samachara
www.samachara.com
ಅಧಿಕೃತವಾಗಿ ಕಣಕ್ಕಿಳಿದ ಪ್ರಿಯಾಂಕ ಗಾಂಧಿ ವಾದ್ರಾ; ಯುಪಿಯ ರೋಡ್‌ ಶೋಗೆ ಜನ ಬೆಂಬಲ
ಸುದ್ದಿ ಸಾರ

ಅಧಿಕೃತವಾಗಿ ಕಣಕ್ಕಿಳಿದ ಪ್ರಿಯಾಂಕ ಗಾಂಧಿ ವಾದ್ರಾ; ಯುಪಿಯ ರೋಡ್‌ ಶೋಗೆ ಜನ ಬೆಂಬಲ

ಉತ್ತರಪ್ರದೇಶದ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕರು ಪ್ರಿಯಾಂಕ ಆಗಮನದಿಂದ ಮತಗಳ ಮೇಲೆ ಏನೂ ಪರಿಣಾಮವಾಗದು ಎಂದು ಪ್ರತಿಕ್ರಿಯಿಸಿದ್ದಾರೆ.

Team Samachara

ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ರೋಡ್ ಶೋ ಮೂಲಕ ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕ ಗಾಂಧಿ ವಾದ್ರಾ ಸೋಮವಾರ ಸಕ್ರಿಯ ರಾಜಕೀಯಕ್ಕೆ ಅಧಿಕೃತ ಎಂಟ್ರಿ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಅವರು ಉತ್ತರ ಪ್ರದೇಶದಲ್ಲಿ ನಾಂದಿ ಹಾಡಿದೆ.

ತಿಳಿ ಬಣ್ಣದ ಕುರ್ತಾ ಹಾಗೂ ಚೂಡಿಧಾರ್ ದರಿಸಿದ್ದ 47 ವರ್ಷದ ಪ್ರಿಯಾಂಕ ಗಾಂಧಿ ಕಾಂಗ್ರೆಸ್ ಪೋಸ್ಟರ್‌ಗಳಿಂದ ಅಲಂಕೃತಗೊಂಡಿದ್ದ ತೆರದ ವಾಹನದ ಮೇಲಿಂದ ಜನರತ್ತ ಕೈಬೀಸಿದರು. ಸಹೋದರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜ್ಯೋತಿರಾಧಿತ್ಯ ಸಿಂಧಿಯ ಮತ್ತಿತರರು ರೋಡ್ ಶೋನಲ್ಲಿ ಪ್ರಿಯಾಂಕಾಗೆ ಸಾಥ್ ನೀಡಿದರು.

ಲಕ್ನೋದಲ್ಲಿದ್ದ ಕಾಂಗ್ರೆಸ್ ಕೇಂದ್ರ ಕಚೇರಿಯ ಕಡೆಗೆ ಸಾಗಿದ್ದ 30 ಕಿಮೀ ಉದ್ದದ ರೋಡ್ ಶೋನಲ್ಲಿ ಪ್ರಿಯಾಂಕ ಗಾಂಧಿ ಜನರತ್ತ ಕೈಬಿಸಿದರೆ, ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾಮಾನ್ಯ ಜನ ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗುತ್ತಾ ಹೂ ಮಳೆ ಸುರಿಸುವ ಮೂಲಕ ಪ್ರಿಯಾಂಕ ಗಾಂಧಿ ಪಾದಾರ್ಪಣೆಗೆ ವೇದಿಕೆ ಸಜ್ಜುಗೊಳಿಸಿದರು.

2014ರ ಲೋಕಸಭಾ ಹಾಗೂ 2017ರ ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲನುಭವಿಸಿದ್ದ ಕಾಂಗ್ರೆಸ್‌ಗೆ ಯುಪಿಯಲ್ಲಿ ರೋಡ್ ಶೋ ಮೂಲಕ ಹೊಸ ಶಕ್ತಿ ಹಾಗೂ ಹುರುಪು ತಂದುಕೊಳ್ಳುವ ಪ್ರಯತ್ನ ನಡೆಸಿತು.

ಇಂದಿನ ರೋಡ್ ಶೋ ನಂತರ ರಾಹುಲ್ ಗಾಂಧಿ ದೆಹಲಿಗೆ ವಾಪಾಸಾಗಲಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿಯೇ ಉಳಿಯಲಿರುವ ಪ್ರಿಯಾಂಕ ಗಾಂಧಿ, ಮುಂದಿನ ನಾಲ್ಕೈದು ದಿನ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಜೊತೆಗೂಡಿ ಚುನಾವಣಾ ರಣತಂತ್ರ ರೂಪಿಸಲಿದ್ದಾರೆ ಎನ್ನಲಾಗುತ್ತಿದೆ.

ಪ್ರಿಯಾಂಕ ಗಾಂಧಿ ಅವರ ಚರಿಷ್ಮಾ ಉತ್ತರಪ್ರದೇಶದಲ್ಲಿ ಪಕ್ಷಕ್ಕೆ ಮತವನ್ನು ಸೆಳೆದು ತರಲಿದೆ. ಕಾಂಗ್ರೆಸ್‌ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂಬ ವಿಶ್ಲೇಷಣೆಗಳು ಈಗಾಗಲೇ ಆರಂಭವಾಗಿವೆ. ಒಂದು ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕ ಕೆಲಸ ಮಾಡಿದರೆ ಬಿಜೆಪಿ ಸೇರಿದಂತೆ ಉಳಿದ ಎಲ್ಲಾ ಪಕ್ಷಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರಿಯಾಂಕ ಗಾಂಧಿ ಆಗಮನದಿಂದ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನ ನಡೆಯನ್ನು ಟೀಕಿಸಿರುವ ಬಿಜೆಪಿ ನಾಯಕರು ಪ್ರಿಯಾಂಕ ಆಗಮನದಿಂದ ಮತಗಳ ಮೇಲೆ ಏನೂ ಪರಿಣಾಮವಾಗದು ಎಂದು ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರದಲ್ಲೇ ಅತ್ಯಧಿಕ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದ ಮೇಲೆ ಎಲ್ಲಾ ಪಕ್ಷಗಳು ಕಣ್ಣಿಟ್ಟಿವೆ. ಉತ್ತರಪ್ರದೇಶವನ್ನು ಗೆದ್ದರೆ ಇಡೀ ಭಾರತವನ್ನೇ ಗೆದ್ದಂತೆ ಎಂಬ ಮಾತು ರಾಜಕೀಯ ವಲಯದಲ್ಲಿ ಸಾಕಷ್ಟು ಚಿರಪರಿಚಿತ. ಹೀಗಾಗಿ ಶತಾಯಗತಾಯ ಈ ಬಾರಿ ಉತ್ತರಪ್ರದೇಶದಲ್ಲಿ ಗೆಲುವು ಸಾಧಿಸಲೇಬೇಕು ಎಂದು ಪಣ ತೊಟ್ಟಿದ್ದ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಪ್ರಿಯಾಂಕ ಗಾಂಧಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿತ್ತು. ಅಲ್ಲದೆ 37 ಕ್ಷೇತ್ರಗಳನ್ನು ಒಳಗೊಂಡ ಪೂರ್ವ ಉತ್ತರಪ್ರದೇಶದ ಉಸ್ತುವಾರಿಯನ್ನೂ ನೀಡಲಾಗಿತ್ತು.

ಫೆಬ್ರವರಿ ಎರನೇ ಬಾರದಲ್ಲಿ ಕ್ಷೇತ್ರಕ್ಕೆ ಆಗಮಿಸುವುದಾಗಿ ಮೊದಲೇ ತಿಳಿಸಿದ್ದ ಪ್ರಿಯಾಂಕ ಗಾಂಧಿ ಇಂದು ರೋಡ್‌ ಶೋ ಮಾಡುವ ಮೂಲಕ ಅಧೀಕರತವಾಗಿ ಸಕ್ರೀಯ ರಾಜಕಾರಣಕ್ಕೆ ಧುಮುಕಿದ್ದಾರೆ.

ಮೊದಲ ರೋಡ್ ಶೋ

ಅಧಿಕೃತವಾಗಿ ಕಣಕ್ಕಿಳಿದ ಪ್ರಿಯಾಂಕ ಗಾಂಧಿ ವಾದ್ರಾ; ಯುಪಿಯ ರೋಡ್‌ ಶೋಗೆ ಜನ ಬೆಂಬಲ

ಪ್ರಿಯಾಂಕ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ರೋಡ್ ಶೋ ಹೊಸದೇನು ಅಲ್ಲ. ಆದರೆ ಕಾಂಗ್ರೆಸ್ ತಮ್ಮ ಕ್ಷೇತ್ರದಿಂದ ಹೊರಗೆ ರೋಡ್ ಶೋ ಮಾಡಿದ್ದು ಇದೇ ಮೊದಲು. ಪ್ರಸ್ತುತ ಉತ್ತರಪ್ರದೇಶದಲ್ಲಿ ಅಮೇಥಿ ಹಾಗೂ ರಾಯ್ ಬರೇಲಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಹಿಡಿತವಿದೆ. ಆದರೆ ದಶಕಗಳ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಉತ್ತರಪ್ರದೇಶದ ರಾಜಧಾನಿ ಲಕ್ನೋನಲ್ಲಿ ರೋಡ್ ಶೋ ಮಾಡಿದ್ದು ಪ್ರಿಯಾಂಕ ಗಾಂಧಿ ಹಾಗೂ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಸ್ವಾಗತ ದೊರೆತಿದೆ.

1991ರಿಂದ ಬಿಜೆಪಿಯ ಭದ್ರ ಕೋಟೆ ಎನಿಸಿರುವ ಲಕ್ನೋದಲ್ಲಿ ಕಾಂಗ್ರೆಸ್‌ಗೆ ಈ ಪ್ರಮಾಣದ ಸ್ವಾಗತ ದೊರೆತಿರುವುದು ಉತ್ತರಪ್ರದೇಶದ ರಾಜಕೀಯದಲ್ಲಿ ಒಂದಷ್ಟು ಬದಲಾವಣೆಗೆ ನಾಂದಿ ಹಾಡಬಹುದು.

2009ರಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಅದಕ್ಕೆ ಹೋಲಿಸಿದರೆ 2014ರ ಲೋಕಸಭಾ ಚುನಾವಣೆಯಲ್ಲಿ ಶೇ.50 ರಷ್ಟು ಪಕ್ಷದ ಮತ ಬೇರೆ ಪಕ್ಷಗಳ ಪಾಲಾಗಿದ್ದವು. 2018ರಲ್ಲಿ ಗೋರಖ್‌ಪುರ್ ಹಾಗೂ ಫುಲ್‌ಪುರ್‌ನಲ್ಲಿ ಹೀನಾಯವಾಗಿ ಸೋಲನುಭವಿಸಿದ್ದ ಕಾಂಗ್ರೆಸ್ ಕೇವಲ ಶೇ.2 ರಷ್ಟು ಮತಕ್ಕೆ ತೃಪ್ತಿಪಡಬೇಕಾಯಿತು.

ಪ್ರಿಯಾಂಕ ಗಾಂಧಿ ಹೊಣೆ ಹೊತ್ತಿರುವ ಪೂರ್ವ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರ ಪ್ರಧಾನಿ ನರೇಂದ್ರ ಮೋದಿಯ ಕ್ಷೇತ್ರವಾಗಿದ್ದರೆ, ಗೋರಖ್‌ಪುರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರ. ಹೀಗಾಗಿ ಕಾಂಗ್ರೆಸ್ ಹಾಗೂ ಪ್ರಿಯಾಂಕ ಗಾಂಧಿ ಎದುರು ಸಾಕಷ್ಟು ಸವಾಲುಗಳಿವೆ.ಈಗಾಗಲೇ ಉತ್ತರ ಪ್ರದೇಶದಲ್ಲಿ ಎರಡು ಪ್ರಮುಖ ಪಕ್ಷಗಳಾದ ಎಸ್‌ಪಿ ಹಾಗೂ ಬಿಎಸ್‌ಪಿ ಮೈತ್ರಿ ಮಾಡಿಕೊಂಡಿವೆ. ಕಾಂಗ್ರೆಸ್ ಮೈತ್ರಿಯಿಂದ ಹೊರಗೆ ಉಳಿದಿರುವುದು ಕೂಡ ಮತ ವಿಭಜನೆಯ ಕಾರ್ಯತಂತ್ರದ ಭಾಗ ಎನ್ನುತ್ತಿದ್ದಾರೆ. ಹೀಗಿರುವಾಗ ಪ್ರಿಯಾಂಕ ಗಾಂಧಿ ಆಗಮನ ಕೂಡ ಬಿಜೆಪಿ ಗೆಲುವಿನ ಹಾದಿಗೆ ಅಡ್ಡಿ ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ನಿಖರ ಉತ್ತರವನ್ನು ಕಾಲವೇ ಹೇಳಲಿದೆ.