samachara
www.samachara.com
ಸುನಂದಾ ಪುಷ್ಕರ್‌ ನಿಗೂಢ ಸಾವು ಪ್ರಕರಣ; ಫೆ. 21ರಿಂದ ಶಶಿ ತರೂರ್‌ ವಿಚಾರಣೆ
ಸುದ್ದಿ ಸಾರ

ಸುನಂದಾ ಪುಷ್ಕರ್‌ ನಿಗೂಢ ಸಾವು ಪ್ರಕರಣ; ಫೆ. 21ರಿಂದ ಶಶಿ ತರೂರ್‌ ವಿಚಾರಣೆ

ಈ ನಿಗೂಢ ಸಾವು ಪ್ರಕರಣದಲ್ಲಿ ಶಶಿ ತರೂರ್‌ ವಿರುದ್ಧದ ಆರೋಪ ಸಾಬೀತಾದರೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

Team Samachara

ಸುನಂದಾ ಪುಷ್ಕರ್‌ ನಿಗೂಢ ಸಾವು ಪ್ರಕರಣದಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿಚಾರಣೆ ಫೆಬ್ರುವರಿ 21ರಿಂದ ಆರಂಭವಾಗಲಿದೆ. ದೆಹಲಿಯ ಎಸಿಎಂಎಂ ನ್ಯಾಯಾಲಯ ಈ ಪ್ರಕರಣವನ್ನು ಇಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ವರ್ಗಾಯಿಸಿದೆ.

ಕೇರಳದ ತಿರುವನಂತಪುರದ ಸಂಸದ ಶಶಿ ತರೂರ್, ತಮ್ಮ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದ ಆರೋಪಿಯಾಗಿದ್ದಾರೆ. ಕೌಟುಂಬಿಕ ದೌರ್ಜನ್ಯ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಶಶಿ ತರೂರ್‌ ಮೇಲಿದೆ.

ಈ ಪ್ರಕರಣದಲ್ಲಿ ನ್ಯಾಯಾಲಯದ ಸಹಾಯಕರಾಗಿ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಕೋರಿ ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಮನವಿಯನ್ನು ಪಟಿಯಾಲ ಹೌಸ್‌ ನ್ಯಾಯಾಲು ತಿರಸ್ಕರಿಸಿದೆ.

2014ರ ಜನವರಿ 17ರಂದು ದೆಹಲಿಯ ಲೀಲಾ ಪ್ಯಾಲೇಸ್‌ ಹೋಟೆಲ್‌ನ ರೂಮ್‌ನಲ್ಲಿ ಸುನಂದಾ ಮೃತದೇಹ ಪತ್ತೆಯಾಗಿತ್ತು. ಶಶಿ ತರೂರ್‌ಗೆ ಸೇರಿದ ದೆಹಲಿಯ ನಿವಾಸದ ನವೀಕರಣ ಕಾರ್ಯ ನಡೆಯುತ್ತಿದ್ದ ಕಾರಣ ಶಶಿ ತರೂರ್‌ ಮತ್ತು ಸುನಂದಾ ಪುಷ್ಕರ್‌ ಕೆಲ ಕಾಲ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ಉಳಿದಿದ್ದರು.

ಸುನಂದಾ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕೌಟುಂಬಿಕ ದೌರ್ಜನ್ಯ ಆರೋಪದ ಮೇಲೆ ಶಶಿ ತರೂರ್‌ ವಿರುದ್ಧ ದೆಹಲಿ ಪೊಲೀಸರು 2018ರ ಮೇ ತಿಂಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಇತ್ತೀಚಿನ ಬೆಳವಣಿಗೆಗಳು ಹಾಗೂ ತನಿಖಾ ವರದಿಯನ್ನು ಸೆಷನ್ಸ್‌ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಸಿಎಂಎಂ ನ್ಯಾಯಾಧೀಶರು ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ.

ಐಪಿಸಿ ಸೆಕ್ಷನ್‌ 498- ಎ (ಕೌಟುಂಬಿಕ ದೌರ್ಜನ್ಯ) ಹಾಗೂ 306ರಡಿ (ಆತ್ಮಹತ್ಯೆಗೆ ಪ್ರಚೋದನೆ) ಶಶಿ ತರೂರ್‌ ವಿರುದ್ಧ ದೆಹಲಿ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ. ತಮ್ಮ ವಿರುದ್ಧದ ಪ್ರಕರಣದಲ್ಲಿ 2018ರ ಜುಲೈ 7ರಂದು ಶಶಿ ತರೂರ್‌ ಜಾಮೀನು ಪಡೆದಿದ್ದರು. ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ಪೂರ್ವ ನಿಯೋಜಿತವಾಗಿ ಹೆಣೆಯಲಾಗಿರುವ ಕಟ್ಟುಕತೆ ಎಂದಿದ್ದರು ಶಶಿ ತರೂರ್‌.

ಸುನಂದಾ ಪುಷ್ಕರ್‌ ಸಾವು ಪ್ರಕರಣದಲ್ಲಿ ಶಶಿ ತರೂರ್‌ ವಿರುದ್ಧ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸುಮಾರು 3 ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಶಶಿ ತರೂರ್‌ ವಿರುದ್ಧದ ಆರೋಪ ಸಾಬೀತಾದರೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.