samachara
www.samachara.com
ಮಮತಾ ವರ್ಸಸ್‌ ಸಿಬಿಐ: ಧರಣಿಗೆ ‘ನೈತಿಕ ಜಯ’; ಅಧಿಕಾರಿ ವಿಚಾರಣೆಗೆ ಅವಕಾಶ
ಸುದ್ದಿ ಸಾರ

ಮಮತಾ ವರ್ಸಸ್‌ ಸಿಬಿಐ: ಧರಣಿಗೆ ‘ನೈತಿಕ ಜಯ’; ಅಧಿಕಾರಿ ವಿಚಾರಣೆಗೆ ಅವಕಾಶ

“ಪೊಲೀಸ್‌ ಆಯುಕ್ತರು ಲಭ್ಯವಿರುವಂತೆ ಮತ್ತು ತನಿಖೆಗೆ ಸಹಕಾರ ನೀಡುವಂತೆ ನಾವು ನಿರ್ದೇಶನ ನೀಡುತ್ತೇವೆ. ನ್ಯಾಯಾಂಗ ನಿಂದನೆ ಅರ್ಜಿ ಬಗ್ಗೆ ಮುಂದೆ ತೀರ್ಮಾನ ತೆಗೆದುಕೊಳ್ಳುತ್ತೇವೆ,” - ಸುಪ್ರೀಂ ಕೋರ್ಟ್‌.

Team Samachara

ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ಮಮತಾ ಬ್ಯಾನರ್ಜಿ ವರ್ಸಸ್‌ ಸಿಬಿಐ ಕಾದಾಟದಲ್ಲಿ ಸುಪ್ರೀಂ ಕೋರ್ಟ್‌ ಮಂಗಳವಾರ ತನ್ನ ತೀರ್ಪು ನೀಡಿದೆ. ಕೊಲ್ಕೊತ್ತಾ ಪೊಲೀಸ್‌ ಆಯುಕ್ತ 'ರಾಜೀವ್‌ ಕುಮಾರ್‌ ಬಂಧನ ಸಾಧ್ಯವಿಲ್ಲ. ಅವರನ್ನು ವಿಚಾರಣೆ ನಡೆಸಬಹುದು' ಎಂಬ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿ ಸದಸ್ಯ ಪೀಠ ನೀಡಿದೆ.

“ಪೊಲೀಸ್‌ ಆಯುಕ್ತರು ಲಭ್ಯವಿರುವಂತೆ ಮತ್ತು ತನಿಖೆಗೆ ಸಹಕಾರ ನೀಡುವಂತೆ ನಾವು ನಿರ್ದೇಶನ ನೀಡುತ್ತೇವೆ. ನ್ಯಾಯಾಂಗ ನಿಂದನೆ ಅರ್ಜಿ ಬಗ್ಗೆ ಮುಂದೆ ತೀರ್ಮಾನ ತೆಗೆದುಕೊಳ್ಳುತ್ತೇವೆ,” ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಹೇಳಿದ್ದಾರೆ.

ಇದಕ್ಕೂ ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಿಬಿಐ, ‘ಶಾರದಾ ಚಿಟ್‌ ಫಂಡ್‌ ಹಗರಣದ ತನಿಖೆ ನಡೆಸಿದ್ದ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಮೇಲುಸ್ತುವಾರಿಯ ತಂಡ ಹಗರಣದ ಪ್ರಮುಖ ದಾಖಲೆಗಳಾದ ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ಗಳನ್ನು ಪ್ರಮುಖ ಆರೋಪಿಗಳಿಗೆ ವರ್ಗಾಯಿಸಿದೆ’ ಎಂದು ದೂರಿತ್ತು.

ಈ ಸಂಬಂಧ ರಾಜೀವ್‌ ಕುಮಾರ್‌ ಮನೆಗೆ ಹುಡುಕಾಟಕ್ಕಾಗಿ ತೆರಳಿದ್ದ ತಂಡವನ್ನು ಕೊಲ್ಕೊತ್ತಾ ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ. ಕೆ. ವೇಣುಗೋಪಾಲ್, ಪಶ್ಚಿಮ ಬಂಗಾಳ ಡಿಜಿಪಿ, ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸುವಂತೆ ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಯಾಗಿ ಪಶ್ಚಿಮ ಬಂಗಾಳ ಸರಕಾರದ ಪರ ವಾದ ಮಂಡಿಸಿದ ಅಭಿಷೇಕ್‌ ಮನು ಸಿಂಘ್ವಿ, "ಇದೊಂದು ಅವಮಾನಕರ ಮತ್ತು ಲಾಭಕ್ಕಾಗಿ ನಡೆಸಿದ ದಾಳಿಯ ಯತ್ನ. ಈ ತುರ್ತು ಬೆಳವಣಿಗೆ ಯಾಕೆ? ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಎಫ್‌ಐಆರ್‌ ದಾಖಲಾಗಿಲ್ಲ. ಐಪಿಸಿ ಸೆಕ್ಷನ್‌ 201ರ ಅಡಿಯಲ್ಲಿ (ಪುರಾವೆ ನಾಶ) ರಾಜೀವ್ ಕುಮಾರ್‌ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ," ಎಂದು ವಾದಿಸಿದರು.

ವಾದ ವಿವಾವದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿ ಸದಸ್ಯ ಪೀಠದ ನ್ಯಾಯಮೂರ್ತಿಗಳು, ರಾಜೀವ್‌ ಕುಮಾರ್ ತನಿಖೆಗೆ ಸಹಕರಿಸಬೇಕು ಎಂಬ ಆದೇಶ ನೀಡಿದ್ದಾರೆ. ಜತೆಗೆ ಯಾವುದೇ ದಬ್ಬಾಳಿಕೆಯ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬ ಎಚ್ಚರಿಕೆಯನ್ನೂ ಸಿಬಿಐಗೆ ನೀಡಿದ್ದಾರೆ.

ಇದೀಗ ಸುಪ್ರಿಂ ಕೋರ್ಟ್‌ ಆದೇಶದಂತೆ ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ಸಿಬಿಐ ಕಚೇರಿಗೆ ರಾಜೀವ್‌ ಕುಮಾರ್‌ ವಿಚಾರಣೆಗೆ ಹಾಜರಾಗಲಿದ್ದಾರೆ. ಜತೆಗೆ ಅವರನ್ನೂ ಸೇರಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ನ್ಯಾಯಾಂಗ ನಿಂದನೆ ನೋಟಿಸ್‌ನ್ನು ಸುಪ್ರೀಂ ಕೋರ್ಟ್‌ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ನಿಗದಿಪಡಿಸಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಪ್ರತಿಕ್ರಿಯೆ ನೀಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ನಮಗೆ ಸಿಕ್ಕಿದ ‘ನೈತಿಕ ಜಯ’ ಎಂದಿದ್ದಾರೆ. ನಾವು ನ್ಯಾಯಾಂಗ ಮತ್ತು ಎಲ್ಲಾ ಸಂಸ್ಥೆಗಳ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದೇವೆ. ನಾವು ತುಂಬಾ ಕೃತಜ್ಞರಾಗಿದ್ದು, ನ್ಯಾಯಾಲಯದ ಆದೇಶಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ.

ಇನ್ನು, “ರಾಜೀವ್‌ ಕುಮಾರ್‌ ಎಂದೂ ತಾವು ವಿಚಾರಣೆಗೆ ಲಭ್ಯವಿಲ್ಲ ಎಂದು ಹೇಳಿಲ್ಲ. ಆದರೆ ಸಿಬಿಐನವರು ಮಾಡಿದ್ದೇನು? ಅವರು ರಾಜೀವ್‌ ಕುಮಾರ್‌ರನ್ನು ಬಂಧಿಸಲು ಯತ್ನಿಸಿದರು. ಭಾನುವಾರ ಸೀಕ್ರೆಟ್‌ ಆಪರೇಷನ್‌ ಹೆಸರಿನಲ್ಲಿ ಅಧಿಕಾರಿಗಳು ಅವರ ಮನೆಗೆ ಹೋಗಿದ್ದರು. ನೋಟಿಸ್‌ ಕೂಡ ನೀಡದೆ ತೆರಳಿದ್ದರು. ಕೋರ್ಟ್‌ ಯಾವುದೇ ಬಂಧನವಿಲ್ಲ ಎಂದು ಹೇಳಿರುವುದರಿಂದ ನಾವು ಇದಕ್ಕೆ ಸಂಪೂರ್ಣ ಬದ್ಧರಾಗಿದ್ದೇವೆ. ಇದು ಅಧಿಕಾರಿಗಳ ನೈತಿಕತೆಯನ್ನು ಬಲಪಡಿಸುತ್ತದೆ,” ಎಂದಿದ್ದಾರೆ.

ವಿರೋಧ ಪಕ್ಷಗಳ ನಾಯಕರ ಜತೆ ಸಮಾಲೋಚನೆ ನಡೆಸಿ ಧರಣಿ ವಾಪಾಸ್ ತೆಗೆದುಕೊಳ್ಳುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಮಮತಾ ಹೇಳಿದ್ದಾರೆ. “ಚಂದ್ರಬಾಬು ನಾಯ್ಡು ಬರುತ್ತಿದ್ದಾರೆ. ನಾನು ನವೀನ್ ಪಟ್ನಾಯಕ್‌ ಜತೆಯೂ ಸಮಾಲೋಚನೆ ನಡೆಸಲಿದ್ದೇನೆ. ನಂತರ ಈ ಬಗ್ಗೆ ತಿಳಿಸುತ್ತೇನೆ,” ಎಂದಿದ್ದಾರೆ.