samachara
www.samachara.com
ಪಾಕ್‌ಗೆ ನೀಡಿದ್ದ ‘ಹೆಚ್ಚು ಅನುಕೂಲಕರ ರಾಷ್ಟ್ರ’ ಸ್ಥಾನವನ್ನು ಹಿಂಪಡೆದ ಭಾರತ: ಹಾಗೆಂದರೇನು? 
ಸುದ್ದಿ ಸಾರ

ಪಾಕ್‌ಗೆ ನೀಡಿದ್ದ ‘ಹೆಚ್ಚು ಅನುಕೂಲಕರ ರಾಷ್ಟ್ರ’ ಸ್ಥಾನವನ್ನು ಹಿಂಪಡೆದ ಭಾರತ: ಹಾಗೆಂದರೇನು? 

ಉಬಯ ರಾಷ್ಟ್ರಗಳ ವ್ಯಾಪಾರೀಕರಣದ ಕಾರಣಕ್ಕಾಗಿ ಭಾರತ 1996ರಲ್ಲಿ ಪಾಕಿಸ್ತಾನಕ್ಕೆ ‘ಹೆಚ್ಚು ಅನುಕೂಲಕರ ರಾಷ್ಟ್ರ’ ಎಂಬ ಸ್ಥಾನಮಾನ ನೀಡಿತ್ತು. ಆದರೆ ಪಾಕಿಸ್ತಾನ ಈವರೆಗೆ ಭಾರತಕ್ಕೆ ಇಂತಹ ಸ್ಥಾನಮಾನವನ್ನು ನೀಡಿರಲಿಲ್ಲ. 

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ಬಾಂಬ್ ದಾಳಿಯ ನಂತರ ಶುಕ್ರವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಭಾರತೀಯ ರಕ್ಷಣಾ ಇಲಾಖೆಯ ಅಧಿಕಾರಿಗಳ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಸರಕಾರ, ಪಾಕಿಸ್ತಾನಕ್ಕೆ ನೀಡಲಾಗಿದ್ದ 'ಹೆಚ್ಚು ಅನುಕೂಲಕರ ರಾಷ್ಟ್ರ’ ( Most Favoured Nation) ಎಂಬ ಮಾನ್ಯತೆಯನ್ನು ಹಿಂಪಡೆದಿದೆ.

ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಅರುಣ್ ಜೇಟ್ಲಿ, “ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೆಟ್ ಪಾಕಿಸ್ತಾನದಿಂದ ಸಂಪೂರ್ಣ ಪ್ರತ್ಯೇಕಗೊಳ್ಳುವ ರಾಜತಾಂತ್ರಿಕ ಹೆಜ್ಜೆಯನ್ನಿಡಲು ತೀರ್ಮಾನಿಸಿದೆ. ಇದರ ಭಾಗವಾಗಿ ಪಾಕಿಸ್ತಾನಕ್ಕೆ ನೀಡಿದ್ದ ಹೆಚ್ಚು ಅನುಕೂಲಕರ ರಾಷ್ಟ್ರ ಎಂಬ ಸ್ಥಾನಮಾನವನ್ನು ಹಿಂಪಡೆಯಲು ಭಾರತ ತೀರ್ಮಾನಿಸಿದೆ” ಎಂದಿದ್ದಾರೆ.

"ಗುರುವಾರದ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಪಾಕಿಸ್ತಾನದ ನೇರ ಕೈವಾಡ ಇರುವ ಕುರಿತು ಅಪ್ರಚಲಿತ ಸಾಕ್ಷ್ಯ(incontrovertible evidences) ಗಳಿವೆ. ಹೀಗಾಗಿ ಈ ದೇಶವನ್ನು ಅಂತಾರಾಷ್ಟ್ರೀಯ ಸಮುದಾಯದಿಂದ ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಾಜತಾಂತ್ರಿಕ ಹೆಜ್ಜೆಗಳನ್ನಿಡುತ್ತಿದೆ,” ಎಂದೂ ಅವರು ವಿವರಿಸಿದ್ದಾರೆ.

ಏನಿದು ಹೆಚ್ಚು ಅನುಕೂಲಕರ ರಾಷ್ಟ್ರ ಸ್ಥಾನಮಾನ?

ಅಂತಾರಾಷ್ಟ್ರೀಯ ವ್ಯಾಪಾರವನ್ನು ಮೇಲ್ವಿಚಾರಣೆ ನಡೆಸುವುದು ಡಬ್ಲ್ಯೂಟಿಒ (ವಿಶ್ವ ವ್ಯಾಪಾರ ಸಂಸ್ಥೆ). ತನ್ನ ಪಾಲುದಾರ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯವಿಲ್ಲದ, ಉತ್ತಮ-ಉದಾರೀಕರಣ ವ್ಯಾಪಾರ ನಡೆಯಲು ಹಾಗೂ ಅಂತಾರಾಷ್ಟ್ರೀಯ ವ್ಯಾಪಾರಿ ಪಾಲುದಾರರಿಗೆ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ 'ಹೆಚ್ಚು ಅನುಕೂಲಕರ ರಾಷ್ಟ್ರ' ಎಂಬ ನೀತಿಯನ್ನು ರೂಪಿಸಿದೆ. ವ್ಯಾಪಾರದಲ್ಲಿ ತೊಡಗುವ ಎರಡು ರಾಷ್ಟ್ರಗಳ ನಡುವಿನ ತೆರಿಗೆ ಹಾಗೂ ವ್ಯಾಪಾರ ವಹಿವಾಟು ಸೇರಿದಂತೆ ಅನೇಕ ವಿಚಾರಗಳು ಸುಗಮವಾಗಿ ಸಾಗಲು ಈ ನೀತಿ ಅನುಕೂಲ ಮಾಡಿಕೊಡುತ್ತದೆ.

ಉಬಯ ರಾಷ್ಟ್ರಗಳ ನಡುವಿನ ಸುಗಮ ವ್ಯಾಪಾರೀಕರಣದ ಕಾರಣಕ್ಕಾಗಿ ಭಾರತ 1996ರಲ್ಲಿ ಪಾಕಿಸ್ತಾನಕ್ಕೆ 'ಹೆಚ್ಚು ಅನುಕೂಲಕರ ರಾಷ್ಟ್ರ' ಎಂಬ ಸ್ಥಾನಮಾನವನ್ನು ನೀಡಿತ್ತು. ಆದರೆ ಇದೀಗ ಉಗ್ರಗಾಮಿಗಳ ಭೀಕರ ದಾಳಿ ಹಿನ್ನೆಲೆ ಈ ಸ್ಥಾನಮಾನವನ್ನು ಹಿಂಪಡೆದುಕೊಂಡಿದೆ. ಆದರೆ ಪಾಕಿಸ್ತಾನ ಈವರೆಗೆ ಭಾರತಕ್ಕೆ ಇಂತಹ ಒಂದು ಸ್ಥಾನಮಾನವನ್ನು ನೀಡಿರಲಿಲ್ಲ ಎಂಬುದು ಉಲ್ಲೇಖಾರ್ಹ.

ಈ ಹಿಂದೆಯೂ ಉಗ್ರಗಾಮಿ ಸಂಘಟನೆಗಳು ಭಾರತದಲ್ಲಿ ಸಾಕಷ್ಟು ವಿಧ್ವಂಸಕ ಕೃತ್ಯಗಳನ್ನು ಎಸಗಿವೆ. 2008 ರಲ್ಲಿ ಇದೇ ಪಾಕ್ ಬೆಂಬಲಿತ ಉಗ್ರ ಸಂಘಟನೆ ಜೈಷ್-ಎ-ಮೊಹಮದ್ ಮುಂಬೈ ತಾಜ್ ಹೋಟೆಲ್‌ ಮೇಲೆ ದಾಳಿ ನಡೆಸಿತ್ತು. ನೂರಾರು ಜನರ ಪ್ರಾಣಕ್ಕೆ ಕುತ್ತು ತಂದಿತ್ತು. 2016ರಲ್ಲಿ ಪಠಾಣ್ ಕೋಟ್‌ನ ಉರಿ ಸೇನಾ ನೆಲೆಯ ಮೇಲೂ ಇದೇ ಉಗ್ರ ಸಂಘಟನೆ ದಾಳಿ ನಡೆಸಿತ್ತು. ಆದರೆ ಆಗೆಲ್ಲ ಪಾಕಿಸ್ತಾನಕ್ಕೆ ನೀಡಿದ್ದ ಈ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ರದ್ದು ಮಾಡಿರಲಿಲ್ಲ ಎಂಬುದೂ ಗಮನಾರ್ಹ.

ಭಾರತ ಸರಕಾರ ಈ ನಡೆಯ ಪರಿಣಾಮಗಳೇನು ಎಂಬುದನ್ನು ಭವಿಷ್ಯದಲ್ಲಿ ಎರಡೂ ರಾಷ್ಟ್ರಗಳ ನಡುವೆ ನಡೆಯುವ ವಾಣಿಜ್ಯ ವಹಿವಾಟುಗಳ ಮೂಲಕವೇ ಅರ್ಥ ಮಾಡಿಕೊಳ್ಳಬೇಕಿದೆ.