samachara
www.samachara.com
ಅದಾನಿ ಪಾಲಿಗೆ ಮಂಗಳೂರು ಸೇರಿ ದೇಶದ 5 ವಿಮಾನ ನಿಲ್ದಾಣಗಳ ನಿರ್ವಹಣೆ ಬಿಡ್‌
ಸುದ್ದಿ ಸಾರ

ಅದಾನಿ ಪಾಲಿಗೆ ಮಂಗಳೂರು ಸೇರಿ ದೇಶದ 5 ವಿಮಾನ ನಿಲ್ದಾಣಗಳ ನಿರ್ವಹಣೆ ಬಿಡ್‌

ದೇಶದ ಪ್ರಮುಖ ಐದು ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆಯನ್ನು ಅದಾನಿ ಪಡೆದುಕೊಂಡಿದ್ದಾರೆ. ಇದರಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದೆ.

ಪ್ರಧಾನಿ ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ಹಲವಾರು ಉದ್ದಿಮೆಗಳಿಗೆ ಕೈ ಇಟ್ಟಿದ್ದ ಅದಾನಿ ಗ್ರೂಪ್‌ ಮಾಲಿಕ ಗೌತಮ್‌ ಅದಾನಿ ಇದೀಗ ಏರ್‌ಪೋರ್ಟ್‌ಗಳಿಗೂ ಕಾಲಿಟ್ಟಿದ್ದಾರೆ. ದೇಶದ ಪ್ರಮುಖ ಐದು ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆಯನ್ನು ಅದಾನಿ ಪಡೆದುಕೊಂಡಿದ್ದಾರೆ. ಇದರಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದೆ.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಖಾಸಗಿಕರಣದ ಹೆಸರಿನಲ್ಲಿ ಹಲವು ಸರಕಾರಿ ಉದ್ದಿಮೆಗಳನ್ನು ಉದ್ಯಮಿಗಳ ಕೈಗಿಡುವ ಕೆಟ್ಟ ಸಂಪ್ರದಾಯವನ್ನು ಮುಂದುವರಿಸಿದ್ದರು. ಅದರ ಭಾಗವಾಗಿ ಇದೇ ಮೊದಲ ಬಾರಿಗೆ ಖಾಸಗಿ ಪಾಲುದಾರಿಕೆಯಲ್ಲಿ ದೇಶದ ವಿಮಾನ ನಿಲ್ದಾಣಗಳ ‘ನಿರ್ವಹಣೆ’ಗೆ ಸರಕಾರ ಮುಂದಾಗಿತ್ತು. ಅದರಂತೆ ಮೊದಲ ಹಂತದಲ್ಲಿ ಮಹಾನಗರಗಳನ್ನು ಹೊರತಾದ 6 ವಿಮಾನ ನಿಲ್ದಾಣಗಳ ನಿರ್ವಹಣೆಗೆ ಬಿಡ್‌ ನಡೆಸಲು ತೀರ್ಮಾನಿಸಲಾಗಿತ್ತು.

ಮಂಗಳೂರು, ಅಹಮದಾಬಾದ್‌, ಜೈಪುರ, ಲಕ್ನೋ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಟೆಂಡರ್‌ ಕರೆಯಲಾಗಿತ್ತು. ಒಟ್ಟು 32 ತಾಂತ್ರಿಕ ವಿಭಾಗಗಳನ್ನು ಒಳಗೊಂಡ ಬಿಡ್‌ಗೆ 10 ಕಂಪನಿಗಳು ಅರ್ಜಿ ಸಲ್ಲಿಸಿದ್ದವು.

ಇದರಲ್ಲಿ ಗುವಾಹಟಿ ಬಿಟ್ಟು ಉಳಿದ 5 ವಿಮಾನ ನಿಲ್ದಾಣಗಳಿಗೆ ಫೆಬ್ರವರಿ 25ರಂದು 11 ಗಂಟೆಗೆ ಫೈನಾನ್ಶಿಯಲ್‌ ಬಿಡ್‌ ನಡೆದಿದೆ. ಇದರಲ್ಲಿ ಐದು ವಿಮಾನ ನಿಲ್ದಾಣಗಳಿಗೆ ಅತಿ ಹೆಚ್ಚಿನ ಬಿಡ್ ಮೊತ್ತ ಉಲ್ಲೇಖಿಸಿದ ಅದಾನಿ ಗ್ರೂಪ್‌ ಐದನ್ನೂ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಆರನೇ ವಿಮಾನ ನಿಲ್ದಾಣ ಗುವಾಹಟಿಯ ಬಿಡ್‌ ಇನ್ನಷ್ಟೇ ನಡೆಯಬೇಕಾಗಿದ್ದು ಅದನ್ನೂ ಅದಾನಿ ಪಡೆದುಕೊಂಡರೆ ಅಚ್ಚರಿಯಿಲ್ಲ.

ಯಾವ ವಿಮಾನ ನಿಲ್ದಾಣದ ನಿರ್ವಹಣೆಗೆ ಕಂಪನಿಗಳು ಬಿಡ್ ಮಾಡಿದ ಮೊತ್ತ. 
ಯಾವ ವಿಮಾನ ನಿಲ್ದಾಣದ ನಿರ್ವಹಣೆಗೆ ಕಂಪನಿಗಳು ಬಿಡ್ ಮಾಡಿದ ಮೊತ್ತ. 

ಪ್ರತಿ ಪ್ರಯಾಣಿಕರ ಹೆಸರಿನಲ್ಲಿ ಎಷ್ಟು ಹಣವನ್ನು ಸರಕಾರಿ ಸ್ವಾಮ್ಯದ ಏರ್ಪೋರ್ಟ್‌ ಮ್ಯಾನೇಜರ್‌ಗಳಿಗೆ ಸಲ್ಲಿಸಬಲ್ಲಿರಿ ಎಂಬುದರ ಆಧಾರದ ಮೇಲೆ ಫೈನಾನ್ಶಿಯಲ್‌ ಬಿಡ್‌ ನಿರ್ಧರಿಸುವುದೆಂದು ತೀರ್ಮಾನಿಸಲಾಗಿತ್ತು. ಇದರಲ್ಲಿ ಅದಾನಿ ಗ್ರೂಪ್‌ ಆಕ್ರಮಣಕಾರಿ ಬಿಡ್‌ ಸಲ್ಲಿಸಿತ್ತು. ಹೆಚ್ಚಿನ ಮೊತ್ತಗಳನ್ನು ನಮೂದಿಸಿ ಎಲ್ಲಾ ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆಯನ್ನು ಗೆದ್ದುಕೊಂಡಿದೆ. ಈ ಮೂಲಕ 27 ಬಿಲಿಯನ್ ಡಾಲರ್‌ ಮೌಲ್ಯದ ಅದಾನಿ ಉದ್ಯಮ ಸಾಮ್ರಾಜ್ಯ ಮತ್ತಷ್ಟು ವಿಸ್ತರಣೆಯಾಗಿದೆ.

ಎರಡನೇ ಹಂತದ ವಿಮಾನ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಗುಣಮಟ್ಟದ ಮೂಲಭೂತ ಸೌಕರ್ಯ ನೀಡುವ ಉದ್ದೇಶದೊಂದಿಗೆ ಈ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ಹೇಳಿದೆ.