samachara
www.samachara.com
ಅಕ್ರಮ ವಹಿವಾಟು ಪ್ರಕರಣ; ED ವಿಚಾರಣೆಗೆ ವಾದ್ರಾ ಹಾಜರು
ಸುದ್ದಿ ಸಾರ

ಅಕ್ರಮ ವಹಿವಾಟು ಪ್ರಕರಣ; ED ವಿಚಾರಣೆಗೆ ವಾದ್ರಾ ಹಾಜರು

ಅಕ್ರಮ ಹಣಕಾಸು ವಹಿವಾಟು ಪ್ರಕರಣದ ವಿಚಾರಣೆಗಾಗಿ ರಾಬರ್ಟ್‌ ವಾದ್ರಾ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಬುಧವಾರ ಹಾಜರಾಗಿದ್ದಾರೆ.

Team Samachara

ಅಕ್ರಮ ಹಣ ವರ್ಗಾವಣೆ ಹಾಗೂ ಅಕ್ರಮವಾಗಿ ವಿದೇಶದಲ್ಲಿ ಅಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ಪತಿ ಉದ್ಯಮಿ ರಾಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯದ ಮುಂದೆ ಬುಧವಾರ ವಿಚಾರಣೆಗೆ ಹಾಜರಾಗಿದ್ದಾರೆ.

ಪ್ರಿಯಾಂಕ ಗಾಂಧಿ ಜತೆಗೆ ಲ್ಯಾಂಡ್ ಕ್ರೂಸರ್ ಕಾರ್‌ನಲ್ಲಿ ಬಂದ ವಾದ್ರಾ ಜಾರಿ ನಿರ್ದೇಶನಾಲಯದ ಕಚೇರಿ ಒಳಗೆ ಹೋದರೆ, ಪ್ರಿಯಾಂಕಾ ಅದೇ ಕಾರಿನಲ್ಲಿ ಎಐಸಿಸಿ ಕಚೇರಿಗೆ ಹೋದರು.

ವಾದ್ರಾ ಲಂಡನ್‌ನಲ್ಲಿ 1.9 ಮಿಲಿಯನ್ ಪೌಂಡ್ ಆಸ್ತಿ ಹೊಂದಿದ್ದಾರೆ. ಅಲ್ಲದೆ 9 ಮಿಲಿಯನ್ ಮೌಲ್ಯದ ಎರಡು ಮನೆ ಹಾಗೂ 6 ಫ್ಲಾಟ್ ಗಳನ್ನು ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ವಾದ್ರಾ ವಿರುದ್ಧ ಪ್ರಕರಣ ದಾಖಲು ಮಾಡಿದೆ.

ಕಳೆದ ವಾರ ನಿರೀಕ್ಷಣಾ ಜಾಮೀನು ನೀಡುವಂತೆ ವಾದ್ರಾ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಜಾರಿ ನಿರ್ದೇಶನಾಲಯದ ತನಿಖೆಗೆ ಸಹಕರಿಸುವಂತೆ ತಾಕೀತು ಮಾಡಿದ್ದ ನ್ಯಾಯಾಲಯ ಫೆಬ್ರವರಿ16ರ ವರೆಗೆ ಮಧ್ಯಂತರ ಜಾಮೀನು ನೀಡಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೂಚನೆ ನೀಡಿತ್ತು. ಜಾರಿ ನಿರ್ದೇಶನಾಲಯದ ಕಚೇರಿಗೆ ಬಂದ ವಾದ್ರಾ ಅವರನ್ನು ಅಧಿಕಾರಿಗಳ ತಂಡ ವಿಚಾರಣೆ ನಡೆಸುತ್ತಿದೆ.

ಅಕ್ರಮ ಹಣಕಾಸಿನ ಮತ್ತೊಂದು ಪ್ರಕರಣದಲ್ಲಿ ಫೆಬ್ರುವರಿ 12ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ರಾಜಸ್ತಾನ ಹೈಕೋರ್ಟ್‌ ಕೂಡಾ ವಾದ್ರಾಗೆ ಸೂಚಿಸಿದೆ.

ವಾದ್ರಾ ವಿರುದ್ಧದ ಪ್ರಕರಣಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡರು, ಕೇಂದ್ರ ಸರಕಾರ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶವನ್ನು ಸಹಿಸದೆ ಜಾರಿ ನಿರ್ದೇಶನಾಲಯದ ಮೂಲಕ ಅವರ ಕುಟುಂಬಕ್ಕೆ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ.