samachara
www.samachara.com
‘ಹಣ ಪಡೆಯಲು ಬ್ಯಾಂಕ್‌ನವರಿಗೆ ಸೂಚಿಸಿ’: ಪ್ರಧಾನಿಗೇ ಟಾಂಗ್ ಕೊಟ್ಟ ಮಲ್ಯ
ಸುದ್ದಿ ಸಾರ

‘ಹಣ ಪಡೆಯಲು ಬ್ಯಾಂಕ್‌ನವರಿಗೆ ಸೂಚಿಸಿ’: ಪ್ರಧಾನಿಗೇ ಟಾಂಗ್ ಕೊಟ್ಟ ಮಲ್ಯ

ನಾನೇ ಹಣ ಕೊಡಲು ಮುಂದೆ ಬಂದರೂ ಬ್ಯಾಂಕ್‌ನವರು ಅದನ್ನು ಸ್ವೀಕರಿಸಲು ಸಿದ್ಧರಿಲ್ಲ. ನಾನು ನೀಡಬೇಕಾದ ಹಣ ನನ್ನ ಮೇಜಿನ ಮೇಲಿದೆ. ಈ ಹಣವನ್ನು ಪಡೆಯಲು ಬ್ಯಾಂಕ್‌ನವರಿಗೆ ಪ್ರಧಾನಿ ಮೋದಿ ಏಕೆ ಆದೇಶಿಸಬಾರದು ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

ಕಿಂಗ್ ಫಿಷರ್ ಏರ್‌ಲೈನ್ಸ್‌ಗೆ ಪಡೆದ ಹಣವನ್ನು ಹಿಂದಿರುಗಿಸಲು ನಾನು ಸಿದ್ಧನಿದ್ದೇನೆ, ಆದರೆ ಆ ಹಣವನ್ನು ಪಡೆಲು ಪ್ರಧಾನಿ ನರೇಂದ್ರ ಮೋದಿಯವರೇಕೆ ಬ್ಯಾಂಕ್‌ನವರಿಗೆ ಆದೇಶಿಸಬಾರದು ಎಂದು ಉದ್ಯಮಿ ವಿಜಯ್ ಮಲ್ಯ ಪ್ರಶ್ನಿಸಿದ್ದಾರೆ.

ಬುಧವಾರ ಸಂಸತ್‌ನಲ್ಲಿ ತಮ್ಮ ಕೊನೆಯ ಭಾಷಣದಲ್ಲಿ ಪ್ರಧಾನಿ ಮೋದಿ 9 ಸಾವಿರ ಕೋಟಿ ಲೂಟಿ ಮಾಡಿ ಓಡಿಹೋದವರು ಎಂದು ವಿಜಯ್ ಮಲ್ಯ ಹೆಸರನ್ನು ಉಲ್ಲೇಖಿಸದೆ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಸರಣಿ ಟ್ವೀಟ್‌ಗಳ ಮೂಲಕ ಮಲ್ಯ ಉತ್ತರ ನೀಡಿದ್ದಾರೆ.

"ಸಂಸತ್ತಿನಲ್ಲಿ ಮೋದಿ ಮಾಡಿದ ಭಾಷಣ ನನ್ನ ಗಮನ ಸೆಳೆಯಿತು. ಅವರು ಖಂಡಿತವಾಗಿಯೂ ಉತ್ತಮ ಮಾತುಗಾರ. ಆದರೆ ಸ್ವತಃ ನಾನೇ ಹಣ ಕೊಡಲು ಮುಂದೆ ಬಂದರೂ ಬ್ಯಾಂಕ್‌ನವರು ಅದನ್ನು ಸ್ವೀಕರಿಸಲು ಸಿದ್ಧರಿಲ್ಲ. ನಾನು ನೀಡಬೇಕಾದ ಹಣ ನನ್ನ ಮೇಜಿನ ಮೇಲಿದೆ. ಈ ಹಣವನ್ನು ಪಡೆಯಲು ಬ್ಯಾಂಕ್‌ನವರಿಗೆ ಪ್ರಧಾನಿ ಮೋದಿ ಏಕೆ ಆದೇಶಿಸಬಾರದು" ಎಂದು ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ನನ್ನ ಹಿಂದಿನ ಟ್ವೀಟ್‌ಗಳಿಗೆ ಅನುಸಾರವಾಗಿ ನಾನು ಹಣವನ್ನು ನೀಡಲು ಸಿದ್ದನಿದ್ದೇನೆ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಈ ಹಿಂದೆಯೇ ಗೌರವಯುತವಾಗಿ ತಿಳಿಸಿದ್ದೆ. ಕಿಂಗ್‌ ಫಿಷರ್ ಏರ್‌ಲೈನ್ಸ್‌ಗೆ ಸಾಲವಾಗಿ ನೀಡಿದ್ದ ಸಾರ್ವಜನಿಕ ಹಣವನ್ನು ಬ್ಯಾಂಕ್‌ನವರು ಸಂಪೂರ್ಣವಾಗಿ ಹಿಂಪಡೆಯಬಹುದಿತ್ತು. ಈ ಪ್ರಕರಣ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರುವ ಮುನ್ನವೇ ಈ ಕುರಿತು ಹೇಳಿದ್ದೆ, ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶ ನೀಡಿದ್ದೆ ಆದರೆ ಇದನ್ನು ಬ್ಯಾಂಕ್‌ನವರು ನಿರಾಕರಿಸಿದರು ಎಂದಿದ್ದಾರೆ.

ಮಾಧ್ಯಮಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಕೆಲವು ಮಾದ್ಯಮದವರು ನಾನು ಜಾರಿ ನಿರ್ದೇಶನಾಯಕ್ಕೆ ತಿಳಿಯದಂತೆ ನನ್ನ ಆಸ್ತಿಗಳನ್ನು ಮುಚ್ಚಿಟ್ಟಿದ್ದೇನೆ ಎಂದು ವರದಿ ಮಾಡುತ್ತಾರೆ. ನಾನು ನನ್ನ ಆಸ್ತಿಗಳನ್ನು ಮರೆಮಾಚುವುದಾದರೆ ನ್ಯಾಯಾಲಯದ ಎದುರು ನನ್ನ 14 ಸಾವಿರ ಕೋಟಿ ಮೌಲ್ಯದ ಆಸ್ತಿಗಳ ಮಾಹಿತಿಯನ್ನು ಏಕೆ ನೀಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, “ಮಾಧ್ಯಮಗಳು ಜನರನ್ನು ದಾರಿ ತಪ್ಪಿಸುತ್ತಿವೆ,” ಎಂದು ಕಿಡಿಕಾರಿದ್ದಾರೆ.

ದೇಶದ ವಿವಿಧ ಬ್ಯಾಂಕ್‌ಗಳಿಂದ 9 ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾದ ಪ್ರಕರಣ ವಿಜಯ್ ಮಲ್ಯ ಮೇಲಿದೆ. ಕಳೆದ ಜನವರಿ 2 ರಂದು ಇವರನ್ನು ನ್ಯಾಯಾಲಯ ಆರ್ಥಿಕ ಅಪರಾಧಿ ಎಂದು ಘೋಷಿಸಿತ್ತು. ಅಲ್ಲದೆ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಮಲ್ಯ ಅವರನ್ನು ಭಾರತಕ್ಕೆ ವಾಪಾಸ್ ಕರೆತರಲು ಜಾರಿ ನಿರ್ದೇಶನಾಯ ಪ್ರಯತ್ನಿಸುತ್ತಿದ್ದು, ಶೀಘ್ರದಲ್ಲೇ ಲಂಡನ್‌ ಕೋರ್ಟ್ ಇವರನ್ನು ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ.