samachara
www.samachara.com
ಋಣ ಪರಿಹಾರ ಮಸೂದೆ ವಾಪಸ್‌; ಅಂಕಿತ ಹಾಕಲು ಸ್ಪಷ್ಟನೆ ಕೇಳಿದ ರಾಷ್ಟ್ರಪತಿ
ಸುದ್ದಿ ಸಾರ

ಋಣ ಪರಿಹಾರ ಮಸೂದೆ ವಾಪಸ್‌; ಅಂಕಿತ ಹಾಕಲು ಸ್ಪಷ್ಟನೆ ಕೇಳಿದ ರಾಷ್ಟ್ರಪತಿ

ಮಸೂದೆಯಲ್ಲಿ ಕೆಲವು ಅಂಶಗಳು ಸ್ಪಷ್ಟವಾಗಿಲ್ಲ. ಹೀಗಾಗಿ ಮಸೂದೆಯ ನಿರ್ದಿಷ್ಟ ಕಲಂಗಳ ಕುರಿತು ಸ್ಪಷ್ಟೀಕರಣ ನೀಡುವಂತೆ ರಾಷ್ಟ್ರಪತಿ ಹೇಳಿದ್ದಾರೆ.

Team Samachara

ಮೀಟರ್ ಬಡ್ಡಿ ಧಂದೆಕೋರರಿಗೆ ಕಡಿವಾಣ ಹಾಕುವ ಹಾಗೂ ಅವರಿಂದ ಜನಸಾಮಾನ್ಯರು ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ರಾಜ್ಯ ಸರಕಾರದ ಮಹತ್ವದ ಋಣ ಪರಿಹಾರ ಮಸೂದೆಗೆ ಅಂಕಿತ ಹಾಕದೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ವಾಪಸ್‌ ಕಳಿಸಿದ್ದಾರೆ.

ಋಣ ವಿಮೋಚನಾ ಮಸೂದೆಯ ಹಲವು ವಿಷಯಗಳ ಕುರಿತು ಸ್ಪಷ್ಟೀಕರಣ ಕೋರಿರುವ ರಾಷ್ಟ್ರಪತಿ, ಈ ಮಸೂದೆಯ ಕಡತವನ್ನು ಹಿಂದಕ್ಕೆ ಕಳಿಸಿದ್ದಾರೆ. ಹೀಗಾಗಿ ಉದ್ದೇಶಿತ ಮಸೂದೆ ಕಾಯ್ದೆಯಾಗಿ ಜಾರಿಗೆ ಬರಲು ಮತ್ತಷ್ಟು ವಿಳಂಬವಾಗಲಿದೆ.

ರಾಜ್ಯಾದ್ಯಂತ ಜನಸಾಮಾನ್ಯರಿಗೆ ಮೀಟರ್ ಬಡ್ಡಿಯ ಆಧಾರದ ಮೇಲೆ ಸಾಲ ನೀಡಿ ವಿಪರೀತ ಬಡ್ಡಿ ಸುಲಿಗೆ ಮಾಡುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡಿದ್ದ ಸರಕಾರ ಇಂತಹ ಮೀಟರ್ ಬಡ್ಡಿ ಧಂದೆಕೋರರಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಋಣ ವಿಮೋಚನಾ ಮಸೂದೆಯನ್ನು ಜಾರಿಗೆ ತಂದಿತ್ತು.

Also read: ಸಣ್ಣ ರೈತರ ಋಣ ಸಂದಾಯ; ಸಮ್ಮಿಶ್ರ ಸರಕಾರದ ಹೊಸ ಅಧಿನಿಯಮದಲ್ಲೇನಿದೆ?

ಈ ಮಸೂದೆಗೆ ವಿಧಾನಮಂಡಲದ ಉಭಯ ಸದನಗಳು ಅಂಗೀಕಾರ ನೀಡಿದ್ದವು. ಆನಂತರ ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳಿಸಿಕೊಡಲಾಗಿತ್ತು. ಇದೀಗ ರಾಷ್ಟ್ರಪತಿಗಳು ಮಸೂದೆ ಅಂಕಿತ ಹಾಕದೆ ಹಿಂತಿರುಗಿಸಿದ್ದಾರೆ. ಮಸೂದೆಯಲ್ಲಿ ಕೆಲವು ಅಂಶಗಳು ಸ್ಪಷ್ಟವಾಗಿಲ್ಲ. ಹೀಗಾಗಿ ಮಸೂದೆಯ ನಿರ್ದಿಷ್ಟ ಕಲಂಗಳ ಕುರಿತು ಸ್ಪಷ್ಟೀಕರಣ ನೀಡುವಂತೆ ರಾಷ್ಟ್ರಪತಿ ಹೇಳಿದ್ದಾರೆ.

ದೇವರಾಜ ಅರಸು ನಂತರ ಋಣ ವಿಮೋಚನಾ ಕಾಯ್ದೆಯನ್ನು ಜಾರಿಗೊಳಿಸಲು ಕುಮಾರಸ್ವಾಮಿ ಸರಕಾರ ಮುಂದಾಗಿದ್ದುದು ವ್ಯಾಪಕ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಇದೀಗ ರಾಷ್ಟ್ರಪತಿಗಳು ಅದಕ್ಕೆ ಇನ್ನೂ ಅಂಕಿತ ಹಾಕದೆ ಇರುವುದರಿಂದ ಮೀಟರ್ ಬಡ್ಡಿ ಧಂದೆಕೋರರ ಜಾಲಕ್ಕೆ ಸಿಲುಕಿದ ಬಡ ಜನ ಕಾಯ್ದೆಯ ಲಾಭ ಪಡೆಯಲು ಮತ್ತಷ್ಟು ದಿನಗಳ ಕಾಲ ಕಾಯಬೇಕಾಗಿ ಬಂದಿದೆ.