samachara
www.samachara.com
ಪಿಯೂಷ್‌ ಗೋಯಲ್ ಟ್ವೀಟ್‌ನಲ್ಲಿ ದುಪ್ಪಟ್ಟು ವೇಗದಲ್ಲಿ ಓಡಿದ ‘ವಂದೇ ಭಾರತ್‌’ ರೈಲು!
ಸುದ್ದಿ ಸಾರ

ಪಿಯೂಷ್‌ ಗೋಯಲ್ ಟ್ವೀಟ್‌ನಲ್ಲಿ ದುಪ್ಪಟ್ಟು ವೇಗದಲ್ಲಿ ಓಡಿದ ‘ವಂದೇ ಭಾರತ್‌’ ರೈಲು!

ಹರಿಯಾಣದ ಅಸೋತಿ ರೈಲು ನಿಲ್ದಾಣದಲ್ಲಿ ಚಿತ್ರೀಕರಿಸಿರುವ ಮೂಲ ವಿಡಿಯೊದ ಎಡಿಟೆಡ್‌ ವಿಡಿಯೊವನ್ನು ಪಿಯೂಷ್‌ ಗೋಯಲ್ ಟ್ವೀಟ್ ಮಾಡಿದ್ದಾರೆ.

Team Samachara

ರೈಲ್ವೆ ಸಚಿವ ಪಿಯೂಷ್‌ ಗೋಯಲ್ ಟ್ವೀಟ್‌ ಮಾಡಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ವಿಡಿಯೊ ಈಗ ನಗೆಪಾಟಲಿಗೆ ಈಡಾಗಿದೆ. ರೈಲು ನೈಜ ವೇಗಕ್ಕಿಂತ ದುಪ್ಪಟ್ಟು ವೇಗದಲ್ಲಿ ಓಡಿರುವ ವಿಡಿಯೊ ಇದಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಬಳಸಿಕೊಂಡು ಹಲವರು ಗೋಯಲ್‌ ಅವರ ಕಾಲೆಳೆದಿದ್ದಾರೆ.

ಮೇಕ್‌ ಇನ್ ಇಂಡಿಯಾ ಘೋಷಣೆಯ ಅಡಿಯಲ್ಲಿ ಸೆಮಿ-ಹೈ ಸ್ಪೀಡ್‌ ರೈಲು ಸೇವೆಗೆ ಸಿದ್ಧವಾಗಿದ್ದು, ಈ ಎಕ್ಸ್‌ಪ್ರಸ್‌ ರೈಲಿಗೆ ವಂದೇ ಭಾರತ್ ಎಂದು ನಾಮಕರಣ ಮಾಡಲಾಗಿದೆ. ಫೆಬ್ರವರಿ 15 ರಂದು ಪ್ರಧಾನಿ ಈ ರೈಲು ಸೇವೆಯನ್ನು ಉದ್ಘಾಟಿಸಲಿದ್ದಾರೆ.

ಯೂಟ್ಯೂಬ್‌ನಲ್ಲಿ ರೈಲು ಪ್ರಯಾಣವನ್ನು ಇಷ್ಟಪಡುವವರಿಗಾಗಿ ‘ದಿ ರೈಲ್ ಮೇಲ್’ ಎಂಬ ಒಂದು ಚಾನಲ್‌ ಇದೆ. ಆ ಚಾನಲ್‌ನಲ್ಲಿ ವಿವಿಧ ರೈಲಿಗಳ ಪ್ರಯಾಣ ಹಾಗೂ ರೈಲಿನ ವಿನ್ಯಾಸದ ಕುರಿತು ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದು ವಾಡಿಕೆ.

2018ರ ಡಿಸೆಂಬರ್ 30 ರಂದು ಈ ಯೂಟ್ಯೂಬ್ ಚಾನೆಲ್‌ ಹಾಗೂ ಫೇಸ್‌ಬುಕ್‌ನಲ್ಲಿ ವಂದೇ ಭಾರತ್‌ ರೈಲಿನ ವಿಡಿಯೊ ಅಪ್‌ಲೋಡ್‌ ಮಾಡಲಾಗಿತ್ತು. ಈ ವಿಡಿಯೋವನ್ನು ಎಡಿಟ್‌ ಮಾಡಿ ರೈಲು ಎರಡು ಪಟ್ಟು ಹೆಚ್ಚು ವೇಗದಲ್ಲಿ ಓಡುವಂತೆ ಮಾಡಲಾಗಿದೆ. ಈ ಎಡಿಟೆಡ್‌ ವಿಡಿಯೋ ಅನ್ನು ಟ್ವೀಟ್‌ ಮಾಡುವ ಮೂಲಕ ಗೋಯಲ್‌ ಮುಜುಗರಕ್ಕೆ ಒಳಗಾಗಿದ್ದಾರೆ.

ಹರಿಯಾಣದ ಅಸೋತಿ ರೈಲು ನಿಲ್ದಾಣದಲ್ಲಿ ಚಿತ್ರೀಕರಿಸಿರುವ ಈ ವಿಡಿಯೋದಲ್ಲಿರುವ ವಾಟರ್ ಮಾರ್ಕ್‌ ಸಹಿತ ರೈಲ್ವೆ ಸಚಿವ ಪಿಯೂಶ್ ಗೋಯಲ್ ತಮ್ಮ ಖಾತೆಯಲ್ಲಿ ಬಳಸಿಕೊಂಡಿದ್ದಾರೆ. ಅಲ್ಲದೆ, “ಇದು ಹಕ್ಕಿ, ಇದು ಪ್ಲೇನ್, ಮೇಕ್‌ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಿಸಲಾದ ಮೊದಲ ಸೆಮಿ-ಹೈಸ್ಲೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್” ಎಂದು ಬರೆದುಕೊಂಡಿದ್ದಾರೆ ಗೋಯಲ್.

ಬಿಜೆಪಿಯ ಹಲವು ನಾಯಕರೂ ಈ ವಿಡಿಯೋವನ್ನು ರೀ ಟ್ವೀಟ್ ಮಾಡಿದ್ದಾರೆ. ಹಲವರು ಇದರ ನಿಜವಾದ ವಿಡಿಯೋವನ್ನು ಗೋಯಲ್‌ ಟ್ವೀಟ್‌ಗೆ ರಿಪ್ಲೇ ಮಾಡಿದ್ದಾರೆ.

ಗೋಯಲ್ ವಿಡಿಯೋ ಟ್ವೀಟ್ ಬಗ್ಗೆ ಕಾಲೆಳೆದಿರುವ ಕಾಂಗ್ರೆಸ್ ನಾಯಕಿ ಖುಶ್ಬೂ ಸುಂದರ್, “ಗೋಯಲ್ ಅವರೇ, ಇದು ಡಿಜಿಟಲ್ ಇಂಡಿಯಾ, ಇದು ರಾಜೀವ್ ಗಾಂಧಿ ಅವರ ಕನಸು. ನೀವು ವಿಡಿಯೋದಲ್ಲಿನ ಫ್ರೇಮ್‌ಗಳ ವೇಗವನ್ನು ಹೆಚ್ಚಿಸಿದರೆ ಗೊತ್ತಾಗದೆ ಇರುತ್ತದೆಯೇ. ತುಂಬಾ ಕಷ್ಟ ಪಡಬೇಡಿ. ಸತ್ಯ ಎಂಬ ಎಂಬುದು ನಿಮ್ಮ ಕಪ್‌ನ ಚಹಾ ಅಲ್ಲ. ಪ್ರಧಾನಿಗೆ ಇದು ಗೊತ್ತಿಲ್ಲದೆ ಏನಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಅನೇಕರು, “ಬಿಜೆಪಿ ನಿಮ್ಮ ಇಂತಹ ಜುಮ್ಲಾಗಳನ್ನು ನಿಲ್ಲಿಸಿ. ಈ ವಿಡಿಯೋದಲ್ಲಿ ಎಡಿಟ್ ಮಾಡಿ ರೈಲಿನ ವೇಗ ಹೆಚ್ಚಿಸಿರುವುದು ಸ್ಪಷ್ಟವಾಗಿದೆ. ಈ ಮೂಲಕ ಚುನಾವಣಾ ಪೂರ್ವ ಗಿಮಿಕ್ ಮಾಡುವುದು ಹೇಗೆ ಎಂಬುದನ್ನು ಸರಕಾರ ತೋರಿಸಿಕೊಟ್ಟಿದ” ಎಂದು ಗೇಲಿ ಮಾಡಿದ್ದಾರೆ.