samachara
www.samachara.com
ಅಕ್ರಮ ವಲಸೆ ಆರೋಪ; ಅಮೆರಿಕದಲ್ಲಿ 129 ಭಾರತೀಯರ ಬಂಧನ
ಸುದ್ದಿ ಸಾರ

ಅಕ್ರಮ ವಲಸೆ ಆರೋಪ; ಅಮೆರಿಕದಲ್ಲಿ 129 ಭಾರತೀಯರ ಬಂಧನ

ಅಮೆರಿಕದ ವಲಸೆ ವಿಭಾಗದ ಅಧಿಕಾರಿಗಳು ಶುಕ್ರವಾರ ವಲಸೆ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 130 ಜನ ವಿದೇಶಿಯರನ್ನು ಬಂಧಿಸಿದ್ದಾರೆ. ಇದರಲ್ಲಿ 129 ಜನ ಭಾರತೀಯರು ಎನ್ನಲಾಗಿದೆ.

Team Samachara

ಅಕ್ರಮ ವಲಸೆ ಆರೋಪದ ಮೇಲೆ 129 ಭಾರತೀಯರನ್ನು ಅಮೆರಿಕದ ಮಿಚಿಗನ್‌ನ ಡೆಟ್ರಾಯಿಟ್ ನಗರದಲ್ಲಿ ಬಂಧಿಸಲಾಗಿದೆ. ಈ ಬಂಧನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ವಲಸೆ ವಿಭಾಗದ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ವಲಸೆ ಉಲ್ಲಂಘನೆ ಪ್ರಕರಣದಲ್ಲಿ 130 ಜನ ವಿದೇಶಿಯರನ್ನು ಬಂಧಿಸಿದ್ದಾರೆ. ಇದರಲ್ಲಿ 129 ಜನ ಭಾರತೀಯರು ಎಂದು ಅಧಿಕಾರಿ ಕ್ಯಾರಿಸ್ಸಾ ಕಟ್ರೆಲ್ ತಿಳಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳಿಗೆ ಹಣ ಪಾವತಿಸಿ ಉಳಿದುಕೊಳ್ಳುವ ‘ಪೇ ಟು ಸ್ಟೇ’ ವ್ಯವಸ್ಥೆಯಡಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಆಂತರಿಕ ಭದ್ರತಾ ಇಲಾಖೆಯ ಕೆಲ ರಹಸ್ಯ ಏಜೆಂಟ್‌ಗಳು ಕಾರ್ಯಾಚರಣೆ ನಡೆಸಿದ್ದರು. ಈ ಏಜೆಂಟ್‌ಗಳು ಸ್ಥಾಪಿಸಿದ್ದ ನಕಲಿ ವಿಶ್ವವಿದ್ಯಾಲಯದಲ್ಲಿ ಉಳಿದುಕೊಳ್ಳಲು ಹಣ ನೀಡಿದ ಆರೋಪದ ಮೇಲೆ ಭಾರತೀಯರನ್ನು ಬಂಧಿಸಲಾಗಿದೆ.

‘ಪೇ ಟು ಸ್ಟೇ’ ವ್ಯವಸ್ಥೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ವಲಸಿಗರಿದ್ದಾರೆ ಎಂದು ಆರೋಪಿಸಿರುವ ಅಮೆರಿಕದ ವಲಸೆ ವಿಭಾಗದ ಅಧಿಕಾರಿಗಳು ಇಂಥವರನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಕೆಲವು ನಕಲಿ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ವಿದ್ಯಾರ್ಥಿಗಳು ವಿಸಾ ಪಡೆದು ಅಮೆರಿಕದಲ್ಲೇ ಶಾಶ್ವತವಾಗಿ ನೆಲೆಸುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.

ಬಂಧಿತ ಆರೋಪಿಗಳನ್ನು ಗಡಿಪಾರು ಮಾಡಲು ನಿರ್ದೇಶಿಸಲಾಗಿದೆ. ಅಲ್ಲದೆ ವಲಸೆ ನ್ಯಾಯಾಲಯ ಇವರ ಪ್ರಕರಣಗಳನ್ನು ಇತ್ಯರ್ಥಪಡಿಸುವ ತನಕ ಬಂಧಿತರು ಅಮೆರಿಕದ ವಲಸೆ ಅಧಿಕಾರಿಗಳ ವಶದಲ್ಲಿರಲಿದ್ದಾರೆ.

ಇದರ ನಡುವೆ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ತೆಲುಗು ಸಂಘಟನೆಗಳು ಕಾರ್ಯಕ್ರಮಗಳನ್ನು ರೂಪಿಸಿವೆ. "ಯೂನಿವರ್ಸಿಟಿ ಆಫ್ ಫರ್ಮಿಂಗ್ಟನ್ ಐಸಿಇ ಇಶ್ಯೂ; ಎಫೆಕ್ಟ್ ಆನ್ ಎಫ್-1 ಸಿಟಿಪಿ ಎಂಪ್ಲಾಯ್ಮೆಂಟ್ " ಎಂಬ ಶೀರ್ಷಿಕೆಯಯ ವೆಬ್‌ ಬ್ಯಾನರ್ ಆರಂಭಿಸಿರುವ ಅಮೆರಿಕನ್ ತೆಲುಗು ಅಸೋಸಿಯೇಷನ್, ಬಂಧಿತ ವಿದ್ಯಾರ್ಥಿಗಳ ನೆರವಿಗಾಗಿ ಸಹಭಾಗಿತ್ವದ ಒಂದು ತಂಡವನ್ನೂ ರಚಿಸಿದೆ.

ಅಮೆರಿಕದ ತೆಲುಗು ಅಸೋಸಿಯೇಷನ್ ತಂಡ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿ ಹರ್ಷವರ್ಧನ್ ಸಿಂಗ್ಲ ಅವರ ಬಳಿ ಪ್ರಕರಣದ ಕುರಿತು ಚರ್ಚೆ ನಡೆಸಿದೆ ಎನ್ನಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಮೆರಿಕ ಸರಕಾರವನ್ನು ವಂಚಿಸುವ ಉದ್ದೇಶವಿಲ್ಲ ಎಂದು ಅನಿವಾಸಿ ತೆಲುಗು ಸೊಸೈಟಿ ಅಧ್ಯಕ್ಷ ಪಿ. ರವಿಕುಮಾರ್ ಹೇಳಿದ್ದಾರೆ.

ಬಂಧಿತರಲ್ಲಿ ಹೆಚ್ಚಿನವರು ಆಂಧ್ರ ಪ್ರದೇಶದವರು ಎನ್ನಲಾಗಿದ್ದು ರಾಜ್ಯ ಸರಕಾರ ಕೂಡಾ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಹಾಗೂ ಕುಟುಂಬದವರ ನೆರವಿಗೆ ಮುಂದಾಗಿದೆ. ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು 24 X 7 ಸಹಾಯವಾಣಿ 08632340678 ಗೆ ಕರೆ ಮಾಡುವಂತೆ ಪಿ. ರವಿಕುಮಾರ್ ತಿಳಿಸಿದ್ದಾರೆ.