samachara
www.samachara.com
ಬಜೆಟ್‌ ಅಧಿವೇಶನದಲ್ಲಿ ‘ಬಹುಮತ’ದ ಗದ್ದಲ; ರಾಜ್ಯಪಾಲರ ಭಾಷಣಕ್ಕೆ ಬಿಜೆಪಿಯಿಂದ ಅಡ್ಡಿ
ಸುದ್ದಿ ಸಾರ

ಬಜೆಟ್‌ ಅಧಿವೇಶನದಲ್ಲಿ ‘ಬಹುಮತ’ದ ಗದ್ದಲ; ರಾಜ್ಯಪಾಲರ ಭಾಷಣಕ್ಕೆ ಬಿಜೆಪಿಯಿಂದ ಅಡ್ಡಿ

ಬಹುಮತದ ಕಾರಣಕ್ಕೆ ಕಾಂಗ್ರೆಸ್- ಜೆಡಿಎಸ್ ಹಾಗೂ ಪ್ರತಿಪಕ್ಷ ಬಿಜೆಪಿ ಬಜೆಟ್‌ ಅಧಿವೇಶನದಲ್ಲಿ ದೊಡ್ಡ ಮಟ್ಟದ ಸಂಘರ್ಷಕ್ಕೆ ಸಜ್ಜಾಗಿ ನಿಂತಿರುವುದು ಸ್ಪಷ್ಟವಾಗಿದೆ.

Team Samachara

ರಾಜ್ಯ ವಿಧಾನಮಂಡಲ ಅಧಿವೇಶನದ ಆರಂಭದಲ್ಲೇ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ಭಾರೀ ಸಂಘರ್ಷ ಆರಂಭವಾಗಿದೆ. ಈ ಸರಕಾರಕ್ಕೆ ಬಹುಮತವಿಲ್ಲವಾದ್ದರಿಂದ ಜಂಟಿ ಅಧಿವೇಶನವನ್ನುಉದ್ದೇಶಿಸಿ ಭಾಷಣ ಮಾಡಬೇಡಿ ಎಂದು ಬಿಜೆಪಿ ಧರಣಿ ನಡೆಸಿ ಕೋಲಾಹಲ ಎಬ್ಬಿಸಿದ ಪರಿಣಾಮ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿ ಹೊರನಡೆದ ಬೆಳವಣಿಗೆ ಇಂದು ನಡೆದಿದೆ.

ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವಾಗ ಈ ಹಿಂದೆಯೂ ರಾಜ್ಯಪಾಲರುಗಳು ವಿರೋಧ ಎದುರಿಸಿದ್ದರಾದರೂ ಈ ಬಾರಿ ಕರ್ನಾಟಕದ ಇತಿಹಾಸ ಕಂಡ ಅತ್ಯಂತ ದೊಡ್ಡ ವಿರೋಧ ಪಕ್ಷದ ಭಾರೀ ವಾಗ್ದಾಳಿ ಹಾಗೂ ಘೋಷಣೆಗಳನ್ನು ಕಂಡು ರಾಜ್ಯಪಾಲ ವಾಜೂಭಾಯಿ ವಾಲಾ ಅಸಹಾಯಕರಾದರು.

ಸದನ ಆರಂಭವಾಗುತ್ತಿದ್ದಂತೆಯೇ ರಾಜ್ಯಪಾಲರು ಭಾಷಣ ಮಾಡಲು ಮುಂದಾದರೂ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಎದುರಿನ ಬಾವಿಗೆ ಇಳಿದು ಧರಣಿ ಆರಂಭಿಸಿದರು. “ಈ ಸರಕಾರಕ್ಕೆ ಬಹುಮತವೇ ಇಲ್ಲ. ಹೀಗಾಗಿ ಈ ಸರಕಾರಕ್ಕೆ ಮುಂದುವರಿಯುವ ನೈತಿಕ ಹಕ್ಕಿಲ್ಲ” ಎಂದು ಆರೋಪಿಸಿದ ಬಿಜೆಪಿ ಸದಸ್ಯರು, ಇಂತಹ ಸರಕಾರದ ಪರವಾದ ಭಾಷಣವನ್ನು ರಾಜ್ಯಪಾಲರು ಓದುವ ಅಗತ್ಯವಿಲ್ಲ ಎಂದು ಆಕ್ಷೇಪಿಸಿದರು.

ಈ ಹಂತದಲ್ಲಿ ಬಿಜೆಪಿಯ ವಿರೋಧ ಒಂದೇ ಸಮನೆ ಮುಂದುವರಿಯುತ್ತಾ ಹೋದಾಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಬಿಜೆಪಿ ಶಾಸಕರ ನಡೆಗೆ ವಿರೋಧ ವ್ಯಕ್ತಪಡಿಸಿದರು. ಆದರೂ ಅಂತಿಮವಾಗಿ ಪರಸ್ಪರರ ವಾಗ್ವಾದದ ನಡುವೆ ಯಾರ ಮಾತು ಯಾರಿಗೂ ಕೇಳದ ಪರಿಸ್ಥಿತಿ ನಿರ್ಮಾಣವಾಯಿತು.

ಸದನದ ಬಾವಿಯಲ್ಲಿದ್ದ ಬಿಜೆಪಿ ಸದಸ್ಯರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸುತ್ತಲೇ ಮತ್ತೊಂದು ಕಡೆ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದ ಪರಿಣಾಮ ವಾಜೂಭಾಯಿ ವಾಲಾ ತಮ್ಮ ಭಾಷಣವನ್ನು ಮೊಟಕುಗೊಳಿಸಬೇಕಾಯಿತು.

“ನೀವು ಈ ರೀತಿ ಅಡ್ಡಿಪಡಿಸಿದರೆ ನಾನು ಭಾಷಣ ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದರಾದರೂ ಬಿಜೆಪಿ ಸದಸ್ಯರು ಅದನ್ನು ಲೆಕ್ಕಿಸಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದ ವಜೂಭಾಯಿ ವಾಲಾ ಅವರು ರಮೇಶ್ ಕುಮಾರ್ ಕಡೆ ನೋಡಿ ಏನು ಮಾಡುವುದು ಎಂಬಂತೆ ಸನ್ನೆ ಮಾಡಿದರು. ಈ ಸಂದರ್ಭದಲ್ಲಿ ಇಪ್ಪತ್ತೆರಡು ಪುಟಗಳ ಭಾಷಣದ ಪೈಕಿ ಮೊದಲ ಹಾಗೂ ಕೊನೆಯ ಪುಟಗಳನ್ನು ಓದಿ ಭಾಷಣದ ಪ್ರತಿಯನ್ನು ಮಂಡಿಸುವಂತೆ ರಮೇಶ್ ಕುಮಾರ್ ಅವರು ಸಲಹೆ ರವಾನಿಸಿದರು.

ಈ ಹಂತದಲ್ಲೂ ಬಿಜೆಪಿ ಸದಸ್ಯರು ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಾ, ಸರಕಾರಕ್ಕೆ ಬಹುಮತವೇ ಇಲ್ಲ. ಅದು ಅಧಿಕಾರದಲ್ಲಿರುವುದೇ ಅಸಂವಿಧಾನಿಕ. ಹೀಗಾಗಿ ಅದಕ್ಕೆ ಮುಂದುವರಿಯುವ ಹಕ್ಕಿಲ್ಲ ಎಂದು ಪ್ರತಿಪಾದಿಸತೊಡಗಿದರು. ಗದ್ದಲದ ನಡುವೆಯೇ ರಾಜ್ಯಪಾಲರು ಭಾಷಣ ಓದಿದ ಸಂಪ್ರದಾಯ ಮುಗಿಸಿ ಸದನದಿಂದ ಹೊರ ನಡೆದರು.

ನೆನ್ನೆ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಪಕ್ಷ ನಡೆಸಬೇಕಾದ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿತ್ತು ಎನ್ನಲಾಗಿದೆ. ಅದರಂತೆಯೇ ಅತೃಪ್ತರ ವಿಚಾರವನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಕ್ಕೂ ಬಿಜೆಪಿ ಮುಂದಾಗುತ್ತಿದೆ.

ಇದುವರೆಗೂ ರಾಜ್ಯಪಾಲರು ಕನ್ನಡದಲ್ಲಿ ಭಾಷಣ ಮಾಡುತ್ತಿಲ್ಲವೆಂದೋ ಅಥವಾ ಬೇರೆ ಯಾವುದಾದರೂ ಕಾರಣಗಳಿಗೋ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಕಪ್ಪುಬಾವುಟ ಪ್ರದರ್ಶಿಸುವಂತಹ ಘಟನೆಗಳು ನಡೆಯುತ್ತಿದ್ದವು. ಕೆಲ ಬಾರಿ ರಾಜ್ಯಪಾಲರೂ ತಮ್ಮ ಭಾಷಣವನ್ನು ಮೊಟಕುಗೊಳಿಸಿ ಹೋಗುತ್ತಿದ್ದರು.

ಆದರೆ ಈ ಬಾರಿ ಕಂಡಂತಹ ವಿರೋಧ ಹಿಂದೆಂದೂ ಕಂಡಿರಲಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡರೆ ಸಮ್ಮಿಶ್ರ ಸರಕಾರದ ಅಂಗಪಕ್ಷಗಳಾದ ಕಾಂಗ್ರೆಸ್- ಜೆಡಿಎಸ್ ಹಾಗೂ ಪ್ರತಿಪಕ್ಷ ಬಿಜೆಪಿ ದೊಡ್ಡ ಮಟ್ಟದ ಸಂಘರ್ಷಕ್ಕೆ ಸಜ್ಜಾಗಿ ನಿಂತಿರುವುದು ಸ್ಪಷ್ಟವಾಗಿದೆ.