samachara
www.samachara.com
ತೇಲ್ತುಂಬ್ಡೆ ಬಿಡುಗಡೆಗಾಗಿ ವಿಶ್ವಸಂಸ್ಥೆಗೆ ಮೊರೆ; ಚಾಮ್‌ಸ್ಕಿ & 140ಕ್ಕೂ ಹೆಚ್ಚು ಸಂಸ್ಥೆಗಳಿಂದ ಪತ್ರ
ಸುದ್ದಿ ಸಾರ

ತೇಲ್ತುಂಬ್ಡೆ ಬಿಡುಗಡೆಗಾಗಿ ವಿಶ್ವಸಂಸ್ಥೆಗೆ ಮೊರೆ; ಚಾಮ್‌ಸ್ಕಿ & 140ಕ್ಕೂ ಹೆಚ್ಚು ಸಂಸ್ಥೆಗಳಿಂದ ಪತ್ರ

ಡಾ. ತೇಲ್ತುಂಬ್ಡೆಯವರಿಗೆ ನ್ಯಾಯ ಒದಗಿಸಲು, ದಬ್ಬಾಳಿಕೆಯ ಅಪಾಯಗಳಿಂದ ಪ್ರಜಾಪ್ರಭುತ್ವವನ್ನು ಕಾಪಾಡಲು ಭಾರತ ಸರ್ಕಾರವನ್ನು ಸಂಪರ್ಕಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಲಾಗಿದೆ.

ದೇಶದ ಖ್ಯಾತ ದಲಿತ ಪರ ಚಿಂತಕ, ಸಮಾಜಿಕ ಹೋರಾಟಗಾರ ಆನಂದ್‌ ತೇಲ್ತುಂಬ್ಡೆ ಬಂಧನ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ತೇಲ್ತುಂಬೆ ಮೇಲಿನ ‘ತಿರುಚಿದ ಆರೋಪ’ಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಅಮೆರಿಕಾದ ಖ್ಯಾತ ಚಿಂತಕರಾದ ನೋಮ್‌ ಚಾಮ್‌ಸ್ಕಿ, ಕಾರ್ನೆಲ್‌ ವೆಸ್ಟ್‌ ಮೊದಲಾದ ವ್ಯಕ್ತಿಗಳು, 90ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಂಘಟನೆಗಳು, 50 ಕ್ಕೂ ಹೆಚ್ಚು ಕಾಲೇಜು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿಶ್ವಸಂಸ್ಥೆಯ ಬಾಗಿಲು ಬಡಿದಿದ್ದಾರೆ.

ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವಂತೆ ಇವರುಗಳು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟನಿಯೋ ಗುಟೆರಾಸ್‌ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತೇಲ್ತುಂಬ್ಡೆ ವಿರುದ್ಧದ ಪ್ರಕರಣ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧದ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣ ಎಂಬುದಾಗಿ ಹೇಳಲಾಗಿದೆ.

“2017ರ ಡಿಸೆಂಬರ್‌ 31ರಂದು ನಡೆದ ಭೀಮಾ ಕೋರೆಗಾಂವ್‌ ಹಿಂಸಾಚಾರದ ಸಂದರ್ಭದಲ್ಲಿ ತೇಲ್ತುಂಬ್ಡೆ ಸ್ಥಳದಲ್ಲಿ ಇರಲಿಲ್ಲ. ಹೀಗಿದ್ದೂ ಇದಾದ ನಂತರ ‘ಕಾಮ್ರೇಡ್‌ ಆನಂದ್‌’ ಎಂದು ಉಲ್ಲೇಖಿಸಿದ್ದ ಪತ್ರಗಳನ್ನು ಪುಣೆ ಪೊಲೀಸರು ಬಿಡುಗಡೆ ಮಾಡಿ ಬಂಧನಕ್ಕೆ ಸಮರ್ಥನೆ ನೀಡಿದ್ದಾರೆ. ಇದೆಲ್ಲವನ್ನೂ ನಿರಾಕರಿಸುವ ಸಾಕ್ಷ್ಯಗಳನ್ನು ತೇಲ್ತುಂಬ್ಡೆ ಕೂಡ ನೀಡಿದ್ದಾರೆ. ಹೀಗಿದ್ದು ಪುಣೆಯ ಪೊಲೀಸರು ತಿರುಚಿದ ಪತ್ರಗಳ ಮೂಲಕ, ನಕಲಿ ಆರೋಪಗಳ ಮೂಲಕ ಡಾ. ತೇಲ್ತುಂಬ್ದೆಯವರನ್ನು ಬೆದರಿಸುವ ಮತ್ತು ಅವರ ಧ್ವನಿಯನ್ನು ಉಡುಗಿಸುವ ಯತ್ನವನ್ನು ಮುಂದುವರಿಸಿದ್ದಾರೆ.”

“ಹೀಗಾಗಿ ನಾವು ಡಾ. ತೇಲ್ತುಂಬ್ಡೆಯವರಿಗೆ ನ್ಯಾಯ ಒದಗಿಸಲು ಮತ್ತು ದಬ್ಬಾಳಿಕೆಯ ಅಪಾಯಗಳಿಂದ ಪ್ರಜಾಪ್ರಭುತ್ವವನ್ನು ಕಾಪಾಡಲು, ಅವರ ಮೇಲಿನ ಎಲ್ಲಾ ಆರೋಪಗಳನ್ನು ತಕ್ಷಣವೇ ಹಿಂಪಡೆಯಲು ಭಾರತ ಸರ್ಕಾರವನ್ನು ಸಂಪರ್ಕಿಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸುತ್ತೇವೆ,” ಎಂದು ಪತ್ರದಲ್ಲಿ ಹೇಳಲಾಗಿದೆ.

ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ತೇಲ್ತುಂಬ್ಡೆ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನದ ಪರವಾಗಿ ನಿಂತಿದ್ದಾರೆ. ಅವರ ಹಲವು ಪುಸ್ತಕ, ಲೇಖನಗಳನ್ನು ವಿವಿಗಳಲ್ಲಿ ವಿಶ್ವದಾದ್ಯಂತ ಬೋಧಿಸಲಾಗುತ್ತಿದೆ ಎಂದು ಇದೇ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಲಾಗಿದೆ.

ಜತಗೆ ನಿಮ್ಮನ್ನು ಭೇಟಿಯಾಗಲು ಮತ್ತು ನಿಮ್ಮ ತಂಡವನ್ನು ಮುಖತಃ ಆದಷ್ಟು ಬೇಗ ಭೇಟಿಯಾಗಿ ನಮ್ಮ ಕಾಳಜಿಗಳನ್ನು ವ್ಯಕ್ತಪಡಿಸಲು ಅವಕಾಶ ಕೋರುತ್ತೇವೆ ಎಂದು ಆಂಟನಿಯೋ ಗುಟೆರಾಸ್‌ಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಈ ಹಿಂದೆ, ತಮ್ಮ ಬಂಧನ ಯತ್ನ ವಿರೋಧಿಸಿ ಬೆಂಬಲಕ್ಕೆ ಧಾವಿಸುವಂತೆ ತೇಲ್ತುಂಬ್ಡೆ ಮನವಿ ಮಾಡಿದಾಗ ಸ್ಪಂದಿಸಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರರು ತೇಲ್ತುಂಬ್ಡೆ ಅವರನ್ನು ಬಂಧಿಸದಂತೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದರು.

ಈ ಯತ್ನ ಫಲ ನೀಡದ ಹಿನ್ನೆಲೆಯಲ್ಲಿ ಇದೀಗ ನೇರವಾಗಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಈ ಕೋರಿಕೆಗೆ ಆಂಟನಿಯೋ ಗುಟೆರಾಸ್‌ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Also read: ನಿಲ್ಲದ ‘ನಗರ ನಕ್ಸಲ’ರ ಬಂಧನ ಸರಣಿ; ಮುಂಬೈನಲ್ಲಿ ಮುಂಜಾನೆ 3.30ಕ್ಕೆ ತೇಲ್ತುಂಬ್ದೆ ಬಂಧನ

Also read: ಬಹಿರಂಗ ಪತ್ರ, ಜನ ಬೆಂಬಲ & ‘ನಗರ ನಕ್ಸಲ್‌’ ಆನಂದ್‌ ತೇಲ್ತುಂಬ್ಡೆ ಬಂಧನ