samachara
www.samachara.com
ಅರ್ಧದಲ್ಲೇ ಕೈಕೊಟ್ಟ ‘ವಂದೇ ಭಾರತ್‌’ ರೈಲು; ಫಾಸ್ಟೆಸ್ಟ್‌ ಎಕ್ಸ್‌ಪ್ರೆಸ್‌ನ 2ನೇ ದಿನದ ಕಥೆ ಇದು!
ಸುದ್ದಿ ಸಾರ

ಅರ್ಧದಲ್ಲೇ ಕೈಕೊಟ್ಟ ‘ವಂದೇ ಭಾರತ್‌’ ರೈಲು; ಫಾಸ್ಟೆಸ್ಟ್‌ ಎಕ್ಸ್‌ಪ್ರೆಸ್‌ನ 2ನೇ ದಿನದ ಕಥೆ ಇದು!

ತಾಂತ್ರಿಕ ದೋಷದ ಕಾರಣದಿಂದ ಈ ರೈಲು ಭಾನುವಾರವೂ ಓಡುತ್ತದೆಯೋ ಇಲ್ಲವೋ ಎಂಬ ಗೊಂದಲಗಳಿನ್ನೂ ಪರಿಹಾರವಾಗಿಲ್ಲ.

ರೈಲ್ವೆ ಸಚಿವರ ಟ್ವಿಟರ್‌ ಅಕೌಂಟ್‌ನಲ್ಲಿ ದುಪ್ಪಟ್ಟು ವೇಗದಲ್ಲಿ ಓಡಿ ಜಗತ್ತಿನ ಗಮನ ಸೆಳೆದಿದ್ದ 'ವಂದೇ ಭಾರತ್‌' ಎಕ್ಸ್‌ಪ್ರೆಸ್‌ ರೈಲು ಉದ್ಘಾಟನೆಗೊಂಡ ಮರುದಿನವೇ ಅರ್ಧದಾರಿಯಲ್ಲಿ ಕೈಕೊಟ್ಟಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಅತಿ ವೇಗದ ಎಕ್ಸ್‌ಪ್ರೆಸ್‌ ರೈಲಿಗೆ ಶುಕ್ರವಾರ ಹಸಿರು ಭಾವುಟ ಹಾರಿಸಿದ್ದರು. ಶುಕ್ರವಾರ ಲೋಕಾರ್ಪಣೆಗೊಂಡ ಈ ರೈಲು ಶನಿವಾರ ಬೆಳಿಗ್ಗೆ ದೆಹಲಿಯಿಂದ 200 ಕಿ.ಮೀ. ದೂರದಲ್ಲಿ ನಿಂತಿದೆ.

Also read: ಪಿಯೂಷ್‌ ಗೋಯಲ್ ಟ್ವೀಟ್‌ನಲ್ಲಿ ದುಪ್ಪಟ್ಟು ವೇಗದಲ್ಲಿ ಓಡಿದ ‘ವಂದೇ ಭಾರತ್‌’ ರೈಲು!

ಉದ್ಘಾಟನಾ ಕಾರ್ಯಕ್ರಮದ ಬಳಿಕ ಶುಕ್ರವಾರ ರಾತ್ರಿ 10.30ಕ್ಕೆ ವಾರಣಾಸಿಯಿಂದ ದೆಹಲಿಗೆ ಹೊರಟಿದ್ದ ಈ ರೈಲು ಶನಿವಾರ ಬೆಳಿಗ್ಗೆ ಉತ್ತರ ಪ್ರದೇಶದ ತಂಡ್ಲಾ ನಿಲ್ದಾಣದಿಂದ 15 ಕಿ.ಮೀ. ದೂರದಲ್ಲಿ ಕೆಟ್ಟು ನಿಂತಿದೆ. ಸುಮಾರು ಮೂರು ಗಂಟೆಗಳ ರಿಪೇರಿ ಬಳಿಕ ರೈಲು ಬೆಳಿಗ್ಗೆ 8.15ಕ್ಕೆ ತನ್ನ ಪ್ರಯಾಣ ಬೆಳೆಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

"ರೈಲಿನ ಕೆಲವು ಚಕ್ರಗಳು ಜರುಗಿವೆ. ರಾತ್ರಿ ರೈಲು ದನದ ಮೇಲೆ ಹರಿದಿರುವ ಸಾಧ್ಯತೆ ಇದೆ. ತಾಂತ್ರಿಕ ದೋಷಕ್ಕೆ ಇನ್ನೂ ನಿಖರ ಕಾರಣ ಗೊತ್ತಾಗಿಲ್ಲ. ಭಾನುವಾರದಿಂದ ಈ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಲಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಧಿಕಾರಿಗಳೇನೋ ನಾಳೆಯಿಂದ ವಾಣಿಜ್ಯ ಸಂಚಾರ ನಡೆಯಲಿದೆ ಎಂದಿದ್ದಾರೆ. ಆದರೆ, ತಾಂತ್ರಿಕ ದೋಷದ ಕಾರಣದಿಂದ ಈ ರೈಲು ಭಾನುವಾರವೂ ಓಡುತ್ತದೆಯೋ ಇಲ್ಲವೋ ಎಂಬ ಗೊಂದಲಗಳಿನ್ನೂ ಪರಿಹಾರವಾಗಿಲ್ಲ.