samachara
www.samachara.com
ಸಿಎಲ್‌ಪಿ ಸಭೆಗೆ ಐವರು ಶಾಸಕರ ಗೈರು; 4 ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್‌ಗೆ ದೂರು: ಸಿದ್ದರಾಮಯ್ಯ
ಸುದ್ದಿ ಸಾರ

ಸಿಎಲ್‌ಪಿ ಸಭೆಗೆ ಐವರು ಶಾಸಕರ ಗೈರು; 4 ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್‌ಗೆ ದೂರು: ಸಿದ್ದರಾಮಯ್ಯ

“ಸಿಎಲ್‌ಪಿ ಸಭೆಗೆ ಗೈರಾಗಿರುವ ಶಾಸಕರು ಪತ್ರ ಕಳಿಸಿದ್ದಾರೆ. ಈ ಶಾಸಕರು ಪದೇ ಪದೇ ಸಭೆಗೆ ಗೈರಾಗುತ್ತಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮಕ್ಕೆ ಸ್ಪೀಕರ್‌ಗೆ ಮನವಿ ಮಾಡುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Team Samachara

ಬಜೆಟ್‌ ಅಧಿವೇಶನಕ್ಕೆ ಗೈರಾಗಿರುವ 4 ಮಂದಿ ಕಾಂಗ್ರೆಸ್‌ ಶಾಸಕರ ವಿರುದ್ಧ ಸ್ಪೀಕರ್‌ಗೆ ದೂರು ನೀಡುವುದಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಐದು ಜನರ ಬಿಟ್ಟು ಸಭೆಗೆ ಎಲ್ಲರೂ ಬಂದಿದ್ದರು. ರಮೇಶ್‌ ಜಾರಕಿಹೊಳಿ, ಉಮೇಶ್‌ ಜಾದವ್‌, ಮಹೇಶ್‌ ಕುಮಟಳ್ಳಿ ಮತ್ತು ನಾಗೇಂದ್ರ ತಾವು ಬರಲಾಗುವುದಿಲ್ಲ ಎಂದು ಪತ್ರ ಕಳೆಸಿದ್ದಾರೆ” ಎಂದರು.

“ರಮೇಶ್ ಜಾರಕಿಹೊಳಿ ಮಗಳ ಮದುವೆಯಲ್ಲಿ ಭಾಗಿಯಾಗಬೇಕಿದೆ ಎಂದು ಹೇಳಿದ್ದಾರೆ. ಕುಮಟಳ್ಳಿ ಅನಾರೋಗ್ಯದ ಕಾರಣ ನೀಡಿದ್ದಾರೆ. ಶೀಘ್ರವೆ ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಜಾಧವ್ ಹೇಳಿದ್ದಾರೆ. ನಾಗೇಂದ್ರ ಖಾಸಗಿ ಕೆಲಸ ಇದೆ ಎಂದು ಹೇಳಿದ್ದಾರೆ” ಎಂದರು.

ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಸಿದ್ದರಾಮಯ್ಯ ಅವರಿಗೆ ಕಳಿಸಿರುವ ಪತ್ರ
ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಸಿದ್ದರಾಮಯ್ಯ ಅವರಿಗೆ ಕಳಿಸಿರುವ ಪತ್ರ

“ಅವರಿಗೆ ಸಾಕಷ್ಟು ಅವಕಾಶ ನೀಡಲಾಗಿದೆ. ಅವರು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ. ನೇರವಾಗಿ ನನ್ನನ್ನು ಭೇಟಿಯಾಗುವಂತೆ ಅವರಿಗೆ ಹೇಳಿದ್ದೆ. ವಿಪ್ ಕೂಡಾ ಜಾರಿ ಮಾಡಲಾಗಿತ್ತು. ಆದರೂ ಅವರು ಬಂದಿಲ್ಲ. ಫೆ. 15ರವರೆಗೂ ಬರಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸ್ಪೀಕರ್‌ಗೆ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಿದ್ದೇನೆ” ಎಂದು ಹೇಳಿದ್ದಾರೆ.

“ಜೆ.ಎನ್‌. ಗಣೇಶ್‌ ಈ ನಾಲ್ಕು ಮಂದಿಯ ಜೊತೆಗಿಲ್ಲ. ಅವರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ರೋಷನ್ ಬೇಗ್ ಅಲ್ಪಸಂಖ್ಯಾತರ ಸಮಾವೇಶಕ್ಕೆ ದೆಹಲಿ ಹೋಗಿದ್ದಾರೆ. ಬಿ.ಸಿ. ಪಾಟೀಲ್ ಫೊನ್ ಮಾಡಿ ಕಾರಣಾಂತರಗಳಿಂದ ಸಭೆಗೆ ಬರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇವರಿಬ್ಬರು ಅನುಮತಿ ಪಡೆದಿದ್ದಾರೆ. ಉಳಿದ ಎಲ್ಲ ಶಾಸಕರಿಗೆ ಬಜೆಟ್ ಅಧಿವೇಶನ ಮುಗಿಯುವವರೆಗೂ ಕಡ್ಡಾಯವಾಗಿ ಹಾಜರಿರುವಂತೆ ಸುಚಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಚಿಂಚೋಳಿ ಶಾಸಕ ಉಮೇಶ್‌ ಜಾದವ್‌ ಸಿದ್ದರಾಮಯ್ಯ ಅವರಿಗೆ ಕಳಿಸಿರುವ ಪತ್ರ
ಚಿಂಚೋಳಿ ಶಾಸಕ ಉಮೇಶ್‌ ಜಾದವ್‌ ಸಿದ್ದರಾಮಯ್ಯ ಅವರಿಗೆ ಕಳಿಸಿರುವ ಪತ್ರ

ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೊ ಬಗ್ಗೆ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಯಡಿಯೂರಪ್ಪ ರಾಜಕೀಯ ನಿವೃತ್ತಿ ಹೊಂದುವ ಕಾಲ ಬರುತ್ತಿದೆ. ಯಡಿಯೂರಪ್ಪ ಬರೀ ಹಸಿ ಸುಳ್ಳು ಹೇಳುತ್ತಾರೆ. ಯಡಿಯೂರಪ್ಪ ಮಾತಾಡಿರುವ ಆಡಿಯೊ ಅದು. ಮುಖ್ಯಮಂತ್ರಿಗಳು, ಕಾಂಗ್ರೆಸ್ ಬಿಜೆಪಿ ಶಾಸಕರಿಗೆ ಆಮಿಷ ಒಡ್ಡಿಲ್ಲ. ಸುಭಾಷ್ ಗುತ್ತೇದಾರ್‌ಗೆ ನಾವು ಆಮಿಷ ಒಡ್ಡಿಲ್ಲ. ಅವರು ಸುಳ್ಳು ಹೇಳ್ತಿದ್ದಾರೆ” ಎಂದಿದ್ದಾರೆ.

“ಯಡಿಯೂರಪ್ಪ ಆಡಿಯೊ ಬಗ್ಗೆ ತನಿಖೆ ಮಾಡಿಸುತ್ತೇವೆ. ಈ ಬಾರಿ ಜನರ ಮುಂದೆ ಯಡಿಯೂರಪ್ಪ ಬಯಲಾಗಿದ್ದಾರೆ. ಅದು ಯಡಿಯೂರಪ್ಪ ಧ್ವನಿ ಎಂಬುದು ಗೊತ್ತಾಗಿದೆ. ಸ್ಪೀಕರ್ ಬಗ್ಗೆಯೂ ಯಡಿಯೂರಪ್ಪ ಮಾತಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸುತ್ತೇವೆ” ಎಂದು ಹೇಳಿದ್ದಾರೆ.