samachara
www.samachara.com
ಜೆಕೆಎಲ್‌ಎಫ್‌ ಮುಖ್ಯಸ್ಥ ಸೇರಿ 30 ಮಂದಿ ಪ್ರತ್ಯೇಕತಾವಾದಿಗಳ ಬಂಧನ
ಸುದ್ದಿ ಸಾರ

ಜೆಕೆಎಲ್‌ಎಫ್‌ ಮುಖ್ಯಸ್ಥ ಸೇರಿ 30 ಮಂದಿ ಪ್ರತ್ಯೇಕತಾವಾದಿಗಳ ಬಂಧನ

ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್‌) ಮುಖ್ಯಸ್ಥ ಯಾಸೀನ್ ಮಲಿಕ್ ಸೇರಿದಂತೆ ಜಮಾತ್-ಇ-ಇಸ್ಲಾಂ ಸಂಘಟನೆಯ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪುಲ್ವಾಮ ದಾಳಿಯ ಬಳಿಕ ಕಣಿವೆ ರಾಜ್ಯದ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆದಿದ್ದ ಸರಕಾರ ಈಗ ಪ್ರತ್ಯೇಕತಾವಾದಿಗಳ ಬಂಧನಕ್ಕೆ ಮುಂದಾಗಿದೆ. ಶುಕ್ರವಾರ ರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್‌) ಮುಖ್ಯಸ್ಥ ಯಾಸೀನ್ ಮಲಿಕ್ ಸೇರಿದಂತೆ ಜಮಾತ್-ಇ-ಇಸ್ಲಾಂ ಸಂಘಟನೆಯ 30 ಜನರನ್ನು ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಯಾಸೀನ್ ಮಲಿಕ್‌ ಮನೆಗೆ ದಾಳಿ ಮಾಡಿದ ಪೊಲೀಸರು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ್ದಾರೆ. ಜಮಾತ್-ಇ-ಇಸ್ಲಾಂ ಮುಖ್ಯಸ್ಥ ಡಾ.ಅಬ್ದುಲ್ ಹಮೀದ್ ಫಯಾಜ್, ವಕ್ತಾರ ಹಾಗೂ ವಕೀಲ ಜಾಹಿದ್ ಅಲಿ, ಮಾಜಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಖಾದಿರ್ ಲೋನ್ ಹಾಗೂ ಅನಂತ್‌ನಾಗ್ ಜಿಲ್ಲೆಯ ಮುಖ್ಯಸ್ಥ ಅಬ್ದುರ್ ರೌಫ್ ಸೇರಿದಂತೆ ಜೆಇಇ ಗೆ ಸೇರಿದ ಎಲ್ಲಾ ಪ್ರಮುಖ ನಾಯಕರುಗಳನ್ನು ಬಂಧಿಸಿದ್ದಾರೆ.

ಜಮಾತ್-ಇ-ಇಸ್ಲಾಂ ಸಂಘಟನೆಗೆ ಜಮ್ಮು-ಕಾಶ್ಮೀರದಲ್ಲಿ ಸುಮಾರು 5,000 ಕ್ಕೂ ಹೆಚ್ಚು ಸದಸ್ಯರಿದ್ದು, ಭದ್ರತಾ ಪಡೆಗಳು ದಿಢೀರೆಂದು ಸಂಘಟನೆಯ ಮುಖ್ಯಸ್ಥರನ್ನು ಬಂಧಿಸುತ್ತಿರುವುದರಿಂದ ಕಾಶ್ಮೀರಿಗಳಿಗೆ ಸಂಬಂಧಿಸಿದ ಕಲಂ 35 (ಎ) ರದ್ದುಗೊಳಿಸುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ. ಆದರೆ ಸರಕಾರದ ಇಂತಹ ಕ್ರಮಗಳನ್ನು ಜಮ್ಮು-ಕಾಶ್ಮೀರದ ಜನತೆ ಒಪ್ಪುವುದಿಲ್ಲ ಎಂದು ಜಮಾತ್-ಇ-ಇಸ್ಲಾಂ ಸಂಘಟನೆ ಎಚ್ಚರಿಕೆ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮಫ್ತಿ, “ಕಳೆದ 24 ಗಂಟೆಗಳಲ್ಲಿ ಹುರಿಯತ್ ನಾಯಕರು ಹಾಗೂ ಜಮಾತ್ ಸಂಘಟನೆಯ ಅನೇಕ ನಾಯಕರನ್ನು ಬಂಧಿಸಲಾಗಿದೆ. ಸರಕಾರದ ಈ ಇಂತಹ ಅವಸರದ ನಡೆಯನ್ನು ಅರ್ಥೈಸಿಕೊಳ್ಳುವಲ್ಲಿ ನಾನು ವಿಫಲವಾಗಿದ್ದೇನೆ. ಯಾವ ಕಾನೂನಿನ ಅಡಿಯಲ್ಲಿ ಇವರನ್ನು ಬಂಧಿಸಲಾಗಿದೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಸರಕಾರ ವ್ಯಕ್ತಿಯನ್ನು ಬಂಧಿಸಬಹುದು ಆತನ ಆಲೋಚನೆಗಳನ್ನಲ್ಲ” ಎಂದಿದ್ದಾರೆ,

Also read: ಪುಲ್ವಾಮ ದಾಳಿಯ ಬೆನ್ನಲ್ಲೇ ಹುಟ್ಟಿವೆ ಉತ್ತರವಿಲ್ಲದ ಕೆಲವು ಮುಖ್ಯ ಪ್ರಶ್ನೆಗಳು...

ಹೆಚ್ಚುವರಿ ಪಡೆಗಳ ನಿಯೋಜನೆ

ಕಣಿವೆ ರಾಜ್ಯದಲ್ಲಿ ಒಂದೆಡೆ ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಗುತ್ತಿದ್ದರೆ, ಮತ್ತೊಂದು ಕಡೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರಕಾರ 100ಕ್ಕೂ ಹೆಚ್ಚು ಸೇನಾ ತುಕಡಿಯನ್ನು ಕಾಶ್ಮೀರಕ್ಕೆ ನಿಯೋಜಿಸಿದೆ.

ಲೋಕಸಭೆ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಶಾಂತಿಯುತವಾಗಿ ಚುನಾವಣೆ ನಡೆಸುವ ಸಲುವಾಗಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಸಿಆರ್‌ಪಿಎಫ್‌ನ 45, ಗಡಿ ಭದ್ರತಾ ಪಡೆಗಳ 35 ಹಾಗೂ ಶಸಸ್ತ್ರ ಸೇನಾ ಪಡೆಗಳ 20 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 5 ರಂದು ಚುನಾವಣಾ ಆಯೋಗದ ಅಧಿಕಾರಿಗಳು ಜಮ್ಮು-ಕಾಶ್ಮೀರಕ್ಕೆ ಆಗಮಿಸಲಿದ್ದು, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಕಳೆದ ಜೂನ್ ತಿಂಗಳಲ್ಲಿ ಬಿಜೆಪಿ ಹಾಗೂ ಪಿಡಿಪಿ ನೇತೃತ್ವದ ಸರಕಾರ ಮುರಿದು ಬಿದ್ದ ನಂತರ ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಲ್ಲಿದೆ.