samachara
www.samachara.com
ಸಿಬಿಐಗೆ ರಿಷಿ ಕುಮಾರ್‌ ಶುಕ್ಲಾ ಹೊಸ ನಿರ್ದೇಶಕ
ಸುದ್ದಿ ಸಾರ

ಸಿಬಿಐಗೆ ರಿಷಿ ಕುಮಾರ್‌ ಶುಕ್ಲಾ ಹೊಸ ನಿರ್ದೇಶಕ

1983ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಶುಕ್ಲಾ ಸದ್ಯ ಮಧ್ಯ ಪ್ರದೇಶ ಪೊಲೀಸ್‌ ಗೃಹ ನಿರ್ಮಾಣ ನಿಗಮದ ಅಧ್ಯಕ್ಷರಾಗಿದ್ದಾರೆ.

Team Samachara

ಅಲೋಕ್‌ ಕುಮಾರ್‌ ವರ್ಮಾ ನಿರ್ಗಮನದ ನಂತರ ಮುಂದೆ ಯಾರು ಎಂಬ ಪ್ರಶ್ನೆ ಹುಟ್ಟುಹಾಕಿದ್ದ ಸಿಬಿಐ ನಿರ್ದೇಶಕರ ಹುದ್ದೆಗೆ ರಿಷಿ ಕುಮಾರ್‌ ಶುಕ್ಲಾ ಅವರನ್ನು ನೇಮಕಗೊಳಿಸಲಾಗಿದೆ. ಮಧ್ಯ ಪ್ರದೇಶದ ಮಾಜಿ ಡಿಜಿಪಿಯಾಗಿರುವ ಶುಕ್ಲಾ ನೇಮಕವನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಶನಿವಾರ ಘೋಷಿಸಿದೆ.

1983ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಶುಕ್ಲಾ ಸದ್ಯ ಮಧ್ಯ ಪ್ರದೇಶ ಪೊಲೀಸ್‌ ಗೃಹ ನಿರ್ಮಾಣ ನಿಗಮದ ಅಧ್ಯಕ್ಷರಾಗಿದ್ದಾರೆ. ಶುಕ್ರವಾರ ನಡೆದ ನೇಮಕಾತಿಯ ಉನ್ನತಾಧಿಕಾರ ಸಮಿತಿಯ ಎರಡನೇ ಸಭೆಯಲ್ಲಿ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ನಡೆದಿದ್ದ ಈ ಸಭೆಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು.

ಇದಕ್ಕೂ ಮೊದಲು ಶುಕ್ರವಾರ ಸುಪ್ರೀಂ ಕೋರ್ಟ್‌, ಸಿಬಿಐ ನಿರ್ದೇಶಕರ ಹುದ್ದೆ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖವಾದುದು. ಹೀಗಾಗಿ ತುಂಬಾ ಸಮಯ ಪ್ರಭಾರಿ ನಿರ್ದೇಶಕರನ್ನೇ ಇಟ್ಟುಕೊಂಡಿರುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಜತೆಗೆ ಸರಕಾರ ಯಾಕೆ ಇನ್ನೂ ಆ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೇಳಿತ್ತು.

ಸುಪ್ರಿಂ ಕೋರ್ಟ್‌ ಸೂಚನೆಯ ನಂತರ ಕೇಂದ್ರ ಸರಕಾರ ಆ ಸ್ಥಾನಕ್ಕೆ ಶುಕ್ಲಾ ಅವರನ್ನು ನೇಮಿಸಿದೆ. ಈ ಹಿಂದೆ ಜನವರಿ 10ರಂದು ಅಲೋಕ್‌ ಕುಮಾರ್ ವರ್ಮಾ ಅವರನ್ನು ಕೇಂದ್ರ ಸರಕಾರ ಸಿಬಿಐ ನಿರ್ದೇಶಕರ ಹುದ್ದೆಯಿಂದ ವಜಾಗೊಳಿಸಿದ ನಂತರ ಎಂ. ನಾಗೇಶ್ವರ್‌ ರಾವ್‌ ಪ್ರಭಾರಿಯಾಗಿ ಆ ಹುದ್ದೆಯಲ್ಲಿ ಮುಂದುವರಿದಿದ್ದರು. ಈ ಜಾಗಕ್ಕೀಗ ಶುಕ್ಲಾ ಬಂದಿದ್ದಾರೆ.

ಶುಕ್ಲಾ ಈ ಹಿಂದೆ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಜತೆಗೆ ಭಯೋತ್ಪಾದಕರ ವಿರುದ್ಧದ ಕಾರ್ಯಚರಣೆಗಳ ಮೂಲಕ ಹೆಸರಾಗಿದ್ದವರು. ಈಗ ಅವರು ಎರಡು ವರ್ಷಗಳ ಅವಧಿಗೆ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿರಲಿದ್ದಾರೆ.