samachara
www.samachara.com
ಬಾಂಗ್ಲಾದ ಚೌಕಬಜಾರ್‌ ಅಗ್ನಿ ಅವಘಡಕ್ಕೆ 78 ಬಲಿ
ಸುದ್ದಿ ಸಾರ

ಬಾಂಗ್ಲಾದ ಚೌಕಬಜಾರ್‌ ಅಗ್ನಿ ಅವಘಡಕ್ಕೆ 78 ಬಲಿ

ಶತಮಾನಗಳಷ್ಟು ಹಳೆಯ ಚೌಕಬಜಾರ್‌ ಜಿಲ್ಲೆಯಲ್ಲಿ ಒತ್ತೊತ್ತಾದ ಕಟ್ಟಡಗಳಿದ್ದು, ಕಿರಿದಾದ ರಸ್ತೆಗಳಿಂದ ಕೂಡಿದೆ. ಇದು ಬೆಂಕಿ ಬೇರೆ ಕಟ್ಟಡಗಳಿಗೆ ವ್ಯಾಪಿಸಲು ಮತ್ತು ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿದ್ದರಿಂದ ಹೆಚ್ಚಿನ ಜೀವ ಹಾನಿ ಸಂಭವಿಸಿದೆ.

ಬಾಂಗ್ಲಾದೇಶದ ರಾಜಧಾನಿ ಢಾಕಾದ ಐತಿಹಾಸಿಕ ಜಿಲ್ಲೆಯಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಬರೋಬ್ಬರಿ 78 ಜನರು ಅಸುನೀಗಿದ್ದಾರೆ.

ಬುಧವಾರ ಸಂಜೆ ಇಲ್ಲಿನ ಚೌಕಬಜಾರ್‌ ಜಿಲ್ಲೆಯ ಅಪಾರ್ಟ್‌ಮೆಂಟ್‌ ಒಂದರ ನೆಲ ಅಂತಸ್ತಿನಲ್ಲಿ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಇಲ್ಲಿ ಸುಲಭವಾಗಿ ಉರಿಯುವ ವಸ್ತುಗಳಿದ್ದುದರಿಂದ ಬೆಂಕಿಯ ಕೆನ್ನಾಲಿಗೆ ಬಹಳ ಬೇಗ ಪೂರ್ತಿ ಕಟ್ಟಡಕ್ಕೆ ವ್ಯಾಪಿಸಿಕೊಂಡಿತ್ತು. ಅಲ್ಲದೆ ಅಕ್ಕಪಕ್ಕದ ಕಟ್ಟಡಗಳಿಗೂ ಹಬ್ಬಿತ್ತು. ಇದೇ ಅಪಾರ್ಟ್‌ಮೆಂಟ್‌ನಲ್ಲೇ ಬುಧವಾರ ವಧುವಿನ ಕಡೆಯವರೊಬ್ಬರ ಔತಣ ಕೂಟವಿತ್ತು. ಈ ಸಂದರ್ಭದಲ್ಲೇ ಅಗ್ನಿ ಆಕಸ್ಮಿಕ ಸಂಭವಿಸಿದ್ದರಿಂದ ಈ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಅನುಮಾನಿಸಲಾಗಿದೆ.

ಶತಮಾನಗಳಷ್ಟು ಹಳೆಯ ಚೌಕಬಜಾರ್‌ ಜಿಲ್ಲೆಯಲ್ಲಿ ಒತ್ತೊತ್ತಾದ ಕಟ್ಟಡಗಳಿದ್ದು, ಕಿರಿದಾದ ರಸ್ತೆಗಳಿಂದ ಕೂಡಿದೆ. ಇದು ಬೆಂಕಿ ಬೇರೆ ಕಟ್ಟಡಗಳಿಗೆ ವ್ಯಾಪಿಸಲು ಮತ್ತು ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿದ್ದರಿಂದ ಹೆಚ್ಚಿನ ಜೀವ ಹಾನಿ ಸಂಭವಿಸಿದೆ.

ಇನ್ನು ಅತೀ ಹೆಚ್ಚಿನ ಜನ ಸಾಂದ್ರತೆಯೂ ಢಾಕಾದಲ್ಲಿದ್ದು ಇಲ್ಲಿನ ಕಟ್ಟಡಗಳಿಗೂ ಸುರಕ್ಷತಾ ಮಾನದಂಡಗಳಿಗೂ ಮೊದಲಿನಿಂದ ಆಗಿ ಬರುವುದಿಲ್ಲ. ದುರ್ಬಲ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ಆಗಾಗ ದುರಂತಗಳು ನಡೆಯುತ್ತಲೇ ಇರುತ್ತವೆ. ಭಾನುವಾರ ಚಿತ್ತಗಾಂಗ್‌ನಲ್ಲಿ ನಡೆದ ಅಗ್ನಿ ದುರಂತರದಲ್ಲಿ 9 ಜನರು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಘಟನೆ ಹಸಿಯಾಗಿರುವಾಗಲೇ ಬುಧವಾರ ಮತ್ತೊಂದು ಅಗ್ನಿ ದುರಂತಕ್ಕೆ ಬಾಂಗ್ಲಾದೇಶ ಸಾಕ್ಷಿಯಾಗಿದೆ. ಕಟ್ಟಡದ ನಿವಾಸಿಗಳೆಲ್ಲಾ ನಿದ್ರಿಸುತ್ತಿದ್ದಾಗ ಸ್ಥಳೀಯ ಕಾಲಮಾನ ರಾತ್ರಿ 11.40ಕ್ಕೆ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡಿದೆ. ಬೆನ್ನಿಗೆ ಇದರ ಅಡಿಯಲ್ಲಿ ನಿಲ್ಲಿಸಿದ್ದ ಮಿನಿಬಸ್‌ಗೆ ಬೆಂಕಿ ತಗುಲಿದೆ. ನಂತರ ಇದರಲ್ಲಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡಿದ್ದು, ಹತ್ತಿರದಲ್ಲಿದ್ದ ರಸಾಯನಿಕ ವಸ್ತುಗಳ ಅಂಗಡಿಗೆ ಈ ಬೆಂಕಿ ವ್ಯಾಪಿಸಿದೆ. ನಂತರ ಒಂದೇ ಸಮನೆ ಬೆಂಕಿ ಹೆಚ್ಚುತ್ತಾ ಹೋಯಿತು ಎಂದು ಸ್ಥಳೀಯ ನಿವಾಸಿ ಮೊಹಮ್ಮದ್‌ ಫಿರೋಜ್‌ ತಿಳಿಸಿದ್ದಾರೆ.

ಬೆಂಕಿ ಅನಾಹುತಕ್ಕೆ ಕಟ್ಟಡದ ಹೊರಗಿದ್ದ ಜನರು, ರೆಸ್ಟೋರೆಂಟ್‌ನಲ್ಲಿದ್ದ ಅತಿಥಿಗಳು, ವಧುವಿನ ಪಾರ್ಟಿಯಲ್ಲಿದ್ದವರು ಬಲಿಯಾಗಿದ್ದಾರೆ. ಹೆಚ್ಚಿನ ಮೃತ ದೇಹಗಳನ್ನು ಗುರುತಿಸುವ ಸ್ಥಿತಿಯಲ್ಲಿ ಇಲ್ಲ ಎಂದು ‘ಎಎಫ್‌ಪಿ’ ವರದಿ ಮಾಡಿದೆ. ಒಟ್ಟು 78 ಜನರು ಸಾವನ್ನಪ್ಪಿದ್ದು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಸದ್ಯ ಸತತ 5 ಗಂಟೆಗಳ ಕಾರ್ಯಾಚರಣೆ ನಂತರ ಬೆಂಕಿ ನಂದಿಸುವಲ್ಲಿ ಬಾಂಗ್ಲಾದೇಶದ ಅಗ್ನಿ ಶಾಮಕದಳದವರು ಯಶಸ್ವಿಯಾಗಿದ್ದಾರೆ. ಆದರೆ ಆರಂಭದಲ್ಲಿ ಕಿರಿದಾದ ರಸ್ತೆಗಳು, ನೀರಿನ ಅಲಭ್ಯತೆಯಿಂದಾಗಿ ಸ್ಥಳಕ್ಕೆ ಬರಲು ಮತ್ತು ಬೆಂಕಿ ನಂದಿಸಲು ಅಗ್ನಿ ಶಾಮಕ ದಳದವರು ಪರದಾಡಿದವು ಎಂದು ‘ಬಿಬಿಸಿ’ ವರದಿ ಮಾಡಿದೆ.

ಅಗ್ನಿ ಅವಘಡಕ್ಕೆ ಸಾಕ್ಷಿಯಂತೆ ನಿಂತಿರುವ ಚೌಕಬಜಾರ್‌ನ ಅಪಾರ್ಟ್‌ಮೆಂಟ್‌.
ಅಗ್ನಿ ಅವಘಡಕ್ಕೆ ಸಾಕ್ಷಿಯಂತೆ ನಿಂತಿರುವ ಚೌಕಬಜಾರ್‌ನ ಅಪಾರ್ಟ್‌ಮೆಂಟ್‌.
/ಗಲ್ಫ್‌ ನ್ಯೂಸ್‌

ಮೊಘಲರ ಕಾಲದ ಜಿಲ್ಲೆ:

ಚೌಕಬಜಾರ್‌ ಹಳೆಯ ಢಾಕಾದ ಪ್ರಮುಖ ಸ್ಥಳವಾಗಿದೆ. ಸುಮಾರು 400 ವರ್ಷಗಳ ಹಿಂದೆ ಮೊಘಲ್‌ರ ಕಾಲದಲ್ಲಿ ಈ ಜಿಲ್ಲೆಯನ್ನು ನಿರ್ಮಿಸಲಾಗಿತ್ತು. ಇವತ್ತಿಗೆ ಈ ಜಿಲ್ಲೆ ರಸಾಯನಿಕ ಪದಾರ್ಥಗಳ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿ ದೊಡ್ಡ ಮಟ್ಟಕ್ಕೆ ಸುಗಂಧ ದ್ರವ್ಯಗಳನ್ನು ಉತ್ಪಾದಿಸಲಾಗುತ್ತದೆ.

2010ರಲ್ಲಿ ನಿಮ್ತಾಲಿ ಜಿಲ್ಲೆಯಲ್ಲಿ ಇದೇ ರೀತಿ ತಳ ಅಂತಸ್ತಿನಲ್ಲಿ ಜೋಡಿಸಿಟ್ಟಿದ್ದ ರಸಾಯನಿಕ ಪದಾರ್ಥಗಳ ಮೂಲಕ ದೊಡ್ಡ ಬೆಂಕಿ ಅವಘಡ ನಡೆದಿತ್ತು. ಅದರಲ್ಲಿ 124 ಜನರು ಅಸುನೀಗಿದ್ದರು. ಅದಾದ ನಂತರ ರಸಾಯನಿಕ ಪದಾರ್ಥಗಳನ್ನು ಜನವಸತಿ ಪ್ರದೇಶಗಳಲ್ಲಿ ಸಂಗ್ರಹಿಸಿ ಇಡದಂತೆ ಸರಕಾರ ಕಟ್ಟು ನಿಟ್ಟಿನ ಸೂಚನೆ ನೀಡಿತ್ತು. ಹೀಗಿದ್ದೂ ಇಲ್ಲಿ ರಸಾಯನಿಕ ಪದಾರ್ಥಗಳ ಉದ್ಯಮ ಅವ್ಯಾವಹತವಾಗಿ ನಡೆಯುತ್ತಾ ಬಂದಿದೆ.

ಚೌಕಬಜಾರ್‌ನ ಕಿರಿದಾದ ರಸ್ತೆಗಳು ಒಂದು ಕಡೆಯಾದರೆ, ಇಲ್ಲಿನ ಜನವಸತಿ ಪ್ರದೇಶಗಳನ್ನು ವಾಣಿಜ್ಯ ಉದ್ದೇಶಕ್ಕೆ ದೊಡ್ಡ ಮಟ್ಟದಲ್ಲಿ ಬಳಸಲಾಗುತ್ತಿದೆ. ಸರಕಾರದ ನಿರ್ದೇಶನದ ನಂತರವೂ ಇಲ್ಲಿನ ಮನೆಗಳ ತಳ ಅಂತಸ್ತುಗಳಲ್ಲಿ ರಸಾಯನಿಕ ಪದಾರ್ಥಗಳು, ಸಿಲಿಂಡರ್‌ಗಳ ಸಂಗ್ರಹ ಸಾಮಾನ್ಯ ಎಂಬಂತಿದೆ ಮತ್ತು ಅದಕ್ಕೀಗ ಚೌಕಬಜಾರ್‌ ಜಿಲ್ಲೆ ದೊಡ್ಡ ಬೆಲೆಯನ್ನು ತೆರಬೇಕಾಗಿ ಬಂದಿದೆ.