samachara
www.samachara.com
2019ರಲ್ಲೂ ಮೋದಿಯೇ  ಪ್ರಧಾನಿ ಅಭ್ಯರ್ಥಿ: ಅಮಿತ್ ಶಾ
ಸುದ್ದಿ ಸಾರ

2019ರಲ್ಲೂ ಮೋದಿಯೇ ಪ್ರಧಾನಿ ಅಭ್ಯರ್ಥಿ: ಅಮಿತ್ ಶಾ

ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಸುಳಿದಾಡುತ್ತಿರುವಾಗಲೆ ಅಮಿತ್ ಶಾ ಅವರ ಈ ಹೇಳಿಕೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

Team Samachara

ಮುಂದಿನ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿಯೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಘೋಷಿಸಿದ್ದಾರೆ.

ಮಂಗಳವಾರ ಅಹಮದಾಬಾದ್‌ನಲ್ಲಿ 'ಮೇರಾ ಪರಿವಾರ್, ಬಿಜೆಪಿ ಪರಿವಾರ್' ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿಗೆ ಈಗಲೂ ದೇಶದಾದ್ಯಂತ ಭಾರೀ ಜನ ಬೆಂಬಲವಿದೆ. ಈ ಬಾರಿಯೂ ಅವರೇ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದ ಅಮಿತ್ ಶಾ, ನಮ್ಮ ವಿರುದ್ಧ ಮಹಾ ಘಟ್ಬಂಧನ ರಚಿಸಿರುವ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರು?" ಎಂದು ಗೇಲಿ ಮಾಡಿದರು.

ಪ್ರತಿಪಕ್ಷಗಳ ಒಗ್ಗಟ್ಟಿನ ವಿರುದ್ಧ ವಾಕ್ಪ್ರಾಹಾರ ನಡೆಸಿದ ಶಾ, "ವಿರೋಧ ಪಕ್ಷಗಳ ಮಹಾ ಮೈತ್ರಿಯಲ್ಲಿ ರಾಜ್ಯ ಮಟ್ಟದ ನಾಯಕರಷ್ಟೇ ಇದ್ದಾರೆ. ಇವರ ಉಪಸ್ಥಿತಿ ಯಾವುದೇ ಕಾರಣಕ್ಕೂ ಬಿಜೆಪಿಯ ಮೇಲೆ ಪರಿಣಾಮ ಬೀರದು. ಕೆಲವು ಬಿಜೆಪಿ ಕಾರ್ಯಕರ್ತರು ನನಗೆ ಕರೆ ಮಾಡಿ ಮಹಾ ಘಟ್ಬಂಧನ್ ಬಗ್ಗೆ ವಿಚಾರಿಸುತ್ತಾರೆ. ಭಯವನ್ನು ತೋಡಿಕೊಳ್ಳುತ್ತಾರೆ. ಆದರೆ ಆ ಕುರಿತ ಭಯವನ್ನು ನಿಮ್ಮ ತಲೆಯಿಂದ ತೆಗೆದುಹಾಕಿ ಎಂದಷ್ಟೇ ನಾನು ಅವರಿಗೆ ಸಲಹೆ ನೀಡುತ್ತೇನೆ' ಎಂದಿದ್ದಾರೆ.

ನಾನು ಇಡೀ ದೇಶವನ್ನು ಸುತ್ತುತ್ತಿದ್ದೇನೆ. ದೇಶದ ಜನ ಪ್ರಧಾನಿ ನರೇಂದ್ರ ಮೋದಿಯ ಜೊತೆಗೆ ಕಲ್ಲಿನಂತೆ ನಿಂತಿದ್ದಾರೆ. ಅವರು ನಮಗೆ ನೀಡುತ್ತಿರುವ ಬೆಂಬಲ ಅವರ ಕಣ್ಣಲ್ಲಿ ಗೋಚರಿಸುತ್ತಿದೆ. ಅಲ್ಲದೆ ಪಶ್ಚಿಮ ಬಂಗಾಲ ಹಾಗೂ ಒಡಿಸ್ಸಾದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಉತ್ತರ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಒಂದು ಸ್ಥಾನವನ್ನು ಪಕ್ಷ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಅಮಿತ್ ಶಾ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಸುಳಿದಾಡುತ್ತಿರುವಾಗಲೆ ಅಮಿತ್ ಶಾ ಅವರ ಈ ಹೇಳಿಕೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮೇರಾ ಪರಿವಾರ್ ಭಾಜಪ ಪರಿವಾರ್ ಪ್ರಚಾರದಲ್ಲಿ ಮಾರ್ಚ್ 2 ರವರೆಗೆ ಐದು ಕೋಟಿ ಮನೆಗಳಲ್ಲಿ ಬಿಜೆಪಿ ತನ್ನ ಪಕ್ಷದ ಧ್ವಜವನ್ನು ಹಾರಿಸಬೇಕು ಎಂಬ ಯೋಜನೆ ರೂಪಿಸಿದೆ. ಲೋಕಸಭೆಗೆ ಪಕ್ಷ ನಡೆಸುತ್ತಿರುವ ತಯಾರಿಗಳ ಭಾಗವಾಗಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.