samachara
www.samachara.com
ಮಗನ ನರಬಲಿಗೆ ಸರಕಾರದ ಅನುಮತಿ ಕೋರಿದ ಬಿಹಾರ ತಾಂತ್ರಿಕ
ಸುದ್ದಿ ಸಾರ

ಮಗನ ನರಬಲಿಗೆ ಸರಕಾರದ ಅನುಮತಿ ಕೋರಿದ ಬಿಹಾರ ತಾಂತ್ರಿಕ

ಬಿಹಾರದ ತಾಂತ್ರಿಕನೊಬ್ಬ ತನ್ನ ಮಗನನ್ನು ಬಲಿಕೊಡಲು ಸರಕಾರಿ ಅಧಿಕಾರಿಗಳ ಅನುಮತಿ ಕೋರಿ ಪತ್ರ ಬರೆದಿದ್ದಾನೆ.

ಸಮಾಜದಲ್ಲಿ ಇಂದಿಗೂ ಮೌಢ್ಯ, ಕಂದಾಚಾರ ಎಷ್ಟರ ಮಟ್ಟಿಗೆ ಬೇರು ಬಿಟ್ಟಿದೆ ಎಂಬುದಕ್ಕೆ ಬಿಹಾರದ ಬೆಗುಸರಾಯ್ ಜಿಲ್ಲೆಯ ಘಟನೆಯೊಂದು ಸಾಕ್ಷಿಯಾಗಿದೆ. ತಾಂತ್ರಿಕ ಸಾಧನೆಗಾಗಿ ತನ್ನ ಮಗನನ್ನೇ ಬಲಿ ಕೊಡಲು ಅನುಮತಿ ಕೊಡಬೇಕೆಂದು ತಾಂತ್ರಿಕನೊಬ್ಬ ಸರಕಾರದಿಂದ ಅನುಮತಿ ಕೇಳಿ ಪತ್ರ ಬರೆದಿದ್ದಾನೆ.

ಬೆಗುಸರಾಯ್ ಜಿಲ್ಲೆಯ ಮೋಹನ್‌ಪುರ್ ಪಹದ್‌ಪುರ್ ನಿವಾಸಿ ಸುರೇಂದ್ರ ಪ್ರಸಾದ್ ಸಿಂಗ್ ಎಂಬ ತಾಂತ್ರಿಕ ಕಾಮಾಕ್ಯ ದೇವತೆಯನ್ನು ಒಲಿಸಿಕೊಳ್ಳುವ ಸಲುವಾಗಿ ತನ್ನ ಮಗನನ್ನೇ ಬಲಿಕೊಡಲು ಮುಂದಾಗಿದ್ದಾನೆ. ಅಲ್ಲದೆ ತನ್ನ ಮಗನನ್ನು ಬಲಿಕೊಡಲು ಅನುಮತಿ ನೀಡುವಂತೆ ಜನವರಿ 29 ರಂದು ಉಪ ವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾನೆ.

‘ಬಿಂದು ಮಾ ಮಾನವ್ ಕಲ್ಯಾಣ್ ಸಂಸ್ಥಾನ’ ಎಂಬ ಅಪರಿಚಿತ ಸಂಸ್ಥೆಯ ಹೆಸರಿನ ಲೆಟರ್ ಹೆಡ್‌ನಲ್ಲಿ ಪತ್ರ ಬರೆದಿರುವ ತಾಂತ್ರಿಕ, “ಮಾನವನ ಬಲಿದಾನ ಅಪರಾಧವಲ್ಲ. ಬಲಿ ಕೊಡುವಂತೆ ಕಾಮಾಕ್ಯ ದೇವತೆಯಿಂದ ನನಗೆ ಆದೇಶವಾಗಿದೆ. ನಾನು ನನ್ನ ಮಗನನ್ನು ಬಲಿ ಕೊಡಲು ಮುಂದಾಗಿದ್ದೇನೆ. ಇಂಜಿನಿಯರ್‌ ಆಗಿರುವ ನನ್ನ ಮಗ ದೇವಾಲಯಕ್ಕೆ ಆರ್ಥಿಕ ಸಹಾಯ ನೀಡುತ್ತಿಲ್ಲ. ಆತ ರಾವಣನಿದ್ದಂತೆ” ಎಂದು ಪತ್ರದಲ್ಲಿ ಹೇಳಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಪ ವಿಭಾಗಾಧಿಕಾರಿ ಸಂಜೀವ್ ಕುಮಾರ್ ಚೌಧರಿ, “ಇದೊಂದು ಆಘಾತಕಾರಿ ವಿಚಾರ. ಮಾನವ ಜೀವದ ಅರ್ಪಣೆ ಎಂಬುದು ಕಾನೂನು ಬಾಹಿರ. ಈಗಾಗಲೇ ತಾಂತ್ರಿಕನ ಬಂಧನಕ್ಕೆ ತಂಡ ರಚಿಸಲಾಗಿದೆ. ಆತನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದ್ದಾರೆ.

ಮಾನವನ ತಲೆ ಬುರುಡೆ ಹಿಡಿದು ಸುತ್ತಾಡುವ, ಬೆತ್ತಲೆಯಾಗಿ ಓಡಾಡುವ ಸುರೇಂದ್ರ ಪ್ರಸಾದ್‌ನನ್ನು ಊರಿನ ಜನ ಹುಚ್ಚು ಬಾಬಾ ಎಂದೇ ಕರೆಯುತ್ತಾರೆ. ಈಗಲೂ ಪ್ರಚಾರಕ್ಕಾಗಿಯೇ ಆತ ಇಂತಹ ಗಿಮಿಕ್ ಮಾಡಿರುವ ಸಾಧ್ಯತೆ ಇದೆ ಎಂದು ಊರಿನ ಜನ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪ್ರಸ್ತುತ ಆತನ ಮನಸ್ಥಿತಿಯನ್ನು ನೋಡಿದರೆ ನಮ್ಮ ಮಕ್ಕಳ ರಕ್ಷಣೆ ಕುರಿತು ಭಯವಾಗುತ್ತದೆ ಎಂದು ಕೆಲವರು ಭೀತಿ ವ್ಯಕ್ತಪಡಿಸಿದ್ದಾರೆ.