samachara
www.samachara.com
 ವಿಪಕ್ಷಗಳ ಪ್ರಶ್ನೆಗಳಿಗೆ ಅಪಹಾಸ್ಯದ ಉತ್ತರ;  ದೀರ್ಘ ಭಾಷಣದಲ್ಲಿ ಮೋದಿ ಹೇಳಿದ್ದೇನು?
ಸುದ್ದಿ ಸಾರ

ವಿಪಕ್ಷಗಳ ಪ್ರಶ್ನೆಗಳಿಗೆ ಅಪಹಾಸ್ಯದ ಉತ್ತರ; ದೀರ್ಘ ಭಾಷಣದಲ್ಲಿ ಮೋದಿ ಹೇಳಿದ್ದೇನು?

‘ಕಾವಲುಗಾರನನ್ನು ಕಳ್ಳ ಅಪಹಾಸ್ಯ ಮಾಡುತ್ತಿದ್ದಾನೆ’ ಎಂದಿರುವ ಮೋದಿ, ಕಾಂಗ್ರೆಸ್‌ ಮುಖಂಡರನ್ನು ಎಷ್ಟು ಸಾಧ್ಯವೋ ಅಷ್ಟು ಅಪಹಾಸ್ಯ ಮಾಡಿ ಮಾತನಾಡಿದ್ದಾರೆ.

Team Samachara

ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೂ ಒಂದೇ ಬಾರಿ ಎಂಬಂತೆ ಸದನದಲ್ಲಿ ಉತ್ತರ ಕೊಟ್ಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಪಕ್ಷಗಳ ಮಹಾ ಮೈತ್ರಿಕೂಟವನ್ನು 'ಮಹಾ ಮಿಲಾವತ್‌' ಎಂದು ಜರಿದಿದ್ದಾರೆ.

'ಕಾವಲುಗಾರನನ್ನು ಕಳ್ಳ ಅಪಹಾಸ್ಯ ಮಾಡುತ್ತಿದ್ದಾನೆ' ಎಂದಿರುವ ಮೋದಿ, ಕಾಂಗ್ರೆಸ್‌ ಮುಖಂಡರನ್ನು ಎಷ್ಟು ಸಾಧ್ಯವೋ ಅಷ್ಟು ಅಪಹಾಸ್ಯ ಮಾಡಿ ಮಾತನಾಡಿದ್ದಾರೆ.

“ಕಳೆದ 30 ವರ್ಷಗಳಲ್ಲಿ ದೇಶದ ಜನ ಒಂದು ಪಕ್ಷಕ್ಕೆ ಪೂರ್ಣ ಬಹುಮತ ನೀಡಿರುವುದು 2014ರಲ್ಲಿ ಮಾತ್ರ. ಈಗ ದೇಶದ ಜನ ಮಹಾ ಮಿಲಾವತ್‌ ಅನ್ನು ನೋಡಬೇಕಿದೆ” ಎಂದಿದ್ದಾರೆ ಮೋದಿ.

ಮೋದಿಯ ಅಪಹಾಸ್ಯದ ಮಾತುಗಳಿಗೆ ವಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ, “ಮಿಲಾವತ್‌ ಸರಕಾರ ಬಂದರೆ ಏನಾಗುತ್ತದೆ ಎಂಬುದು ಜನರಿಗೆ ಗೊತ್ತಿದೆ. ನೀವು ಚಿಂತಿಸಬೇಡಿ, ಮಹಾ ಮಿಲಾವತ್‌ ಜನ ಇಲ್ಲಿಗೆ (ಅಧಿಕಾರ ಸ್ಥಾನಕ್ಕೆ) ಬರಲು ಸಾಧ್ಯವಿಲ್ಲ” ಎಂದು ಮೋದಿ ಮೂದಲಿಸಿದರು.

“ಮಹಾ ಮಿಲಾವತ್‌ ಸರಕಾರ ದೇಶದಕ್ಕೆ ಎಷ್ಟು ಮಾರಕ ಎಂಬುದನ್ನು ಮತದಾರರು ಅರಿತಿದ್ದಾರೆ. ಪೂರ್ಣ ಬಹುಮತ ಪಡೆದ ಸರಕಾರ ಸಂಪೂರ್ಣ ಬದಲಾವಣೆಯೊಂದಿಗೆ ಕೆಲಸ ಮಾಡುತ್ತದೆ ಎಂಬುದೂ ಜನರಿಗೆ ಅರ್ಥವಾಗಿದೆ. ಕೋಲ್ಕತ್ತಾದಲ್ಲಿ ಮಹಾ ಮಿಲಾವತ್‌ ನಡೆಸಿದ ಪಕ್ಷಗಳು ಅಧಿಕಾರಕ್ಕೆ ಬರುವುದು ದೇಶದ ಜನರಿಗೆ ಇಷ್ಟವಿಲ್ಲ” ಎಂದು ಮೋದಿ ಹೇಳಿದ್ದಾರೆ.

“ರಫೇಲ್‌ ವಿಚಾರದಲ್ಲಿ ವಿಪಕ್ಷಗಳು ಯಾಕೆ ಅಷ್ಟೋಂದು ವಿಶ್ವಾಸದಿಂದ ಸುಳ್ಳನ್ನು ಹೇಳಿದವು ಎಂಬುದು ನನಗೆ ಗೊತ್ತಾಗಲಿಲ್ಲ. ಆ ಮೇಲೆ ನನಗೆ ಗೊತ್ತಾಗಿದ್ದು ಏನೆಂದರೆ ಅವರು ಅಧಿಕಾರದಲ್ಲಿದ್ದಾಗ ಒಂದೇ ಒಂದೂ ಪಾರದರ್ಶಕ ರಕ್ಷಣಾ ಖರೀದಿ ನಡೆಸಲೇ ಇಲ್ಲ” ಎಂದರು.

“ಸೇನಾ ಪಡೆಗಳ ವಿಚಾರದಲ್ಲಿ ಕಾಂಗ್ರೆಸ್‌ ಯಾವತ್ತೂ ಸಂವೇದನಾಶೀಲತೆಯಿಂದ ನಡೆದುಕೊಂಡಿಲ್ಲ. ಸೇನೆ ಬಲಗೊಳ್ಳುವುದು ಕಾಂಗ್ರೆಸ್‌ಗೆ ಯಾವತ್ತೂ ಬೇಕಾಗಿರಲಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ ನಡೆಸಲು ಸೇನಾ ಅಧಿಕಾರಿಗಳಿಗೆ ಬುಲೆಟ್‌ ಪ್ರೂಫ್‌ ಜಾಕೆಟ್‌ಗಳನ್ನೇ ಕಾಂಗ್ರೆಸ್ ಸರಕಾರ ಒದಗಿಸಿರಲಿಲ್ಲ” ಎಂದು ದೂರಿದರು.

“ಕಾಂಗ್ರೆಸ್‌ ಸೇರುವುದೆಂದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅಂಬೇಡ್ಕರ್‌ ಹೇಳಿದ್ದರು. 'ಕಾಂಗ್ರೆಸ್‌ ಮುಕ್ತ ಭಾರತ' ನನ್ನ ಘೋಷಣೆಯಲ್ಲ. ನಾನು ಕೇವಲ ಮಹಾತ್ಮ ಗಾಂಧೀಜಿಯ ಆಸೆಯನ್ನು ಈಡೇರಿಸುತ್ತಿದ್ದೇನೆ” ಎಂದು ಮೋದಿ ಕಾಂಗ್ರೆಸ್‌ ಅನ್ನು ಹೀಯಾಳಿಸಿದ್ದಾರೆ.