samachara
www.samachara.com
ಕೇಂದ್ರದ ವಿರುದ್ಧ ನಾಯ್ಡು ಮೆಗಾ ಪ್ರತಿಭಟನೆ; 1.12 ಕೋಟಿಗೆ ರೈಲು ಬುಕ್‌ ಮಾಡಿದ ಆಂಧ್ರ ಸಿಎಂ
ಸುದ್ದಿ ಸಾರ

ಕೇಂದ್ರದ ವಿರುದ್ಧ ನಾಯ್ಡು ಮೆಗಾ ಪ್ರತಿಭಟನೆ; 1.12 ಕೋಟಿಗೆ ರೈಲು ಬುಕ್‌ ಮಾಡಿದ ಆಂಧ್ರ ಸಿಎಂ

ಫೆಬ್ರವರಿ 11ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಯಲಿದ್ದು ಇದಕ್ಕೆ ಅನಂತಪುರ ಮತ್ತು ಶ್ರೀಕಾಕುಳಂನಿಂದ ಎರಡು ರೈಲುಗಳು ಪ್ರತಿಭಟನಾಕಾರರನ್ನು ಹೊತ್ತು ತರಲಿವೆ.

Team Samachara

ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಮುಗಿಬಿದ್ದಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇದೀಗ ದೆಹಲಿಯಲ್ಲೇ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಬಜೆಟ್‌ನಲ್ಲಿಯೂ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಅವರು ಆಂಧ್ರದ ಎಲ್ಲಾ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ ದೆಹಲಿಗೆ ದಾಗುಂಡಿ ಇಡಲು ಮುಂದಾಗಿದ್ದಾರೆ.

ಇದಕ್ಕಾಗಿ ದಕ್ಷಿಣ ಕೇಂದ್ರ ರೈಲ್ವೆಯ 20 ಬೋಗಿಗಳಿರುವ ಎರಡು ರೈಲುಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಆಂಧ್ರ ಪ್ರದೇಶ ಸರಕಾರವೇ ಇದಕ್ಕೆ ಹಣ ನೀಡಿದ್ದು ಸಾಮಾನ್ಯ ಆಡಳಿತ ಇಲಾಖೆ 1.12 ಕೋಟಿ ರೂಪಾಯಿಗಳನ್ನು ಪಾವತಿಸಿದೆ.

ಫೆಬ್ರವರಿ 11ರಂದು ಪ್ರತಿಭಟನೆ ನಡೆಯಲಿದ್ದು ಇದಕ್ಕೆ ಅನಂತಪುರ ಮತ್ತು ಶ್ರೀಕಾಕುಳಂನಿಂದ ಎರಡು ರೈಲುಗಳು ಪ್ರತಿಭಟನಾಕಾರರನ್ನು ಹೊತ್ತು ತರಲಿವೆ. ವಿವಿಧ ಪಕ್ಷಗಳು, ಸಂಘಟನೆಗಳು, ಸರಕಾರೇತರ ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿವೆ.

ಎರಡೂ ರೈಲುಗಳೂ ಭಾನುವಾರ 10 ಗಂಟೆಗೆ ದೆಹಲಿ ತಲುಪಲಿವೆ. ವಿಶೇಷ ಸ್ಥಾನಮಾನದ ಜತೆಗೆ ‘ಆಂಧ್ರ ಪ್ರದೇಶ ರಿಆರ್ಗನೈಸೇಷನ್‌ ಆಕ್ಟ್‌ 2014’ರಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಯಲಿದೆ.

ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಪಕ್ಷಗಳ ನಾಯಕರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಚಂದ್ರಬಾಬು ನಾಯ್ಡು ವಿರೋಧ ಪಕ್ಷಗಳನ್ನು ಸೇರಿ ಎಲ್ಲಾ ಪಕ್ಷಗಳಿಗೂ ಮನವಿ ಮಾಡಿದ್ದಾರೆ. ಬಿಜೆಪಿಯೇತರ ಪಕ್ಷಗಳು ಪ್ರತಿಭಟನೆಯಲ್ಲಿ ನಾಯ್ಡು ಜತೆ ಭಾಗವಹಿಸುವ ನಿರೀಕ್ಷೆ ಇದೆ.