samachara
www.samachara.com
ತಹಬಂದಿಗೆ ಬಂದ ಬಂಡೀಪುರ ಕಾಡ್ಗಿಚ್ಚು; ಇನ್ನಷ್ಟೆ ಬರಬೇಕಿದೆ ನಷ್ಟದ ನಿಖರ ಮಾಹಿತಿ
ಸುದ್ದಿ ಸಾರ

ತಹಬಂದಿಗೆ ಬಂದ ಬಂಡೀಪುರ ಕಾಡ್ಗಿಚ್ಚು; ಇನ್ನಷ್ಟೆ ಬರಬೇಕಿದೆ ನಷ್ಟದ ನಿಖರ ಮಾಹಿತಿ

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಸಂಪೂರ್ಣ ತಹಬಂದಿದೆ ಬಂದಿದೆ. ಆದರೆ ಬೆಂಕಿ ಆರಿದರೂ ಅದರ ಕಾವು ಮಾತ್ರ ಇನ್ನೂ ಆರಿದಂತೆ ಕಾಣುತ್ತಿಲ್ಲ. 

ಐದು ದಿನಗಳ ಹಿಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ತನ್ನ ಕೆನ್ನಾಲಗೆಯನ್ನು ಚಾಚಿದ್ದ ಬೆಂಕಿ ಕೊನೆಗೂ ತಹಬಂದಿಗೆ ಬಂದಿದೆ. ಅಪಾರ ಪ್ರಮಾಣದ ಅರಣ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಬೆಂಕಿ ಆರಿದ ನಂತರವೂ ಅದರ ಕಾವು ಮಾತ್ರ ಇನ್ನೂ ಆರದೆ ಹಾಗೆ ಉಳಿದಿದೆ.

ಕಳೆದ ಶುಕ್ರವಾರ ಹಿಮವದ್‌ಗೋಪಾಲಸ್ವಾಮಿ ದೇವಾಲಯದ ಸುತ್ತ ಕಾಣಿಸಿಕೊಂಡಿದ್ದ ಬೆಂಕಿ ನೋಡನೋಡುತ್ತಿದ್ದಂತೆ ಬೆಂಕಿ ಲೊಕ್ಕೆರೆ, ಚಿಕ್ಕೆಲಚಟ್ಟಿ, ಕಳ್ಳಿ ಗೌಡನಹಳ್ಳಿ, ಶಿವಪುರ, ಕಣಿಯನಪುರ, ಮಾಗಿನಹಳ್ಳಿ, ಆಂಜನಿಬೆಟ್ಟ, ಮಾದಿಗಿತ್ತಿ ಬೆಟ್ಟ, ಸಿದ್ಧ ದೇವರ ಖಾನೆ, ನೀರುಗುಂಡಿ ಹಳ್ಳಿ, ಮಾದಪ್ಪನ ಕಾಡು ಪ್ರದೇಶಗಳನ್ನೂ ದಾಟಿ ತಮಿಳುನಾಡಿನ ಮುದುಮಲೈ ಹಾಗೂ ಕೇರಳ ಅರಣ್ಯ ಪ್ರದೇಶದವರೆಗೆ ಬೆಂಕಿ ವ್ಯಾಪಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಎಷ್ಟೇ ಕಷ್ಟಪಟ್ಟರು ಈ ಬೆಂಕಿಯನ್ನು ನಂದಿಸುವುದು ಸಾಧ್ಯವಾಗಿರಲಿಲ್ಲ. ಕೊನೆಗೆ ರಕ್ಷಣಾ ಇಲಾಖೆಯ ಹೆಲಿಕಾಪ್ಟರ್‌ಗಳ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ.

5 ದಿನಗಳಿಂದ ಹೊತ್ತಿ ಉರಿದ ಬೆಂಕಿ ಸುಮಾರು 10,000 ಎಕರೆ ಅರಣ್ಯ ಪ್ರದೇಶವನ್ನು ತನ್ನ ಕೆನ್ನಾಲಗೆಗೆ ಬಲಿ ಪಡೆದಿತ್ತು. ಅಗ್ನಿಶಾಮಕ ದಳ ಸಿಬ್ಬಂಧಿ ಸೇರಿದಂತೆ 500 ಕ್ಕೂ ಹೆಚ್ಚು ಸ್ಥಳೀಯರು ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದರು. ಆದರೂ ಬೆಂಕಿ ನಂದಿಸುವುದು ಸಾಧ್ಯವಾಗಿರಲಿಲ್ಲ.

ಇಂತಹ ಸಂದರ್ಭದಲ್ಲಿ ಸಮಯೋಚಿತ ನಿರ್ಧಾರ ತೆಗೆದುಕೊಂಡ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ರಕ್ಷಣಾ ಇಲಾಖೆ ಹೆಲಿಕಾಪ್ಟರ್‌ಗಳಿಂದ ನೀರು ತಂದು ಅರಣ್ಯದ ಮೇಲೆ ಸುರಿಯುವ ನಿರ್ಧಾರ ತೆಗೆದುಕೊಂಡರು. ಕೊನೆಗೆ ಹೆಲಿಕಾಪ್ಟರ್‌ಗಳ ಸಹಾಯದಿಂದ ಪಕ್ಕದ ನುಗು ಮತ್ತು ತಾರಕ ಜಲಾಶಯದಿಂದ ನೀರು ತಂದು ಅರಣ್ಯ ಪ್ರದೇಶದ ಮೇಲೆ ಸಿಂಪಡಿಸುವ ಮೂಲಕ ಮಂಗಳವಾರ ಸಂಜೆಯ ಹೊತ್ತಿಗೆ ಬೆಂಕಿಯನ್ನು ಸಂಪೂರ್ಣವಾಗಿ ತಹಬಂದಿಗೆ ತರಲಾಗಿದೆ.

ಹೇಗಿದೆ ಈಗಿನ ಪರಿಸ್ಥಿತಿ?

ಮೈಸೂರು ಚಾಮರಾಜ ನಗರಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ ನಂತರ ರಾಜ್ಯ ಸರಕಾರ ಐಎಫ್‌ಎಸ್ ಅಧಿಕಾರಿ ಟಿ.ಬಾಲಚಂದ್ರ ಅವರನ್ನು ಬಂಡೀಪುರ ಹುಲಿ ಯೋಜನೆ ನಿರ್ದೇಶಕರಾಗಿ ನೇಮಕ ಮಾಡಿತ್ತು.

ಇಂದು ಅಧಿಕಾರ ಸ್ವೀಕರಿಸಿದ ಟಿ.ಬಾಲಚಂದ್ರ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದು, ಕಾಡ್ಗಿಚ್ಚಿನಿಂದ ಉಂಟಾಗಿರಬಹುದಾದ ನಷ್ಟದ ಕುರಿತು ಮಾಹಿತಿ ಕಲೆಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಕಾಡ್ಗಿಚ್ಚಿನಿಂದ ಉಂಟಾಗಿರುವ ನಷ್ಟದ ಕುರಿತ ನಿಖರ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.

ಮೈಸೂರು ಹಾಗೂ ಚಾಮರಾಜನಗರ ಅರಣ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಕರ್ನಾಟಕದ ಭಾಗದಲ್ಲಿ ನಿನ್ನೆ ಸಂಜೆಯೇ ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ. ಆದರೆ ತಮಿಳುನಾಡು ಹಾಗೂ ಕೇರಳ ಭಾಗದಲ್ಲಿ ಇನ್ನೂ ಬೆಂಕಿ ಹತೋಟಿಗೆ ಬಂದಿಲ್ಲ. ಹೀಗಾಗಿ ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೂ ಬೆಂಕಿ ನಂದಿಸುವ ಕಾರ್ಯದಲ್ಲೇ ತೊಡಗಿದ್ದಾರೆ ಎನ್ನಲಾಗುತ್ತಿದೆ.

ಅರಣ್ಯ ಇಲಾಖೆ ನೀಡುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 10,000ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಕಾಡ್ಗಿಚ್ಚಿಗೆ ಯಾವುದೇ ಪ್ರಾಣಿ ಪಕ್ಷಿಗಳು ಸಾವನ್ನಪ್ಪಿಲ್ಲ. ಕಾಡಿಗೆ ಬೆಂಕಿ ಆವರಿಸುತ್ತಿದ್ದಂತೆ ವನ್ಯಜೀವಿಗಳು ಸುರಕ್ಷಿತ ಪ್ರದೇಶಗಳಿಗೆ ಓಡಿಹೋಗಿ ಜೀವ ಉಳಿಸಿಕೊಂಡಿವೆ. ಈವರೆಗೆ ಯಾವುದೇ ಪ್ರಾಣಿಗಳ ಕಳೆಬರ ಸಿಕ್ಕಿಲ್ಲ. ಅಲ್ಲದೆ ಮುಂಗಾರು ಮಳೆ ಆರಂಭವಾದರೆ ಕಾಡ್ಗಿಚ್ಚಿಗೆ ಒಳಗಾಗಿರುವ ಪ್ರದೇಶಗಳಲ್ಲಿ ಮತ್ತೆ ಹಸಿರು ಕಾಣಿಸಿಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 5 ದಿನಗಳಿಂದ ಬೆಂಕಿ ನಂದಿಸುವ ಕೆಲಸದಲ್ಲಿ ಹಗಲು ರಾತ್ರಿ ದುಡಿದ ಅಗ್ನಿಶಾಮಕ ದಳ ಸೇರಿದಂತೆ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂಧಿಗಳಿಗೆ ಇಂದು ರಿಲೀಫ್ ಸಿಕ್ಕಿದೆ. ಆದರೂ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಮತ್ತೆ ಕಾಡ್ಗಿಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ 10 ಅಗ್ನಿಶಾಮಕ ದಳವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.