samachara
www.samachara.com
‘ಆಪರೇಷನ್‌ ಆಡಿಯೋ’: ಬಜೆಟ್‌ ಅಧಿವೇಶನದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕರ್ನಾಟಕ...
ಸುದ್ದಿ ಸಾರ

‘ಆಪರೇಷನ್‌ ಆಡಿಯೋ’: ಬಜೆಟ್‌ ಅಧಿವೇಶನದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕರ್ನಾಟಕ...

ಮಂಗಳವಾರದವರೆ ಕಲಾಪದಲ್ಲಿ ನೆಲೆಸಿದ್ದ ಶಿಸ್ತು ಬುಧವಾರ ಮರೆಯಾಯಿತು. ಎಂದಿನ ಹಳಿಗೆ ಮರಳಿದ ಅಧಿವೇಶನದಲ್ಲಿ ವಿಪಕ್ಷಗಳ ಗದ್ದಲ ಆರಂಭಗೊಂಡಿತು.

Team Samachara

'ಆಪರೇಷನ್‌ ಆಡಿಯೋ'ದಿಂದ ಪಾರಾಗಲು ಬಿಜೆಪಿ ನಡೆಸಿದ ಗದ್ದಲದಿಂದಾಗಿ ಈ ಬಾರಿ ರಾಜ್ಯ ಬಜೆಟ್‌ ವಿಧಾನಮಂಡಲದ ಉಭಯ ಸದನಗಳಲ್ಲೂ ಚರ್ಚೆಯಿಲ್ಲದೆ ಅಂಗೀಕಾರ ಪಡೆದುಕೊಂಡಿದೆ.

ಗುರುವಾರ ಉಭಯ ಸದನಗಳು 2.34 ಲಕ್ಷ ಕೋಟಿ ರೂಪಾಯಿಗಳ ಬಜೆಟನ್ನು ಅಂಗೀಕರಿಸಿದ್ದು ಸದನಗಳನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಈ ಮೂಲಕ ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ಪಡೆದುಕೊಂಡ ಮೊದಲ ಬಜೆಟ್‌ ಎಂಬ ಇತಿಹಾಸ ಸೃಷ್ಟಿಸಿತು.

ಇದೆಲ್ಲಾ ನಡೆದಿದ್ದು ಹೀಗೆ:

ಫೆಬ್ರವರಿ 8ರಂದು ಬಜೆಟ್‍ ಮಂಡನೆಗೂ ಮುನ್ನವೇ ಸರ್ಕಾರ ಉರುಳಿಸಲು ಬಿಜೆಪಿ ನಡೆಸುತ್ತಿದ್ದ ಕಸರತ್ತು 'ಆಪರೇಷನ್‌ ಕಮಲ'ದ ಆಡಿಯೋ ಬಾಂಬ್‌ ಸಿಡಿಸಿ ಸದನಕ್ಕೆ ಬಂದಿದ್ದರು ಮುಖ್ಯಮಂತ್ರಿ ಕುಮಾರಸ್ವಾಮಿ. ಇದರಿಂದ ಬಚಾವಾಗಲು ಬಿಜೆಪಿ ಕಲಾಪದಲ್ಲಿ ನಿರಂತರ ಗದ್ದಲವೆಬ್ಬಿಸುವ ತಂತ್ರಕ್ಕೆ ಮೊರೆ ಹೋಯಿತು.

ವಿಪಕ್ಷಗಳ ಸಭಾತ್ಯಾಗದ ನಡುವೆ ಶುಕ್ರುವಾರ ಬಜೆಟ್‌ ಮಂಡನೆಯಾಯಿತು. ಶನಿವಾರ ಮತ್ತು ಭಾನುವಾರ ರಜೆ ಕಳೆದು ಸೋಮವಾರ ಕಲಾಪ ಆರಂಭಗೊಂಡಾಗ ರಾಜ್ಯಪಾಲರ ಭಾಷಣ ಹಾಗೂ ಬಜೆಟ್ ಮೇಲೆ ಚರ್ಚೆ ಆರಂಭಗೊಳ್ಳಬೇಕಿತ್ತು. ಆದರೆ ಸ್ಪೀಕರ್‌ ರಮೇಶ್‌ ಕುಮಾರ್ ಆಪರೇಷನ್‌ ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿದ್ದನ್ನು ಚರ್ಚೆಗೆ ಎತ್ತಿಕೊಂಡರು.

ಮುಂದಿನ ನಾಲ್ಕು ದಿನಗಳ ಕಾಲ ಭರಪೂರ ಪ್ರಹಸನಗಳಿಗೆ ವಿಧಾನಸಭೆಯ ಅಧಿವೇಶನ ಮತ್ತು ರಾಜ್ಯ ರಾಜಕಾರಣ ಸಾಕ್ಷಿಯಾಯಿತು. ಎರಡು ದಿನ ಸ್ಪೀಕರ್‌ ರಮೇಶ್‌ ಕುಮಾರ್‌ರನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ತನಿಖೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಯೋಚಿಸಿದರೆ, ಮೈತ್ರಿ ಪಕ್ಷಗಳು ಸಭಾಧ್ಯಕ್ಷರನ್ನೇ ಮುಂದಿಟ್ಟು ವಿಪಕ್ಷವನ್ನು ಹಣಿಯಲು ಹೊರಟವು.

ಹೀಗೆ ಎರಡು ದಿನ ವ್ಯರ್ಥವಾಯಿತು. ಮೂರನೇ ದಿನ ಅಂದರೆ ನಿನ್ನೆ ಬುಧವಾರ ಬೆಳ್ಳಂಬೆಳಗ್ಗೆ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಕಲಾಪದಲ್ಲಿ ನಡೆಯುತ್ತಿದ್ದ ರಂಪಾಟವನ್ನು ಜೆಡಿಎಸ್‌ ಕಾರ್ಯಕರ್ತರು ಬೀದಿಗೆ ತಂದರು. ಅಲ್ಲಿಗೆ ಈ ಬಾರಿಗೆ ಬಜೆಟ್‌ ಮೇಲಿನ ಚರ್ಚೆಗೆ ಕೊನೆಯ ಮೊಳೆ ಬಡಿಯಲಾಯಿತು.

ಹೀಗಾಗಿ ಮಂಗಳವಾರದವರೆ ಕಲಾಪದಲ್ಲಿ ನೆಲೆಸಿದ್ದ ಶಿಸ್ತು ಬುಧವಾರ ಮರೆಯಾಯಿತು. ಎಂದಿನ ಹಳಿಗೆ ಮರಳಿದ ಅಧಿವೇಶನದಲ್ಲಿ ವಿಪಕ್ಷಗಳ ಗದ್ದಲ ಆರಂಭಗೊಂಡಿತು. ಇದರ ನಡುವೆಯೂ ಬುಧವಾರ ಎಂಟು ಮಸೂದೆಗಳನ್ನು ಸದನದಲ್ಲಿ ಮಂಡಿಸಿ ಅದಕ್ಕೆ ಅಂಗೀಕಾರ ಪಡೆದುಕೊಳ್ಳಲಾಯಿತು.

ನಂತರ ಗದ್ದಲದಿಂದಾಗಿ ಅಧಿವೇಶನವನ್ನು ಗುರುವಾರಕ್ಕೆ ಮುಂದೂಡಲಾಯಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯು ಅಂಗೀಕರಿಸಲು, ಬಜೆಟ್‍ಗೆ ಅನುಮೋದನೆ ಪಡೆದುಕೊಳ್ಳಲು ಈ ಕಲಾಪವನ್ನು ಮೀಸಲಿಡಲಾಗಿತ್ತು. ಆದರೆ ಪ್ರೀತಂ ಗೌಡ ಮನೆ ಮೇಲಿನ ದಾಳಿ ಇಂದೂ ಸದನದಲ್ಲಿ ಪ್ರಸ್ತಾಪವಾಯಿತು.

ಕಲಾಪ ಆರಂಭವಾಗುತ್ತಲೇ ವಿಷಯ ಪ್ರಸ್ತಾಪಿಸಿದ ಬಿಜೆಪಿ ನಾಯಕರು ಭಾರೀ ಕೋಲಾಹಲ ಎಬ್ಬಿಸಿದರು. ಈ ಹಂತದಲ್ಲಿ ಸಭಾಧ್ಯಕ್ಷರು ಮಧ್ಯೆ ಪ್ರವೇಶಿಸಿ, ಶಾಸಕ ಪ್ರೀತಂಗೌಡರಿಗೆ ಸಕಲ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದರೂ, ಬಿಜೆಪಿ ಸದಸ್ಯರು ಮಾತ್ರ ಗಲಾಟೆ ಮುಂದುವರಿಸಿದರು.

ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈ ಮೀರಿದೆ ಎಂಬುದನ್ನು ಅರಿತ ಸ್ಪೀಕರ್ ರಮೇಶ್ ಕುಮಾರ್ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಧ್ವನಿಮತಕ್ಕೆ ಹಾಕುವ ಮೂಲಕ ಅಂಗೀಕಾರ ಪಡೆದುಕೊಂಡರು. ಹಾಗೆಯೇ ಬಜೆಟ್‌ಗೂ ಧ್ವನಿಮತದ ಮೂಲವೇ ಅಂಗೀಕಾರ ಪಡೆದುಕೊಳ್ಳಲಾಯಿತು.

ಇದೇ ರೀತಿ ವಿಧಾನ ಪರಿಷತ್ತಿನಲ್ಲಿಯೂ ವಂದನಾ ನಿರ್ಣಯ, ಬಜೆಟ್‍ಗೆ ಧ್ವನಿ ಮತದ ಮೂಲಕ ಅನುಮೋದನೆ ಪಡೆದುಕೊಂಡು ಸದನವನ್ನು ಮಧ್ಯಾಹ್ನದ ನಂತರದ ಅವಧಿಗೆ ಮುಂದೂಡಲಾಯಿತು.

ಊಟದ ವಿರಾಮದ ನಂತರ ಸದನ ಮತ್ತೆ ಸೇರಿದಾಗ ಬಿಜೆಪಿ ಶಾಸಕರ ಗದ್ದಲ ಮತ್ತೆ ಆರಂಭವಾಯಿತು. ಈ ಹಂತದಲ್ಲಿ ವಿಧಾನಸಭೆ ಸಭಾಧ್ಯಕ್ಷರಾದ ರಮೇಶ್‌ ಕುಮಾರ್‌ ಮತ್ತು ವಿಧಾನ ಪರಿಷತ್‌ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡುವ ತೀರ್ಮಾನ ತೆಗೆದುಕೊಂಡರು. ಹೀಗೆ ಚರ್ಚೆಯಲ್ಲಿದೆ ಬಜೆಟ್‌ ಅಂಗೀಕಾರ ಪಡೆದುಕೊಂಡ ಹೊಸ ಇತಿಹಾಸಕ್ಕೆ ಕರ್ನಾಟಕ ಸಾಕ್ಷಿಯಾಯಿತು.

ಇದುವರೆಗಿನ ಇತಿಹಾಸದಲ್ಲಿ ಬಜೆಟ್ ಮಂಡನೆಯಾದ ನಂತರ ನಡೆಯುತ್ತಿದ್ದ ಚರ್ಚೆಯಲ್ಲಿ ಪ್ರತಿಪಕ್ಷಗಳು ಭಾಗವಹಿಸುತ್ತಿದ್ದವು. ತದನಂತರ ಒಂದೊಮ್ಮೆ ಮುಖ್ಯಮಂತ್ರಿಗಳು ನೀಡುವ ಉತ್ತರ ಸಮಾಧಾನ ತರದಿದ್ದರೆ ಅದನ್ನು ವಿರೋಧಿಸಿ ಸಭಾತ್ಯಾಗ ಮಾಡುತ್ತಿದ್ದವು. ಹೀಗೆ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ ನಂತರ ಬಜೆಟ್‍ನ್ನು ಅಂಗೀಕರಿಸುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ಸಂಪ್ರದಾಯವೇ ಆಗಿತ್ತು. ಆದರೆ ಈ ಅಘೋಷಿತ ಸಂಪ್ರದಾಯವನ್ನೂ ಮುರಿದು ಈ ಬಾರಿ ವಿಧಾನ ಮಂಡಲ ಅಧಿವೇಶನ ಒಂದು ಹೆಜ್ಜೆ ಮುಂದಿಟ್ಟಿದೆ.