samachara
www.samachara.com
‘453 ಕೋಟಿ ರೂ. ಹಣ ಕಟ್ಟಿ, ಇಲ್ಲ ಜೈಲಿಗೋಗಿ’: ಅಂಬಾನಿಗೆ ಸುಪ್ರೀಂ ಕೋರ್ಟ್‌ ಖಡಕ್‌ ವಾರ್ನಿಂಗ್
ಸುದ್ದಿ ಸಾರ

‘453 ಕೋಟಿ ರೂ. ಹಣ ಕಟ್ಟಿ, ಇಲ್ಲ ಜೈಲಿಗೋಗಿ’: ಅಂಬಾನಿಗೆ ಸುಪ್ರೀಂ ಕೋರ್ಟ್‌ ಖಡಕ್‌ ವಾರ್ನಿಂಗ್

ಅನಿಲ್‌ ಅಂಬಾನಿಗೆ ಜೈಲು ಶಿಕ್ಷೆ ಘೋಷಿಸದ ನ್ಯಾಯಪೀಠ, ನಾಲ್ಕು ವಾರಗಳ ಒಳಗೆ ಸ್ವೀಡನ್‌ ಮೂಲದ ಕಂಪನಿಗೆ 453 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ನಿರ್ದೇಶನ ನೀಡಿದೆ.

ಎರಿಕ್ಸನ್‌ ಸಲ್ಲಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅನಿಲ್‌ ಅಂಬಾನಿ ಮತ್ತು ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ದೋಷಿ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿದೆ.

ಸ್ವೀಡನ್‌ ಮೂಲದ ಟೆಲಿಕಾಂ ಉಪಕರಣಗಳ ಉತ್ಪಾದನಾ ಸಂಸ್ಥೆಗೆ ಆರ್‌ಕಾಂ 550 ಕೋಟಿ ರೂಪಾಯಿಗಳನ್ನು ಪಾವತಿಸಬೇಕಿತ್ತು. ಮೊದಲಿಗೆ 2018ರ ಆಗಸ್ಟ್‌ನಲ್ಲಿ ಸೆಪ್ಟೆಂಬರ್‌ 30ರ ಮೊದಲು ಈ ಹಣವನ್ನು ಪಾವತಿ ಮಾಡುವಂತೆ ಸರ್ವೋಚ್ಛ ನ್ಯಾಯಾಲಯ ಅನಿಲ್‌ ಅಂಬಾನಿಗೆ ಸೂಚನೆ ನೀಡಿತ್ತು. ಆದರೆ ಹಣ ಪಾವತಿಸಲು ಅಂಬಾನಿ ವಿಫಲರಾಗಿದ್ದರು. ಕೊನೆಗೆ ಗಡುವನ್ನು 2018ರ ಡಿಸೆಂಬರ್‌ 15ಕ್ಕೆ ಮುಂದೂಡಿತ್ತು.

ಎರಡನೇ ಬಾರಿಯೂ ಗಡುವಿನ ಒಳಗೆ ರಿಲಯನ್ಸ್‌ ಹಣ ಪಾವತಿ ಮಾಡಲು ವಿಫಲವಾಗಿತ್ತು. ಹೀಗಾಗಿ ಅನಿಲ್‌ ಅಂಬಾನಿ ಮತ್ತು ರಿಲಯನ್ಸ್‌ ವಿರುದ್ಧ ಎರಿಕ್ಸನ್‌ ಸುಪ್ರೀಂ ಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ರೋಹಿಂಗ್ಟನ್‌ ನಾರಿಮನ್‌ ಮತ್ತು ವಿನೀತ್‌ ಸರಣ್‌ ಅವರಿದ್ದ ನ್ಯಾಯಪೀಠ, "ರಿಲಯನ್ಸ್‌ನ ಮೂರೂ ಕಂಪನಿಗಳಿಗೆ ಎರಿಕ್ಸನ್‌ಗೆ ಹಣ ಪಾವತಿ ಮಾಡುವ ಉದ್ಧೇಶ ಇದ್ದಂತೆ ಕಾಣಿಸುತ್ತಿಲ್ಲ. ಜತೆಗೆ ಅವರ ನಡವಳಿಕೆ ನ್ಯಾಯಾಂಗ ನಿಂದನೆಯಾಗಿದೆ," ಎಂದು ಆದೇಶದಲ್ಲಿ ಹೇಳಿದೆ.

ಅನಿಲ್‌ ಅಂಬಾನಿಗೆ ಜೈಲು ಶಿಕ್ಷೆ ಘೋಷಿಸದ ನ್ಯಾಯಪೀಠ, ನಾಲ್ಕು ವಾರಗಳ ಒಳಗೆ ಸ್ವೀಡನ್‌ ಮೂಲದ ಕಂಪನಿಗೆ 453 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ನಿರ್ದೇಶನ ನೀಡಿದೆ. ಒಂದೊಮ್ಮೆ ನಿಗದಿತ ಸಮಯದೊಳಗೆ ಹಣಪಾವತಿಸದಿದ್ದಲ್ಲಿ ಅನಿಲ್‌ ಅಂಬಾನಿ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀಕ್ಷ್ಣ ಎಚ್ಚರಿಕೆ ನೀಡಿದೆ.

ಇದರ ಜತೆಗೆ ಎರಡೂ ಕಂಪನಿಗಳಿಗೆ ತಲಾ ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಸುಪ್ರೀಂ ಕೋರ್ಟ್‌ ರೆಜಿಸ್ಟಾರ್‌ಗೆ ಈ ಹಣವನ್ನು ಪಾವತಿ ಮಾಡುವಂತೆ ಎರಡೂ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್‌ ಕಮ್ಯುನಿಕೇಷನ್‌, ‘ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ’ ಮತ್ತು ‘ಅದರಂತೆ ನಡೆದುಕೊಳ್ಳುತ್ತೇವೆ’ ಎಂದು ಹೇಳಿದೆ.

ಹೀಗೆ ಒಂದು ಕಾಲದ ಶ್ರೀಮಂತ ಉದ್ಯಮಿ, ಹಾಲಿ ನಂಬರ್‌ ವನ್‌ ಕುಬೇರ ಮುಖೇಶ್‌ ಅಂಬಾನಿಯ ತಮ್ಮ, ರಫೇಲ್‌ ಡೀಲ್‌ನ ಕೇಂದ್ರ ಬಿಂದು ಅನಿಲ್‌ ಅಂಬಾನಿ ಜೈಲಿನ ಬಾಗಿಲಿನಲ್ಲಿ ಬಂದು ನಿಂತಿದ್ದಾರೆ.

ಚಿತ್ರ ಕೃಪೆ: ದಿ ಟೆಲಿಗ್ರಾಫ್‌

Also read: ಅಣ್ಣ ಟಾಪರ್‌; ತಮ್ಮ ಪಾಪರ್‌: 46,000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಅನಿಲ್‌ ಅಂಬಾನಿ!