samachara
www.samachara.com
ನಿಲ್ಲದ ಕಳ್ಳಭಟ್ಟಿ ದುರಂತ, ಎರಡು ವಾರಗಳ ಅಂತರದಲ್ಲಿ 190ಕ್ಕೂ ಹೆಚ್ಚು ಬಲಿ
ಸುದ್ದಿ ಸಾರ

ನಿಲ್ಲದ ಕಳ್ಳಭಟ್ಟಿ ದುರಂತ, ಎರಡು ವಾರಗಳ ಅಂತರದಲ್ಲಿ 190ಕ್ಕೂ ಹೆಚ್ಚು ಬಲಿ

“ಅಬಕಾರಿ ಇಲಾಖೆ ಮತ್ತು ಕಳ್ಳಭಟ್ಟಿ ತಯಾರಕರ ನಡುವಿನ ನಂಟಿನಿಂದಾಗಿ ಈ ಎಲ್ಲಾ ದುರಂತಗಳು ನಡೆದಿವೆ,” - ಸ್ಥಳೀಯ ನಿವಾಸಿ ಪ್ರಬಿನ್‌ ದಾಸ್‌.

ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ ಅಸುನೀಗಿದವರ ಸಂಖ್ಯೆ 85ಕ್ಕೆ ಏರಿಕೆಯಾಗಿದೆ. ಸಾವಿಗೀಡಾದ ಹೆಚ್ಚಿನವರು ಇಲ್ಲಿನ ಚಹಾ ಪ್ಲಾಂಟೇಷನ್‌ಗಳಲ್ಲಿ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕರಾಗಿದ್ದಾರೆ.

ಗುವಾಹಟಿಯಿಂದ 100 ಕಿಲೋ ಮೀಟರ್‌ ದೂರದಲ್ಲಿ ಸಲ್ಮಾರ ಟೀ ಗಾರ್ಡನ್‌ ಎಂಬ ಎಸ್ಟೇಟ್‌ ಇದೆ. ಇಲ್ಲಿ ಗೊಲಘಾಟ್ ಮತ್ತು ಜೊರ್ಹಾಟ್‌ ಜಿಲ್ಲೆಗಳಿಗೆ ಸೇರಿದ ಕಾರ್ಮಿಕರು ದುಡಿಯಲು ಬರುತ್ತಾರೆ. ಇದರ ಪಕ್ಕದಲ್ಲೇ ಜುಗಬಾರಿ ಎಂಬ ಪ್ರದೇಶದಲ್ಲಿ ಕಳ್ಳಭಟ್ಟಿ ತಯಾರಿಸಿ, ಅತಿ ಕಡಿಮೆ ದರ ಅಂದರೆ ಲೋಟಕ್ಕೆ 10-20 ರೂಪಾಯಿಗೆ ಮಾರುತ್ತಾರೆ.

ಎಸ್ಟೇಟ್‌ ಕಾರ್ಮಿಕರ ಕೂಲಿ ಕಡಿಮೆ ಇದ್ದಿದ್ದರಿಂದ ಬಾಟಲಿ ಮದ್ಯ ಬಿಟ್ಟು ಹೆಚ್ಚಿನವರು ಇದನ್ನೇ ನೆಚ್ಚಿಕೊಂಡಿದ್ದರು. ಇವು ಕಳಪೆ ಗುಣಮಟ್ಟದ ಮದ್ಯವಾಗಿದ್ದು, ಇದಕ್ಕೆ ಮಿಥೈಲ್‌ ಆಲ್ಕೋಹಾಲ್‌ ಎಂಬ ಅಮಲು ಬರಿಸುವ ರಸಾಯನಿಕ ಬಳಸುತ್ತಿದ್ದರು. ಸ್ವಾಭಾವಿಕವಾಗಿ ಮಿಥೈಲ್‌ ಆಲ್ಕೋಹಾಲ್‌ ನೇರವಾಗಿ ಕೇಂದ್ರ ನರಮಂಡಲದ ಮೇಲೆ ಪ್ರಭಾವ ಬೀರುವ ಗುಣ ಹೊಂದಿದೆ. ಒಂದೊಮ್ಮೆ ಕಳ್ಳಭಟ್ಟಿ ತಯಾರಿಸುವಾಗ ಏರುಪೇರಾದರೆ ನರಮಂಡಲದ ಮೇಲೆ ಪರಿಣಾಮ ಬೀರಿ ಕುಡಿದವರು ಸಾವಿಗೀಡಾಗುವ ಸಾಧ್ಯತೆಗಳೇ ಹೆಚ್ಚು.

ಹೀಗಿರುವಾಗ ಅದೇನಾಯ್ತೋ ಏನೋ. ಶುಕ್ರವಾರ ಎಂದಿನಂತೆ ನೂರಾರು ಜನರು ಇಲ್ಲಿ ಬಂದು ಕಳ್ಳಭಟ್ಟಿ ಕುಡಿದಿದ್ದಾರೆ. ಹಾಗೆ ಕುಡಿದವರೆಲ್ಲಾ ಸಾವಿಗೀಡಾಗಿದ್ದಾರೆ. ಗೊಲಘಾಟ್ ಜಿಲ್ಲೆಯೊಂದರಲ್ಲೇ 39 ಜನರು ಸಾವನ್ನಪ್ಪಿದ್ದರೆ, ಪಕ್ಕದ ಜೋರ್ಹಾಟ್‌ನಲ್ಲಿ 28 ಜನರು ಅಸುನೀಗಿದ್ದಾರೆ. ಸಾವಿಗೀಡಾದವರಲ್ಲಿ 7 ಮಹಿಳೆಯರೂ ಸೇರಿದ್ದಾರೆ.

ಮದ್ಯ ಸೇವಿಸಿದ ಇನ್ನೂ ಹಲವರ ಸ್ಥಿತಿ ಗಂಭೀರವಾಗಿದ್ದು 350 ಜನರು ಜೊರ್ಹಾಟ್‌ ಮೆಡಿಕಲ್‌ ಕಾಲೇಜು ಮತ್ತು ಗೊಲಘಾಟ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದುರಂತದ ಬೆನ್ನಲ್ಲೇ ಕಳ್ಳಭಟ್ಟಿ ಅಂಗಡಿ ಮಾಲಿಕ ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ. ಜತೆಗೆ ಸಲ್ಮಾರದ ಇಬ್ಬರು ಅಬಕಾರಿ ಇಲಾಖೆ ಅಧಿಕಾರಿಗಳನ್ನು ನಿರ್ಲಕ್ಷ್ಯದ ಆರೋಪದಲ್ಲಿ ವಜಾ ಮಾಡಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಸ್ಸಾಂನ ಅಬಕಾರಿ ಸಚಿವ ಪರಿಮಾಳ್‌ ಶುಕ್ಲಬೈಧ್ಯ ಆದೇಶ ನೀಡಿದ್ದಾರೆ.

ಸರಕಾರದ ನಿರ್ಲಕ್ಷ್ಯ ಆರೋಪ:

ಆದರೆ ಇದಕ್ಕೆ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯ ನಿವಾಸಿ ಪ್ರಬಿನ್‌ ದಾಸ್‌ ದೂರಿರುವುದಾಗಿ ನ್ಯೂಸ್‌ 18 ವರದಿ ಮಾಡಿದೆ. ಮದ್ಯ ನಿಷೇಧ ಸಮಿತಿಯೊಂದರ ಮುಖ್ಯಸ್ಥರಾಗಿರುವ ಇವರ ಮೇಲೆ ಈ ಹಿಂದೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದರು. ಗೋಲಘಾಟ್‌ನಲ್ಲಿ ಸಭೆಯೊಂದರಲ್ಲಿ ರಾಜ್ಯ ಬಿಜೆಪಿ ಸರಕಾರ ಕಳ್ಳಭಟ್ಟಿ ತಯಾರಿಕೆಯ ಮೇಲೆ ಯಾವುದೇ ನಿಯಂತ್ರಣ ಹೇರುತ್ತಿಲ್ಲ ಎಂದು ಆರೋಪಿಸಿದಾಗ ಅವರ ಮೇಲೆ ದಾಳಿ ನಡೆದಿತ್ತು.

ಇದೀಗ ದುರಂತದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, “ಅಬಕಾರಿ ಇಲಾಖೆ ಮತ್ತು ಕಳ್ಳಭಟ್ಟಿ ತಯಾರಕರ ನಡುವಿನ ನಂಟಿನಿಂದಾಗಿ ಈ ಎಲ್ಲಾ ದುರಂತಗಳು ನಡೆದಿವೆ,” ಎಂದು ಕಿಡಿಕಾರಿದ್ದಾರೆ. ಇನ್ನು ವಿರೋಧ ಪಕ್ಷ ಅಸ್ಸಾಂ ಗಣ ಪರಿಷತ್‌ (ಎಜಿಪಿ) ದುರಂತದಿಂದ ಸಾವಿಗೀಡಾದ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದೆ.

ಭಾರತದಲ್ಲಿ ಕಳ್ಳಭಟ್ಟಿ ದುರಂತ:

ಹಾಗೆ ನೋಡಿದರೆ ಭಾರತದಲ್ಲಿ ಕಳ್ಳಭಟ್ಟಿ ದುರಂತ ಎಂಬುದು ಹೊಸದಲ್ಲ. ಬಡತನ ರೇಖೆಗಿಂತ ಕೆಳಗಿನ ಜನರೇ ಹೆಚ್ಚಾಗಿರುವ ದೇಶದಲ್ಲಿ ಕನಿಷ್ಠ ವರ್ಷಕ್ಕೆ 1,000 ಜನರು ಕಳ್ಳಭಟ್ಟಿ ಸೇವನೆ ಮಾಡಿ ಸಾವಿಗೀಡಾಗುತ್ತಾರೆ ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ ಮಾಹಿತಿ.

ಎರಡು ವಾರದ ಕೆಳಗೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಇದೇ ರೀತಿ ಕಳ್ಳಭಟ್ಟಿ ಸೇವನೆ ಮಾಡಿ 105 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಉತ್ತರಾಖಂಡ್‌ನ ಹರಿದ್ವಾರದಲ್ಲಿ 36 ಜನರು ಕಳ್ಳ ಭಟ್ಟಿ ಸೇವನೆ ಮಾಡಿದ ನಂತರ ಹೊಟ್ಟೆ ನೋವಿನಿಂದ ಅಸುನೀಗಿದರೆ 69 ಕ್ಕೂ ಹೆಚ್ಚು ಜನರು ಉತ್ತರ ಪ್ರದೇಶದಲ್ಲಿ ಜೀವ ಕಳೆದುಕೊಂಡಿದ್ದರು.

ಭಾರತದ ಬೃಹತ್‌ ಕಳ್ಳಭಟ್ಟಿ ದುರಂತಗಳನ್ನು ನೋಡಿದರೆ 1992ರಲ್ಲಿ ಒಡಿಶಾದಲ್ಲಿ 200 ಜನರು ಮದ್ಯ ಸೇವನೆಯಿಂದ ಪ್ರಾಣ ಕಳೆದುಕೊಂಡಿದ್ದರು. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ 180 ಮತ್ತು ಇತ್ತೀಚೆಗೆ 2015ರಲ್ಲಿ 100 ಜನರು ಮುಂಬೈನಲ್ಲಿ ಕಳ್ಳಭಟ್ಟಿ ಸೇವನೆ ಮಾಡಿ ಸಾವನ್ನಪ್ಪಿದ್ದರು. ಇದೀಗ ಮತ್ತೆ ಅದೇ ರೀತಿಯ ದುರಂತಗಳಿಗೆ ಮೂರು ರಾಜ್ಯಗಳು ಸಾಕ್ಷಿಯಾಗಿವೆ.

ಚಿತ್ರ ಕೃಪೆ: ರಾಯ್ಟರ್ಸ್‌