samachara
www.samachara.com
ದೆಹಲಿ ಹೋಟೆಲ್‌ನಲ್ಲಿ ಅಗ್ನಿ ದುರಂತ; ಮಗು ಸೇರಿ 17 ಜನರ ಸಾವು
ಸುದ್ದಿ ಸಾರ

ದೆಹಲಿ ಹೋಟೆಲ್‌ನಲ್ಲಿ ಅಗ್ನಿ ದುರಂತ; ಮಗು ಸೇರಿ 17 ಜನರ ಸಾವು

ಹೋಟೆಲ್ ಮಾಲೀಕರ ಅಜಾಗರೂಕತೆಯೇ ಈ ದುರಂತಕ್ಕೆ ಕಾರಣ ಎಂದು ದೂಷಿಸಿರುವ ದೆಹಲಿ ಸಚಿವ ಸತ್ಯೇಂದರ್ ಜೈನ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ದೆಹಲಿಯ ಕರೋಲ್ ಭಾಗ್‌ನಲ್ಲಿರುವ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡ ಬೆಂಕಿ ಮಹಿಳೆ, ಮಗು ಸೇರಿ 17 ಜನರನ್ನು ಬಲಿ ಪಡೆದಿದೆ.

ಇಂದು ಬೆಳಗ್ಗಿನ ಜಾವ 4 ಗಂಟೆಗೆ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಪೂರ್ತಿ ಹೋಟೆಲ್‌ಗೆ ವ್ಯಾಪಿಸಿದ ಬೆಂಕಿಯಲ್ಲಿ ಹಲವರು ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಮಹಿಳೆ ಹಾಗೂ ಮಗು ಕಿಟಕಿಯಿಂದ ಹೊರಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.

ಹೋಟೆಲ್‌ನ 4 ಹಾಗೂ 5 ನೇ ಫ್ಲೋರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಎರಡು ಡಜನ್‌ಗೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಜಮಾಯಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಈ ಎರಡು ಮಹಡಿಗಳಲ್ಲಿ ಒಟ್ಟು 65 ಕೊಠಡಿಗಳಿದ್ದು ಅಗ್ನಿ ದುರಂತದ ಸಂದರ್ಭದಲ್ಲಿ ಸುಮಾರು 150 ಕ್ಕೂ ಹೆಚ್ಚು ಜನರು ಒಳಗೆ ಸಿಲುಕಿದ್ದರು. ಇವರಲ್ಲಿ ಹೆಚ್ಚಿನವರು ಅವರಾಗಿಯೇ ಓಡಿಬಂದರೆ ಇನ್ನುಳಿದ ಕೆಲವರನ್ನು ಈಗ ರಕ್ಷಣೆ ಮಾಡಲಾಗಿದೆ.

ಹೋಟೆಲ್‌ನಲ್ಲಿ ಉಂಟಾದ ಅಗ್ನಿ ಅವಘಡವನ್ನು ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ಮಾಡಲಾಗಿದ್ದು ಹೋಟೆಲ್‌ನ ಟೆರೇಸ್‌ನಲ್ಲಿ ಭಾರೀ ಪ್ರಮಾಣದ ಬೆಂಕಿಯ ಜ್ವಾಲೆಯ ದೃಶ್ಯಗಳು ಸೆರೆಯಾಗಿವೆ. ಬೆಂಕಿಯ ಕೆನ್ನಾಲಿಗೆಯಿಂದ ಪಾರಾಗಲು ಓರ್ವ ವ್ಯಕ್ತಿ ಟೆರೇಸ್‌ನಿಂದ ಜಿಗಿಯಲು ಪ್ರಯತ್ನಿಸುತ್ತಿರುವುದು ದುರಂತದ ತೀವ್ರತೆಗೆ ಸಾಕ್ಷಿಯಾಗಿದೆ.

7 ಗಂಟೆಯ ಸುಮಾರಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, 35 ಜನರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತಪಟ್ಟವರಲ್ಲಿ ಬಹುಪಾಲು ಜನ ಹೊಗೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಈ ಹೋಟೆಲ್‌ನಲ್ಲಿ ತಂಗಿದ್ದವರಲ್ಲಿ ಬಹುಪಾಲು ಮ್ಯಾನ್ಮಾರ್ ಗೆ ಸೇರಿದವರಾಗಿದ್ದು ಶುಭ ಕಾರ್ಯಕ್ಕಾಗಿ ನಗರಕ್ಕೆ ಆಗಮಿಸಿದ್ದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು. ಇವರು ಈ ಎರಡು ಮಹಡಿಗಳಲ್ಲಿ 35 ಕೊಠಡಿಗಳನ್ನು ಬುಕ್ ಮಾಡಿದ್ದರು ಎಂದು ತಿಳಿದುಬಂದಿದೆ.

ಹೋಟೆಲ್ ಮಾಲೀಕರ ಅಜಾಗರೂಕತೆಯೇ ಈ ದುರಂತಕ್ಕೆ ಕಾರಣ ಎಂದು ದೂಷಿಸಿರುವ ದೆಹಲಿ ಸಚಿವ ಸತ್ಯೇಂದರ್ ಜೈನ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಮಧ್ಯ ದೆಹಲಿಯ ಕರೋಲ್ ಭಾಗ್ ಕಡಿಮೆ ಬೆಲೆಯ ಹೋಟೆಲ್‌ಗಳಿಗೆ ಜನಪ್ರಿಯವಾಗಿದ್ದು, ಪ್ರವಾಸಿಗರು ಉಳಿದುಕೊಳ್ಳುವ ಮೆಚ್ಚಿನ ತಾಣವಾಗಿ ಬದಲಾಗಿದೆ. ಈ ಭಾಗದಲ್ಲೇ ಅಗ್ನಿ ದುರಂತ ಸಂಭವಿಸಿರುವುದು ಪ್ರವಾಸಿಗರನ್ನು ಭಯಭೀತಿಗೊಳಿಸಿದೆ

ದೆಹಲಿಯ ಕಟ್ಟಡಗಳ ಗುಣಮಟ್ಟ ಪರಿಶೀಲನೆ ಹಾಗೂ ಅಗ್ನಿ ಸುರಕ್ಷತೆಯ ಕ್ರಮಗಳನ್ನು ಜಾರಿಗೆ ತರಲು ಅಧಿಕಾರಿಗಳು ಆಗಿಂದಾಗ್ಗೆ ನಗರದ ಕಟ್ಟಡಗಳ ಮೇಲೆ ದಾಳಿ ನಡೆಸುತ್ತಿರುತ್ತಾರೆ. ಆದರೆ ಮಧ್ಯ ದೆಹಲಿಯಲ್ಲೇ ಕಟ್ಟಡಗಳ ಈ ಹಂತದ ಅತಿರೇಕದ ಕಾನೂನು ಉಲ್ಲಂಘನೆಯನ್ನು ಪರಿಶೀಲಿಸಲು ಅಧಿಕಾರಿಗಳು ವಿಫಲವಾಗಿರುವುದು ದುರಂತವೇ ಸರಿ.

ಕಳೆದ ವಾರ ನೋಯ್ಡಾದ ಆಸ್ಪತ್ರೆಯೊಂದರಲ್ಲೂ ಹೀಗೆ ಅಗ್ನಿ ದುರಂತವಾಗಿತ್ತು. ಈ ಸಂದರ್ಭದಲ್ಲಿ ತುರ್ತಾಗಿ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ.