samachara
www.samachara.com
ಬೆಂಗಳೂರಿನ ಸಬ್‌ ಅರ್ಬನ್ ರೈಲು ಯೋಜನೆಗೆ ಕೇಂದ್ರದಿಂದ ಹಸಿರು ನಿಶಾನೆ
ಸುದ್ದಿ ಸಾರ

ಬೆಂಗಳೂರಿನ ಸಬ್‌ ಅರ್ಬನ್ ರೈಲು ಯೋಜನೆಗೆ ಕೇಂದ್ರದಿಂದ ಹಸಿರು ನಿಶಾನೆ

ಸಬ್‌ ಅರ್ಬನ್ ರೈಲು ಯೋಜನೆ ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ. ಒಟ್ಟು 23 ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೇ.50-50ರ ಅನುಪಾತದಲ್ಲಿ ಹಣ ವಿನಿಯೋಗಿಸಲಿವೆ.

ಬೆಂಗಳೂರು ನಗರದ ಜನತೆಯ ಬಹು ದಿನಗಳ ಕನಸು ದಶಕಗಳ ನಂತರ ಕೊನೆಗೂ ನನಸಾಗುವ ಸಮಯ ಸಮೀಪಿಸಿದೆ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ಸಬ್‌ ಅರ್ಬನ್ (ಉಪನಗರ) ರೈಲು ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ತೀರ್ಮಾನಿಸಿವೆ.

ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಬ್‌ ಅರ್ಬನ್ ರೈಲು ಯೋಜನೆ ಜಾರಿ ಮಾಡುವ ಸಂಬಂಧ ಮಾತುಕತೆ ನಡೆಸಿದ್ದಾರೆ.

ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, “ಸಬ್‌ ಅರ್ಬನ್ ರೈಲು ಯೋಜನೆ ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ. ಒಟ್ಟು 23 ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೇ.50-50ರ ಅನುಪಾತದಲ್ಲಿ ಹಣ ವಿನಿಯೋಗಿಸಲಿವೆ. ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ವಿಧಿಸಿದ್ದ ಕೆಲವು ಷರತ್ತುಗಳಿಗೆ ಕೇಂದ್ರ ಸಂಪೂರ್ಣ ಒಪ್ಪಿಗೆ ಸೂಚಿಸಿದೆ. ಬಜೆಟ್‍ನಲ್ಲಿ ನಾವು ಈಗಾಗಲೇ ಈ ಯೋಜನೆಗೆ 400 ಕೋಟಿ ಹಣವನ್ನು ಮೀಸಲಿಟ್ಟಿದ್ದೇವೆ” ಎಂದು ಮಾಹಿತಿ ನೀಡಿದರು.

1995ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಸಬ್‌ ಅರ್ಬನ್ ರೈಲು ಯೋಜನೆ ಪ್ರಾರಂಭಿಸಲು ತೀರ್ಮಾನಿಸಿದ್ದರು. ಆದರೆ ಕೆಲವು ಕಾರಣಗಳಿಂದ ಯೋಜನೆ ವಿಳಂಬವಾಯಿತು. ಈ ಹಿಂದೆ ಕೇಂದ್ರದಲ್ಲಿ ನಗರಾಭಿವೃದ್ದಿ ಸಚಿವರಾಗಿದ್ದ ಅನಂತ್ ಕುಮಾರ್ ಬೆಂಗಳೂರಿನಲ್ಲಿ ಸಬ್‌ ಅರ್ಬನ್ ರೈಲು ಪ್ರಾರಂಭಿಸಲು ವಿಶೇಷ ಆಸಕ್ತಿ ವಹಿಸಿದ್ದರು.

ಆದರೆ ಮೆಟ್ರೋ ರೈಲು ಯೋಜನೆಯ ಜತೆ ಜತೆಗೆ ಏಕಕಾಲದಲ್ಲಿ ಎರಡೂ ಯೋಜನೆಗಳನ್ನು ಆರಂಭಿಸಿದರೆ ಕಾಮಗಾರಿ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಸಬ್‌ ಅರ್ಬನ್‌ ರೈಲನ್ನು ತಡೆ ಹಿಡಿಯಲಾಗಿತ್ತು. ‘ಇದೀಗ ರೈಲೇ ಸಚಿವರಾಗಿರುವ ಪಿಯೂಷ್ ಗೋಯಲ್ ಅವರು ವಿಶೇಷ ಕಾಳಜಿ ವಹಿಸಿ ಯೋಜನೆಯನ್ನು ಅನುಷ್ಠಾನ ಮಾಡಲು ಸಮ್ಮತಿಸಿದ್ದಾರೆ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಿಸಲು ಇದು ಸಹಕಾರಿಯಾಗಲಿದೆ. ಶೀಘ್ರದಲ್ಲೇ ಪ್ರಧಾನಿಯವರ ಸಮಯಾವಕಾಶವನ್ನು ನೋಡಿಕೊಂಡು ರೈಲ್ವೇ ಯೋಜನೆಯ ಮುಹೂರ್ತಕ್ಕೆ ದಿನ ನಿಗದಿ ಪಡಿಸಲಾಗುವುದು,’ ಎಂದು ಅವರು ತಿಳಿಸಿದರು.

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮಾತನಾಡಿ, “ಇದೇ 25ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಇದರಲ್ಲಿ ಬೆಂಗಳೂರಿನ ಸಬ್‌ ಅರ್ಬನ್ ರೈಲು ಯೋಜನೆಗೆ ಅನುಮತಿ ಪಡೆಯಲು ಪ್ರಧಾನಿಯಿಂದ ಒಪ್ಪಿಗೆ ಪಡೆಯಲಾಗುವುದು. ಅವರಿಂದಲೇ ಉದ್ಘಾಟನೆಯನ್ನೂ ನೆರವೇರಿಸಲಾಗುವುದು. ಬೆಂಗಳೂರಿನ ಜನತೆಯ ಬಹುದಿನಗಳ ಕನಸು ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನನಸಾಗಲಿದೆ. ಒಂದೊಮ್ಮೆ ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾದರೂ ಯೋಜನೆಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಚುನಾವಣಾ ಆಯೋಗಕ್ಕೆ ಮುಂಚಿತವಾಗಿ ಪತ್ರ ಬರೆದು ಒಪ್ಪಿಗೆ ಪಡೆಯಲಿದ್ದೇವೆ. ನಿಗದಿತ ಅವಧಿಯೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಸೂಚಿಸಲಾಗುವುದು,” ಎಂದರು.

ಯೋಜನೆಯ ಬಗ್ಗೆ ವಿವರಣೆ ನೀಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕ ತಕ್ಷಣ ಯೋಜನೆಯ ಶಿಲಾನ್ಯಾಸ ನೆರವೇರಲಿದೆ. ಈ ಯೋಜನೆಗೆ 23 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ. ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ. 70 ಕಿ.ಮೀ ಎತ್ತರಿಸಿದ ಮಾರ್ಗ ಹಾಗೂ 90 ಕಿ.ಮೀ ಸಾಧಾರಣ ಮಾರ್ಗವಾಗಿ ಯೋಜನೆಯನ್ನು ರೂಪಿಸಲಾಗುವುದು. ಯೋಜನೆಗೆ ಬೇಕಾದ 6 ಸಾವಿರ ಕೋಟಿ ರೂಪಾಯಿ ಮೌಲ್ಯದ ಜಮೀನನ್ನು 1 ರೂಪಾಯಿ ಗುತ್ತಿಗೆಯಲ್ಲಿ ನೀಡಲಾಗುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ವಿಧಿಸಿರುವ 19 ಷರತ್ತುಗಳನ್ನು ಒಪ್ಪಿಕೊಂಡಿದ್ದೇವೆ ಎಂದರು.

ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ಸಬ್‌ ಅರ್ಬನ್‌ ರೈಲು ಯೋಜನೆಗೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆ. ಮೆಟ್ರೋದಂತೆ ವರ್ಷಗಟ್ಟಲೆ ಎಳೆಯದೇ ಶೀಘ್ರದಲ್ಲಿ ಈ ಯೋಜನೆ ಮುಗಿದು ಜನರಿಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ನೀಡಲಿ ಎಂಬುದೇ ಎಲ್ಲರ ಆಶಯ.