samachara
www.samachara.com
ಬಿಜೆಪಿ ಕಾರ್ಯಕರ್ತರ ಹಲ್ಲೆ ಖಂಡಿಸಿ ಪತ್ರಕರ್ತರಿಂದ ‘ಹೆಲ್ಮೆಟ್‌ ಪ್ರತಿಭಟನೆ’
ಸುದ್ದಿ ಸಾರ

ಬಿಜೆಪಿ ಕಾರ್ಯಕರ್ತರ ಹಲ್ಲೆ ಖಂಡಿಸಿ ಪತ್ರಕರ್ತರಿಂದ ‘ಹೆಲ್ಮೆಟ್‌ ಪ್ರತಿಭಟನೆ’

ಪತ್ರಕರ್ತ ಸುಮನ್ ಪಾಂಡೆ ಮೇಲೆ ಬಿಜೆಪಿ ಕಾರ್ಯಕರ್ತರು ನಡೆಸಿದ ಹಲ್ಲೆ ಖಂಡಿಸಿ ಛತ್ತೀಸ್‌ಗಡದ ಪತ್ರಕರ್ತರು ಬಿಜೆಪಿ ಸಭೆಗೆ ಹೆಲ್ಮೆಟ್‌ ಧರಿಸಿ ಹಾಜರಾಗಿದ್ದಾರೆ.

Team Samachara

ಪತ್ರಕರ್ತರು ಕೈಯಲ್ಲಿ ಮೈಕ್ ಹಾಗೂ ಹೆಗಲಲ್ಲಿ ಕ್ಯಾಮೆರಾ ಹಿಡಿದು ಕರ್ತವ್ಯಕ್ಕೆ ಹಾಜರಾಗುವುದು ಮಾಮೂಲಿ. ಆದರೆ ಛತ್ತೀಸ್‌ಗಢದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪತ್ರಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಪತ್ರಕರ್ತರು ಬಿಜೆಪಿ ಮುಖಂಡರ ಸಭೆಗೆ ತಲೆಗೆ ಹೆಲ್ಮೆಟ್ ಹಾಕಿಕೊಂಡು ಹಾಜರಾಗುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ.

ಸುದ್ದಿಜಾಲವೊಂದರಲ್ಲಿ ಕೆಲಸ ಮಾಡುವ ಪತ್ರಕರ್ತ ಸುಮನ್ ಪಾಂಡೆ ಶನಿವಾರ ರಾಯ್‌ಪುರ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಬಿಜೆಪಿ ನಾಯಕರ ಸಭೆಯನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ವಿಡಿಯೊ ರೆಕಾರ್ಡ್ ಮಾಡದಂತೆ ಹಾಗೂ ರೆಕಾರ್ಡ್‌ ಆಗಿರುವ ವಿಡಿಯೊ ಡಿಲೀಟ್‌ ಮಾಡುವಂತೆ ಪಾಂಡೆ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಪಾಂಡೆ ತಲೆಗೆ ಬಲವಾದ ಪೆಟ್ಟಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಬಿಜೆಪಿ ಪಕ್ಷದ ಸಭೆಯನ್ನು ನಾನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಏಕಾಏಕಿ ನನ್ನ ಮೇಲೆ ಮುಗಿಬಿದ್ದರು. ರಾಜೀವ್ ಅಗರ್ವಾಲ್ ಹಾಗೂ ಉತ್ಕರ್ಷ್ ತ್ರಿವೇದಿ ಎಂಬುವವರು ನಾನು ರೆಕಾರ್ಡ್ ಮಾಡಿರುವ ವಿಡಿಯೋವನ್ನು ಡಿಲೀಟ್ ಮಾಡುವಂತೆ ತಾಕೀತು ಮಾಡಿದರು. ನಾನು ಅದಕ್ಕೆ ನಿರಾಕರಿಸಿದ್ದೆ. ಅವರು ಇದ್ದಕ್ಕಿದ್ದಂತೆ ನನ್ನ ಮೇಲೆ ಹಲ್ಲೆ ನಡೆಸಿದರು. ಬಲವಂತವಾಗಿ ನನ್ನಿಂದ ಮೊಬೈಲ್ ಕಸಿದು ವಿಡಿಯೋ ಡಿಲೀಟ್ ಮಾಡಿದರು” ಎಂದು ಸುಮನ್ ಪಾಂಡೆ ಹೇಳಿದ್ದಾರೆ.

ಸಭೆಯಿಂದ ಹೊರಬಂದ ಸುಮನ್ ಪಾಂಡೆ ನಡೆದ ವಿಚಾರವನ್ನು ಇತರೆ ಪತ್ರಕರ್ತರಿಗೆ ತಿಳಿಸಿದ್ದಾರೆ. ಈ ಹಲ್ಲೆಯನ್ನು ಖಂಡಿಸಿ ಎಲ್ಲಾ ಪತ್ರಕರ್ತರು ಬಿಜೆಪಿ ಪಕ್ಷದ ಮುಖ್ಯ ಕಚೇರಿಗೆ ತೆರಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಅಲ್ಲದೆ ಪಾಂಡೆ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ಹಲ್ಲೆಗಾಗಿ ಕ್ಷಮೆಯಾಚಿಸಿದ ಬಿಜೆಪಿ ವಕ್ತಾರ ಸಚ್ಚಿದಾನಂದ ಉಪಾಸನೆ, “ಅದು ಪಕ್ಷದ ಖಾಸಗಿ ಸಭೆಯಾಗಿತ್ತು. ಪತ್ರಕರ್ತರು ಸಭೆಯ ಆರಂಭದ ವಿಡಿಯೋ ಮಾಡಿಕೊಂಡು ಸಭೆಯಿಂದ ಹೊರನಡೆಯುವಂತೆ ತಿಳಿಸಲಾಗಿತ್ತು. ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಹೀಗಾಗಿ ಕಾರ್ಯಕರ್ತರಿಗೂ ಮೊಬೈಲ್ ಸ್ವಿಚ್‌ ಆಫ್ ಮಾಡುವಂತೆ ತಿಳಿಸಲಾಗಿತ್ತು. ಆದರೆ ಸುಮನ್ ಪಾಂಡೆ ತಮ್ಮ ಮೊಬೈಲ್‌ನಲ್ಲಿ ಸಭೆಯ ಕಲಾಪಗಳನ್ನು ಚಿತ್ರೀಕರಿಸಿದ್ದಕ್ಕೆ ಕಾರ್ಯಕರ್ತರು ಸಿಟ್ಟಿಗೆದ್ದರು. ಈ ಘಟನೆಗಾಗಿ ನಾನು ಕ್ಷಮೆ ಕೋರುತ್ತೇನೆ” ಎಂದಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯದ ಜಾಗತಿಕ ಸೂಚ್ಯಂಕದ 180 ರಾಷ್ಟ್ರಗಳ ಪೈಕಿ ಭಾರತ 138ನೇ ಸ್ಥಾನದಲ್ಲಿದೆ. ಮ್ಯಾನ್ಮಾರ್ ಹಾಗೂ ಆಫ್ಘಾನಿಸ್ತಾನ ಭಾರತಕ್ಕಿಂತ ಮೇಲಿನ ರ್ಯಾಂಕ್‌ನಲ್ಲಿವೆ. 2002ರಲ್ಲಿ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಆರಂಭವಾದಾಗ ಭಾರತ 80ನೇ ಸ್ಥಾನದಲ್ಲಿತ್ತು. ಪತ್ರಕರ್ತರ ಸ್ವಾತಂತ್ರ್ಯಹರಣ ಭಾರತದಲ್ಲಿ ಅವ್ಯಾಹತವಾಗಿದೆ ಎಂಬುದನ್ನು ಇಂಥ ಘಟನೆ ಹಾಗೂ ಸೂಚ್ಯಂಕಗಳು ಬಹಿರಂಗಪಡಿಸುತ್ತಲೇ ಇವೆ.