samachara
www.samachara.com
ನಮ್ಮ ಹೋರಾಟ ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರಿಗಳ ಮೇಲಲ್ಲ ; ನರೇಂದ್ರ ಮೋದಿ
ಸುದ್ದಿ ಸಾರ

ನಮ್ಮ ಹೋರಾಟ ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರಿಗಳ ಮೇಲಲ್ಲ ; ನರೇಂದ್ರ ಮೋದಿ

ಪುಲ್ವಾಮಾ ದಾಳಿ ನಡೆದ ನಂತರ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಶೂಟಿಂಗ್‌ನಲ್ಲಿ ನಿರತವಾಗಿದ್ದ ಪ್ರಧಾನಿಗಳು ಇದೀಗ ಕಾಶ್ಮೀರಿಗಳ ಮೇಲಿನ ಹಲ್ಲೆಯನ್ನು ತಡವಾಗಿಯಾದರೂ ಖಂಡಿಸಿದ್ದಾರೆ.

ಪುಲ್ವಾಮಾ ದಾಳಿಯ ನಂತರ ದೇಶದಾದ್ಯಂತ ಕಾಶ್ಮೀರ ಜನರ ಮೇಲೆ ನಡೆಯುತ್ತಿರುವ ದಾಳಿಗೆ ಸಂಬಂಧಿಸಿದಂತೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದಾರೆ.

ನಮ್ಮ ಹೋರಾಟ ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರಿಗಳ ಮೇಲಲ್ಲ; ಭಯೋತ್ಪಾದನೆಯಿಂದಾಗಿ ಕಾಶ್ಮೀರಿ ಜನ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಇಡೀ ದೇಶದ ಜನ ಅವರ ಜೊತೆಗೆ ನಿಲ್ಲಬೇಕು,” ಎಂದು ಮೋದಿ ತಿಳಿಸಿದ್ದಾರೆ.

ರಾಜಸ್ತಾನದ ಟೋಂಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲ ಬಾರಿಗೆ ಜನರ ಹಲ್ಲೆ ಸಂಸ್ಕೃತಿಯನ್ನು ಖಂಡಿಸಿದ್ದಾರೆ. “ಇಡೀ ಭಾರತ ಕಾಶ್ಮೀರಿಗಳ ಬೆನ್ನಿಗೆ ನಿಲ್ಲಬೇಕು. ಭಯೋತ್ಪಾದನೆಯನ್ನು ಬುಡ ಸಮೇತ ಕೀಳಲು ಸಹಾಯ ಮಾಡಬೇಕು,” ಎಂದು ಆಗ್ರಹಿಸಿದ್ದಾರೆ.

ಕಳೆದ ಗುರುವಾರ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್‌ ಅಹಮದ್‌ ದರ್‌ ನಡೆಸಿದ ಆತ್ಮಹುತಿ ಬಾಂಬ್ ದಾಳಿಗೆ ಭಾರತೀಯ 46 ಜನ ಸಿಆರ್‌ಪಿಎಫ್ ಯೋಧರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತ ಘಟನೆಯ ನಂತರ ದೇಶದ ಅಲ್ಲಲ್ಲಿ ಕಾಶ್ಮೀರಿಗಳಿಗೆ ಬಹಿಷ್ಕಾರ ಹಾಕಿರುವ ಹಾಗೂ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳು ವ್ಯಾಪಕವಾಗಿ ನಡೆದಿವೆ.

ಕಾಶ್ಮೀರದಿಂದ ಪಶ್ಚಿಮ ಬಂಗಾಳದವರೆಗೆ ಹಲವಾರು ಕಾಶ್ಮೀರಿ ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳು ತಮ್ಮ ಮೇಲೆ ಹಲ್ಲೆಯಾಗಿದೆ ಎಂದು ದೂರು ದಾಖಲಿಸಿದ್ದಾರೆ. ಅಲ್ಲದೆ ನೂರಾರು ಜನ ಕಾಶ್ಮೀರಿಗಳು ಸುರಕ್ಷತೆ ಬಯಸಿ ಮತ್ತೆ ತಮ್ಮ ರಾಜ್ಯಕ್ಕೆ ಹಿಂದಿರುಗಿದ್ದಾರೆ.

ಇದರ ನಡುವೆ ಬಿಜೆಪಿಯ ಮಾಜಿ ನಾಯಕ ಹಾಗೂ ಹಾಲಿ ಮೇಘಾಲಯದ ರಾಜ್ಯಪಾಲ ತಥಾಗತ ರಾಯ್, "ಕಾಶ್ಮೀರಿಗಳ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಬೇಕು. ಕಾಶ್ಮೀರಿಗಳು ಉತ್ಪಾದಿಸುವ ಎಲ್ಲಾ ವಸ್ತುಗಳ ಮೇಲೆ ಬಹಿಷ್ಕಾರ ಘೋಷಿಸಬೇಕು. ಹಿಂದೂಗಳು ಪವಿತ್ರ ಅಮರನಾಥ ಯಾತ್ರೆಯನ್ನೂ ಕೈಗೊಳ್ಳಬಾರದು" ಎಂದು ಬಹಿರಂಗ ಹೇಳಿಕೆ ನೀಡಿದ್ದರು. ತಥಾಗತ ರಾಯ್ ಅವರ ಈ ಹೇಳಿಕೆ ಕಾಶ್ಮೀರದಲ್ಲಿ ವ್ಯಾಪಕ ಖಂಡನೆಗೆ ಒಳಗಾಗಿತ್ತು.

ದೇಶದಾದ್ಯಂತ ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಮತ್ತು ರಾಜ್ಯಪಾಲರ ಹೇಳಿಕೆಯನ್ನು ಬಿಜೆಪಿಯ ಮಿತ್ರ ಪಕ್ಷಗಳಾದ ಶಿವಸೇನೆ ಹಾಗೂ ಅಕಾಳಿದಳ ತೀವ್ರವಾಗಿ ವಿರೋಧಿಸಿದ್ದವು. ಸುಪ್ರಿಂ ಕೋರ್ಟ್‌ ಕೂಡ ಶುಕ್ರವಾರ ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಈ ಕುರಿತು ಸೂಕ್ತ ಕ್ರಮ ಜರುಗಿಸುವಂತೆ 11 ರಾಜ್ಯಗಳಿಗೆ ಸೂಚನೆ ನೀಡಿತ್ತು.

ಆದರೆ ಈ ಕುರಿತು ಪ್ರಧಾನಿ ಮಾತ್ರ ತುಟಿ ಬಿಚ್ಚಿರಲಿಲ್ಲ. ಪುಲ್ವಾಮಾ ದಾಳಿ ನಡೆದ ನಂತರ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಶೂಟಿಂಗ್‌ನಲ್ಲಿ ನಿರತವಾಗಿದ್ದ ಪ್ರಧಾನಿಗಳು ಇದೀಗ ಕಾಶ್ಮೀರಿಗಳ ಮೇಲಿನ ಹಲ್ಲೆಯನ್ನು ತಡವಾಗಿಯಾದರೂ ಖಂಡಿಸಿದ್ದಾರೆ.