samachara
www.samachara.com
ಬಿಡದಿ ಠಾಣೆಗೆ ಬಂಧಿತ ಶಾಸಕ ಜೆ.ಎನ್‌. ಗಣೇಶ್‌; ಹೇಳಿಕೆ ಪಡೆದ ಬಳಿಕ ನ್ಯಾಯಾಲಯಕ್ಕೆ
ಸುದ್ದಿ ಸಾರ

ಬಿಡದಿ ಠಾಣೆಗೆ ಬಂಧಿತ ಶಾಸಕ ಜೆ.ಎನ್‌. ಗಣೇಶ್‌; ಹೇಳಿಕೆ ಪಡೆದ ಬಳಿಕ ನ್ಯಾಯಾಲಯಕ್ಕೆ

ಬಿಡದಿ ಠಾಣೆಯಲ್ಲಿ ಹೇಳಿಕೆ ಪಡೆದ ಬಳಿಕ ವೈದ್ಯಕೀಯ ತಪಾಸಣೆ ನಡೆಸಿ ಗಣೇಶ್‌ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ.

ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ ಆರೋಪಿ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರನ್ನು ಪೊಲೀಸರು ಬುಧವಾರ ಗುಜರಾತ್‌ನ ಸೋಮನಾಥ್‌ದಲ್ಲಿ ಬಂಧಿಸಿ ಗುರುವಾರ ಬಿಡದಿಗೆ ಕರೆತಂದಿದ್ದಾರೆ.

ಗುಜರಾತ್‌ನ ಸೋಮನಾಥ್‌ನ ಸುಖ ಸಾಗರ್‌ ಹೋಟೆಲ್‌ನಲ್ಲಿ ತಂಗಿದ್ದ ಗಣೇಶ್‌ ಅವರನ್ನು ರಾಜ್ಯ ಪೊಲೀಸರ ತಂಡ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಂಧಿಸಿತ್ತು. ಗಣೇಶ್‌ ಬಂಧನಕ್ಕಾಗಿಯೇ ರಾಮನಗರ ಜಿಲ್ಲಾ ಪೊಲೀಸರು 12 ಮಂದಿ ಸಿಬ್ಬಂದಿಯ ಮೂರು ತಂಡವನ್ನು ರಚಿಸಿದ್ದರು.

ಖಚಿತ ಮಾಹಿತಿಯ ಆಧಾರದ ಮೇಲೆ ಸೋಮನಾಥ್‌ಗೆ ತೆರಳಿದ್ದ ಪೊಲೀಸರ ತಂಡಕ್ಕೆ ಗಣೇಶ್‌ ಸಿಕ್ಕಿಬಿದ್ದಿದ್ದಾರೆ. ಗುರುವಾರ ಬೆಳಿಗ್ಗೆ ವಿಮಾನದ ಮೂಲಕ ಗಣೇಶ್‌ ಅವರನ್ನು ಬೆಂಗಳೂರಿಗೆ ಕರೆತಂದ ಪೊಲೀಸರು ಬಳಿಕ ಪೊಲೀಸ್‌ ವಾಹನದಲ್ಲಿ ಬಿಡದಿ ಠಾಣೆಗೆ ಕರೆದೊಯ್ದರು.

ಬಿಡದಿ ಠಾಣೆಯಲ್ಲಿ ಗಣೇಶ್‌ ಅವರ ಹೇಳಿಕೆ ಪಡೆದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇಂದು ಗಣೇಶ್‌ ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದಿರಲು ಗಣೇಶ್‌ ಪರ ವಕೀಲರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಜನವರಿ 19ರ ರಾತ್ರಿ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ ಆರೋಪ ಗಣೇಶ್‌ ಮೇಲಿದೆ. ಆನಂದ್‌ ಸಿಂಗ್‌ ಮೇಲೆ ಗಂಭೀರ ಹಲ್ಲೆ ನಡೆಸಿದ್ದ ಕಾರಣಕ್ಕೆ ಕಾಂಗ್ರೆಸ್‌ ಪಕ್ಷದಿಂದ ಗಣೇಶ್‌ ಅವರನ್ನು ಅಮಾನತುಗೊಳಿಸಲಾಗಿತ್ತು. ಬಿಡದಿ ಠಾಣೆಯಲ್ಲಿ ಗಣೇಶ್‌ ವಿರುದ್ಧ ದೂರು ಕೂಡಾ ದಾಖಲಾಗಿತ್ತು.

ಜನವರಿ 20ರ ಘಟನೆಗೆ ಸಂಬಂಧಿಸಿದಂತೆ ಪಕ್ಷದ ಆಂತರಿಕ ತನಿಖೆ ನಡೆಸಲು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆದರೆ, ಘಟನೆ ನಂತರ ಗಣೇಶ್‌ ತಲೆಮರೆಸಿಕೊಂಡಿದ್ದರು.

Also read: ರೆಸಾರ್ಟ್‌ ರಾಜಕೀಯ ನಾಟಕದಲ್ಲಿ ಸ್ಟಂಟ್; ಗಣಿನಾಡ ‘ಜನಸೇವಕ’ರ ಮಾರಾಮಾರಿ?

ಕಳೆದ ತಿಂಗಳು ಆಪರೇಷನ್‌ ಕಮಲದ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್‌, ಜನವರಿ 18ರಂದು ಶಾಸಕಾಂಗ ಪಕ್ಷದ ಸಭೆಗೆ ಬಂದಿದ್ದ ಶಾಸಕರನ್ನು ಈಗಲ್‌ಟನ್‌ ರೆಸಾರ್ಟ್‌ಗೆ ಕರೆದುಕೊಂಡು ಹೋಗಿತ್ತು. ರೆಸಾರ್ಟ್‌ನಲ್ಲಿ ಜನವರಿ 19ರ ರಾತ್ರಿ ಶಾಸಕರಾದ ಆನಂದ್‌ ಸಿಂಗ್ ಮತ್ತು ಗಣೇಶ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿತ್ತು. ಈ ವೇಳೆ ಗಣೇಶ್‌, ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಆ ರಾತ್ರಿ ಗುಂಡಿನ ಮತ್ತಿನಲ್ಲಿದ್ದ ಶಾಸಕರು ಆಪರೇಷನ್‌ ಕಮಲ ಹಾಗೂ ಬಳ್ಳಾರಿ ಜಿಲ್ಲಾ ಮಿನರಲ್ ಫಂಡ್ ವಿಚಾರವಾಗಿ ಮಾತಿಗೆ ಮಾತು ಬೆಳೆಸಿ ಬಡಿದಾಡಿಕೊಂಡಿದ್ದರು ಎನ್ನಲಾಗಿತ್ತು. ಆದರೆ, ತಾವು ಹಲ್ಲೆ ನಡೆಸಿಲ್ಲ, ನೂಕಾಟದಲ್ಲಿ ಬಿದ್ದು ಆನಂದ್‌ ಸಿಂಗ್‌ ಅವರಿಗೆ ಗಾಯವಾಗಿದೆ ಎಂದು ಗಣೇಶ್‌ ಹೇಳಿದ್ದರು.

ಮಂಗಳವಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಗಣೇಶ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಮೇಶ್, “ಸಮ್ಮಿಶ್ರ ಸರ್ಕಾರದಲ್ಲಿ ಗಣೇಶ್ ಶಾಸಕರಾಗುತ್ತಾರೆ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಪೊಲೀಸರು ಗಣೇಶ್ ಅವರನ್ನು ಬಂಧಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.