samachara
www.samachara.com
ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ಸರಕಾರಕ್ಕೆ ಚುನಾವಣಾ ಆಯೋಗ ಅಂಕುಶ
ಸುದ್ದಿ ಸಾರ

ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ಸರಕಾರಕ್ಕೆ ಚುನಾವಣಾ ಆಯೋಗ ಅಂಕುಶ

ಯಾವುದೇ ಸರ್ಕಾರಿ ನೌಕರರ ವರ್ಗಾವಣೆ, ನಿಯೋಜನೆ, ಹೊಸ ನೇಮಕಾತಿ ಏನೇ ಇದ್ದರೂ ಫೆಬ್ರವರಿ 20ರ ಮೊದಲು ಮುಗಿಸುವಂತೆ ಚುನಾವಣಾ ಆಯೋಗ ರಾಜ್ಯ ಸರಕಾರಗಳಿಗೆ ಪತ್ರ ಬರೆದಿದೆ.

ಲೋಕಸಭಾ ಚುನಾವಣೆಗೂ ಮುನ್ನವೇ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆಯಕಟ್ಟಿನ ಜಾಗಗಳಿಗೆ 'ನಿಷ್ಟಾವಂತ'ರನ್ನು ನೇಮಿಸಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗದ ನಿಲುವು ನಿರಾಶೆಯನ್ನುಂಟು ಮಾಡಿದೆ.

ಸಾಮಾನ್ಯವಾಗಿ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಎನ್ನುವಾಗ ಸರ್ಕಾರಗಳು ತಮಗೆ ಬೇಕಾದ ಅಧಿಕಾರಿಗಳನ್ನು ಸೂಕ್ತ ಜಾಗಗಳಿಗೆ ನಿಯೋಜನೆ ಮಾಡುವುದು, ಇಲ್ಲವೇ ನಿಷ್ಠೆ ಇಲ್ಲದವರನ್ನು ಎತ್ತಂಗಡಿ ಮಾಡುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯ. ತಾವು ಹೇಳಿದ್ದನ್ನು ಕಾಯಾವಾಚಾ ಪಾಲಿಸುವವರಿದ್ದರೆ ಚುನಾವಣೆಯ ಸಂದರ್ಭದಲ್ಲಿ ಒಂದಷ್ಟು ಅನುಕೂಲವಾಗಬಹುದು ಎಂಬುದು ಇದರ ಹಿಂದಿನ ದೂರಾಲೋಚನೆ.

ಆದರೆ ಇದಕ್ಕೆ ಚುನಾವಣಾ ಆಯೋಗ ಬ್ರೇಕ್‌ ಹಾಕಿದೆ. ಯಾವುದೇ ಸರ್ಕಾರಿ ನೌಕರರ ವರ್ಗಾವಣೆ, ನಿಯೋಜನೆ, ಹೊಸ ನೇಮಕಾತಿ ಏನೇ ಇದ್ದರೂ ಫೆಬ್ರವರಿ 20ರ ಮೊದಲು ಮುಗಿಸುವಂತೆ ಚುನಾವಣಾ ಆಯೋಗ ರಾಜ್ಯ ಸರಕಾರಗಳಿಗೆ ಪತ್ರ ಬರೆದಿದೆ.

ಕೇಂದ್ರ ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ನರೇಂದ್ರ ಎನ್. ಬುಟಲಿಯಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್‌ಗೆ ಬರೆದ ಪತ್ರದಲ್ಲಿ ಲೋಕಸಭೆ ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಈ ಮೂಲಕ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.

ಜತೆಗೆ ಮಾರ್ಚ್ ತಿಂಗಳಿನಲ್ಲಿ ಬಹುತೇಕ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂಬ ಸುಳಿವನ್ನೂ ಅವರು ಬಿಟ್ಟುಕೊಟ್ಟಿದ್ದಾರೆ.

ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಚುನಾವಣಾ ಆಯೋಗ ಬರೆದಿರುವ ಪತ್ರ.
ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಚುನಾವಣಾ ಆಯೋಗ ಬರೆದಿರುವ ಪತ್ರ.

ಸೋಮವಾರ ಸಭೆ:

ಕೇಂದ್ರ ಚುನಾವಣಾ ಆಯೋಗ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿಗಳು, ಸಿಇಓ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಲೋಕಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳ ಬಗ್ಗೆ ಸಲಹೆಗಳನ್ನು ನೀಡಲಿದ್ದಾರೆ.

ಹೊಸದಾಗಿ ನೇಮಕಾತಿ ಆದೇಶ ಮಾಡಬಾರದು ಎಂದು ಚುನಾವಣಾ ಆಯೋಗ ಸೂಚಿಸಿರುವ ಹಿನ್ನೆಲೆಯಲ್ಲಿ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಜೆಡಿಎಸ್‍ನಲ್ಲಿ ಬಾಕಿ ಇದ್ದ ಕೆಲವು ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ತೀರ್ಮಾನಿಸಿದ್ದರು.

ಈ ಮೂಲಕ ಅಸಮಾಧಾನಗೊಂಡಿರುವ ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿ ಲೋಕಸಭೆ ಚುನಾವಣೆಯಲ್ಲಿ ಯಾವುದೇ ರೀತಿಯ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಒಗ್ಗಟ್ಟಿನ ಮೂಲಕ ಅತೀ ಹೆಚ್ಚು ಸ್ಥಾನ ಗಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು.

ಇದಕ್ಕೀಗ ಚುನಾವಣಾ ಆಯೋಗವೇ ಬ್ರೇಕ್ ಹಾಕಿರುವುದರಿಂದ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಶಾಸಕರ ಕನಸು ಮತ್ತಷ್ಟು ಮುಂದೆ ಹೋಗಿದೆ.