samachara
www.samachara.com
ಜಾದವ್ ಶಿಕ್ಷೆ ರದ್ದಿಗೆ ಭಾರತದ ಮನವಿ; ICJ ತೀರ್ಪಿನವರೆಗೂ ಶಿಕ್ಷೆ ಜಾರಿಗೊಳಿಸುವಂತಿಲ್ಲ
ಸುದ್ದಿ ಸಾರ

ಜಾದವ್ ಶಿಕ್ಷೆ ರದ್ದಿಗೆ ಭಾರತದ ಮನವಿ; ICJ ತೀರ್ಪಿನವರೆಗೂ ಶಿಕ್ಷೆ ಜಾರಿಗೊಳಿಸುವಂತಿಲ್ಲ

ಜಾದವ್‌ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡುವವರೆಗೂ ಪಾಕಿಸ್ತಾನ ಶಿಕ್ಷೆಯನ್ನು ಜಾರಿಗೊಳಿಸಬಾರದು ಎಂದು ಐಸಿಜೆ ಹೇಳಿದೆ.

ಕುಲಭೂಷಣ್‌ ಜಾದವ್‌ ಪ್ರಕರಣದಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಭಾರತ ವಾದಿಸಿದೆ. ಐಸಿಜೆಯಲ್ಲಿ ಭಾರತದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ, ಪಾಕಿಸ್ತಾನ ಜಾದವ್‌ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಂತಿಮ ತೀರ್ಪು ನೀಡುವವರೆಗೂ ಪಾಕಿಸ್ತಾನ ಜಾದವ್‌ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಜಾರಿಗೊಳಿಸಬಾರದು ಎಂದು ಐಸಿಜೆ ಪಾಕಿಸ್ತಾನಕ್ಕೆ ನಿರ್ದೇಶನ ನೀಡಿದೆ. ಗೂಢಚರ್ಯೆ ಹಾಗೂ ಭಯೋತ್ಪಾದನೆ ಆರೋಪದ ಮೇಲೆ ಜಾದವ್‌ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ 2017ರ ಏಪ್ರಿಲ್‌ನಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಜಾದವ್‌ ಪ್ರಕರಣದಲ್ಲಿ ಭಾರತಕ್ಕೆ ನ್ಯಾಯ ಸಿಗಲಿದೆ ಎಂದು ದೇಶದ 103 ಕೋಟಿ ಜನರು ವಿಶ್ವಾಸ ಹೊಂದಿದ್ದಾರೆ ಎಂದು ಹರೀಶ್‌ ಸಾಳ್ವೆ ಹೇಳಿದ್ದಾರೆ. ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಹಾಗೂ ಜಾದವ್‌ಗೆ ವಿಧಿಸಿರುವ ಮರಣ ದಂಡನೆ ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂಬ ಎರಡು ಪ್ರಮುಖ ಅಂಶಗಳ ಮೇಲೆ ಸಾಳ್ವೆ 2 ಗಂಟೆಗೂ ಹೆಚ್ಚು ಕಾಲ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

Also read: ಐಸಿಜೆ ಮುಂದೆ ಕುಲಭೂಷಣ್ ಪ್ರಕರಣ: ಏನಿದು 'ಅಂತಾರಾಷ್ಟ್ರೀಯ ನ್ಯಾಯಾಲಯ'ದ ಹೂರಣ?

ಪಾಕಿಸ್ತಾನ ಈ ಪ್ರಕರಣವನ್ನು ಭಾರತದ ವಿರುದ್ಧದ ತನ್ನ ಪೂರ್ವಗ್ರಹಗಳನ್ನು ಹರಡಲು ಬಳಸಿಕೊಳ್ಳುತ್ತಿದೆ. ಈ ಪ್ರಕರಣದ ತೀರ್ಪನ್ನು ಬಹಿರಂಗಗೊಳಿಸಲು ಪಾಕಿಸ್ತಾನ ಹಿಂದೇಟು ಹಾಕುತ್ತಿದೆ. ಪಾಕಿಸ್ತಾನ ಸುಳ್ಳುಗಳ ಮೇಲೆ ಈ ಪ್ರಕರಣವನ್ನು ಕಟ್ಟಿದೆ ಎಂದಿದ್ದಾರೆ ಸಾಳ್ವೆ.

ಜಾದವ್‌ ಅವರಿಗೆ ರಾಜತಾಂತ್ರಿಕ ನೆರವು ನೀಡಲು ಅವಕಾಶ ಕೊಡಬೇಕೆಂದು ಭಾರತ 13 ಬಾರಿ ಪಾಕಿಸ್ತಾನಕ್ಕೆ ಮನವಿ ಮಾಡಿದೆ. ಆದರೆ, ಪಾಕಿಸ್ತಾನ ಈ ವಿಚಾರದಲ್ಲಿ ಸಂಕುಚಿತತೆ ತೋರುತ್ತಾ ಬಂದಿದೆ. ಜಾದವ್‌ ಅವರನ್ನು ಅಪಹರಿಸಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅವರ ವಿರುದ್ಧ ಆರೋಪ ಹೊರಿಸಿ, ನ್ಯಾಯಯುತ ವಿಚಾರಣೆಯೇ ಇಲ್ಲದೆ ತೀರ್ಪು ನೀಡಲಾಗಿದೆ ಎಂದು ಸಾಳ್ವೆ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಪಾಕಿಸ್ತಾನ ಜಾದವ್‌ ಪ್ರಕರಣದಲ್ಲಿ ವಿಯೆನ್ನಾ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಅಂತರರಾಷ್ಟ್ರೀಯ ಅಪರಾಧ ಪ್ರಕರಣಗಳಲ್ಲಿ ಆರೋಪಿಗೆ ರಾಜತಾಂತ್ರಿಕ ನೆರವು ನೀಡಲು ಅವಕಾಶ ಕೊಡಬೇಕು ಎಂದು ವಿಯೆನ್ನಾ ಒಪ್ಪಂದ ಹೇಳಿದೆ. ಆದರೆ, ಆ ಒಪ್ಪಂದದ ನಿಯಮಗಳನ್ನೆಲ್ಲಾ ಪಾಕಿಸ್ತಾನ ಗಾಳಿಗೆ ತೂರಿ ಜಾದವ್‌ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಪ್ರಕರಣದ ಅಂತಿಮ ತೀರ್ಪು ಬರುವವರೆಗೂ ಶಿಕ್ಷೆ ಜಾರಿಗೊಳಿಸಬಾರದು ಎಂದು ಸಾಳ್ವೆ ಮನವಿ ಮಾಡಿದ್ದಾರೆ.