌ನ ಭಾರತೀಯ ವಿಭಾಗದ ಮುಖ್ಯಸ್ಥ ತರಣ್‌ಜೀತ್ ಸಿಂಗ್ ತಮ್ಮ ಸ್ಥಾನದಿಂದ ಹಿಂದೆ ಸರಿದಿದ್ದರು. ಆದರೆ, ಈ ಪ್ರಕರಣ ನಡೆದು ಒಂದು ವರ್ಷವಾದರೂ ಟ್ವಿಟರ್ ಸಂಸ್ಥೆ ಭಾರತಕ್ಕೆ ಮತ್ತೊಬ್ಬ ಮುಖ್ಯಸ್ಥರನ್ನು ನೇಮಿಸಿಲ್ಲ. ಬದಲಾಗಿ ಕಂಪೆನಿಯ ಭಾರತದ ಸಿಬ್ಬಂದಿಯೊಬ್ಬರು ಈ ಹುದ್ದೆಯನ್ನೂ ತಾತ್ಕಾಲಿಕವಾಗಿ ನಿಭಾಯಿಸುತ್ತಿದ್ದಾರೆ.