samachara
www.samachara.com
‘ಯುದ್ಧ ಆರಂಭಿಸುವುದು ಸುಲಭ, ನಿಲ್ಲಿಸುವುದು ಕಷ್ಟ’: ಇಮ್ರಾನ್ ಖಾನ್
ಸುದ್ದಿ ಸಾರ

‘ಯುದ್ಧ ಆರಂಭಿಸುವುದು ಸುಲಭ, ನಿಲ್ಲಿಸುವುದು ಕಷ್ಟ’: ಇಮ್ರಾನ್ ಖಾನ್

“ನಾವು ಈಗ ಸ್ಥಿರತೆಯ ಕಡೆಗೆ ನಡೆಯುತ್ತಿದ್ದೇವೆ. ಪುಲ್ವಾಮ ಉಗ್ರರ ದಾಳಿಯಿಂದ ಪಾಕಿಸ್ತಾನಕ್ಕಾಗುವ ಲಾಭವಾದರೂ ಏನು?” ಎಂದಿದ್ದಾರೆ ಇಮ್ರಾನ್ ಖಾನ್.

“ಎಲ್ಲದಕ್ಕೂ ಯುದ್ಧವೇ ಪರಿಹಾರವಲ್ಲ. ಯುದ್ಧವನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ನಿಲ್ಲಿಸುವುದು ಬಹಳ ಕಷ್ಟ” ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಪುಲ್ವಾಮ ದಾಳಿಯ ಬಳಿಕ ಕೇಳಿಬರುತ್ತಿರುವ ಯುದ್ಧದ ಮಾತುಗಳಿಗೆ ಪ್ರತಿಕ್ರಿಯಿಸಿರುವ ಇಮ್ರಾನ್ ಖಾನ್‌, “ಯುದ್ಧದಿಂದ ಯಾರಿಗೂ ಪ್ರಯೋಜನವಿಲ್ಲ. ಯುದ್ಧದಿಂದಲೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಾಧ್ಯವಿಲ್ಲ. ಭಾರತ ಆಧಾರವಿಲ್ಲದ ಆರೋಪ ಮಾಡುವ ಮೊದಲು ಈ ಅಂಶಗಳನ್ನು ಅರಿತುಕೊಳ್ಳಬೇಕು” ಎಂದಿದ್ದಾರೆ.

“ನಾವು ಈಗ ಸ್ಥಿರತೆಯ ಕಡೆಗೆ ನಡೆಯುತ್ತಿದ್ದೇವೆ. ಭಾರತ ಇನ್ನೂ ಭೂತಕಾಲದಲ್ಲೇ ಬದುಕಲು ಬಯಸುತ್ತಿದೆಯೇ? ಯಾರೇ ನಮ್ಮೊಳಗೆ ಅಥವಾ ನಮ್ಮಲ್ಲಿಂದ ಅಲ್ಲಿಗೆ ಹೋಗಿ ಭಯೋತ್ಪಾದಕ ಕೃತ್ಯ ಎಸಗಲಿ ಎಂಬ ಉದ್ದೇಶ ನಮಗಿಲ್ಲ. ಹೀಗಿದ್ದೂ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿದರೆ ಆತ್ಮರಕ್ಷಣೆಗಾಗಿ ನಾವು ಪ್ರತಿದಾಳಿ ಮಾಡುವುದು ಅನಿವಾರ್ಯ” ಎಂದು ಹೇಳಿದ್ದಾರೆ.

“ಭಾರತವಾಗಲಿ, ಪಾಕಿಸ್ತಾನವಾಗಲಿ ಉಗ್ರವಾದ ಮಾಡುವುದನ್ನು ಸಹಿಸುವುದಿಲ್ಲ. ಪುಲ್ವಾಮದಲ್ಲಿ ಯೋಧರ ಮೇಲೆ ನಡೆದಿರುವ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಭಾರತ ಆರೋಪ ಹೊರಿಸುತ್ತಿದೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಇಂತಹ ದಾಳಿಯಿಂದಾಗಿ ಪಾಕಿಸ್ತಾನಕ್ಕಾಗುವ ಉಪಯೋಗವಾದರೂ ಏನು?” ಎಂದು ಪ್ರಶ್ನಿಸಿದ್ದಾರೆ.

“ಪಾಕಿಸ್ತಾನ ಸ್ಥಿರತೆಯ ಕಡೆಗೆ ಚಲಿಸುತ್ತಿದೆ. ಇಂತಹ ಸಂದರ್ಭದಲ್ಲಿ ದಾಳಿಗಳನ್ನು ನಡೆಸುವುದು ನಮಗೆ ಅನಗತ್ಯ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬುದಾದರೆ, ಭಾರತ ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಲಿ. ಈ ಕೃತ್ಯ ಎಸಗಿದಂಥವರು ಪಾಕಿಸ್ತಾನಕ್ಕೂ ವಿರೋಧಿಗಳೇ. ಪಾಕಿಸ್ತಾನ ಉಗ್ರರ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ” ಎಂದಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿದ್ದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಭಾರತದ ಮೇಲಿನ ಉಗ್ರರ ದಾಳಿಗೆ ಪಾಕಿಸ್ತಾನದ ನೆಲವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದರು. ಈಗ ಅದೇ ಮಾತನ್ನು ಪುನರುಚ್ಛರಿಸಿದ್ದಾರೆ.