samachara
www.samachara.com
‘ಬಜೆಟ್‌ನಲ್ಲಿ ಆಂಧ್ರಕ್ಕೆ ಏನೂ ಕೊಟ್ಟಿಲ್ಲ’; ಕೇಂದ್ರದ ವಿರುದ್ಧ ಮತ್ತೆ ಕಿಡಿಕಾರಿದ ನಾಯ್ಡು
ಸುದ್ದಿ ಸಾರ

‘ಬಜೆಟ್‌ನಲ್ಲಿ ಆಂಧ್ರಕ್ಕೆ ಏನೂ ಕೊಟ್ಟಿಲ್ಲ’; ಕೇಂದ್ರದ ವಿರುದ್ಧ ಮತ್ತೆ ಕಿಡಿಕಾರಿದ ನಾಯ್ಡು

ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಂಡಿಸಿರುವ ಈ ಬಜೆಟ್‌ನಲ್ಲೂ ಹಿಂದಿನ ಬಜೆಟ್‌ಗಳಂತೆ ಕೇಂದ್ರ ಸರಕಾರ ತನ್ನ ಚೀಲದಿಂದ ಆಂಧ್ರಕ್ಕೆ ಏನನ್ನೂ ಕೊಟ್ಟಿಲ್ಲ ಎಂದು ಚಂದ್ರಬಾಬು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ ಬಾರಿಯ ಬಜೆಟ್‌ನಲ್ಲೂ ಆಂಧ್ರಪ್ರದೇಶಕ್ಕೆ ಏನನ್ನೂ ಕೊಟ್ಟಿಲ್ಲ ಎಂದು ಟಿಡಿಪಿ ಆರೋಪಿಸಿದೆ. ಕೇಂದ್ರ ಸರಕಾರ ಆಂಧ್ರಪ್ರದೇಶಕ್ಕೆ ದ್ರೋಹವೆಸಗಿದೆ, ರಾಜ್ಯದ ಬೇಡಿಕೆಗಳನ್ನು ಪೂರೈಸುವಲ್ಲಿ ಕೇಂದ್ರ ಸೋತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ.

ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಮಾತನಾಡಿರುವ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಂಡಿಸಲಾಗಿರುವ ಈ ಬಜೆಟ್‌ನಲ್ಲೂ ಹಿಂದಿನ ಬಜೆಟ್‌ಗಳಂತೆ ಕೇಂದ್ರ ಸರಕಾರ ತನ್ನ ಚೀಲದಿಂದ ಆಂಧ್ರಕ್ಕೆ ಏನನ್ನೂ ಕೊಟ್ಟಿಲ್ಲ. ಹೀಗಾಗಿ ತೆಲುಗು ದೇಶಂ ಪಕ್ಷ ಶುಕ್ರವಾರವನ್ನು ಕಪ್ಪು ದಿನವನ್ನಾಗಿ ಅಚರಿಸಲಿದೆ” ಎಂದರು.

ಬಿಜೆಪಿ ಸಂಸದರನ್ನು ತರಾಟೆಗೆ ತೆಗೆದುಕೊಂಡ ನಾಯ್ಡು, “ಆಂದ್ರಪ್ರದೇಶದ ಶಾಸಕರು ಸಂಸದರು ಸಾರ್ವಜನಿಕ ಪ್ರತಿನಿಧಿಗಳಾಗಲು ಅನರ್ಹರಾಗಿದ್ದಾರೆ” ಎಂದು ಟೀಕಿಸಿದರು.

ಕೇಂದ್ರದ ವಿರುದ್ಧ ಆರೋಪಗಳ ಸುರಿಮಳೆಗೆರದ ನಾಯ್ಡು, “ತೆಲುಗು ದೇಶಂ ಪಕ್ಷ ಯಾವ ವಿಚಾರದಲ್ಲೂ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ. ನಮಗೆ ಕೇಂದ್ರದ ಮೇಲೆ ಎಷ್ಟೇ ಬೇಸರವಿದ್ದರೂ ಮೋದಿಯವರನ್ನು ಸರ್ ಎಂದೇ ಕರೆಯುತ್ತಿದ್ದೆವು. ಆದರೆ ಅವರು ನಮ್ಮ ಅವಶ್ಯಕತೆಯನ್ನು ಪೂರೈಸಲೇ ಇಲ್ಲ. ಅಮರಾವತಿಗೆ ನೀರು ಹಾಗೂ ಧೂಳಿನ ಹೊರತಾಗಿ ಬೇರೇನನ್ನೂ ನೀಡಿಲ್ಲ. ಈಗ ಕಿಯಾ ಮೋಟರ್ಸ್ ಅನ್ನು ಆಂಧ್ರಕ್ಕೆ ತಂದಿದ್ದಾರೆ ಎಂದು ಪ್ರಚಾರ ಮಾಡುತ್ತಿರುವುದು ತೀರಾ ಅಸಂಬದ್ಧ” ಎಂದರು.

“ಮೋದಿ ಅಳ್ವಿಕೆ ಬ್ರಿಟಿಷ್ ಆಡಳಿತಕ್ಕಿಂತ ಕೆಟ್ಟದಾಗಿದೆ. ನಾವು ಕೇಂದ್ರ ಸರಕಾರಕ್ಕೆ ಏಕೆ ತೆರಿಗೆ ಪಾವತಿಸಬೇಕು? ರಾಜ್ಯದ ಆದಾಯದಲ್ಲಿ ಕೇಂದ್ರದ ಹಕ್ಕು ಏನು?” ಎಂದು ಪ್ರಶ್ನಿಸಿದ ಅವರು, “ಕೇಂದ್ರ ರಾಜ್ಯಗಳ ಮೇಲೆ ಬೆದರಿಕೆಯ ರಾಜಕಾರಣ ನಡೆಸುತ್ತಿದೆ” ಎಂದು ಆರೋಪಿಸಿದರು.

ಅಲ್ಲದೆ ಕೇಂದ್ರಕ್ಕೆ ದಕ್ಷಿಣ ಭಾರತದಲ್ಲಿ ದೊಡ್ಡ ನಾಯಕರಿಲ್ಲ. ಪ್ರಬಲ ನಾಯಕರಾಗಿದ್ದ ವೆಂಕಯ್ಯ ನಾಯ್ಡು ಅವರನ್ನು ಮೂಲೆಗುಂಪು ಮಾಡಿದ್ದೀರಿ. ಮುಂದೆ ಹೇಗೆ ಮತದಾರರ ಮೇಲೆ ಪ್ರಭಾವ ಬೀರಲು ಸಾಧ್ಯ ಎಂದು ಗೇಲಿ ಮಾಡಿದರು.

ಪೋಲಾವರಾಮ್ ಯೋಜನೆ, ಕಡಪ ಉಕ್ಕಿನ ಸ್ಥಾವರ, ವಿಶಾಖಪಟ್ಟಣಂ ರೈಲ್ವೆ ವಲಯಕ್ಕೂ ಕೇಂದ್ರ ಸರಕಾರ ಸಹಕರಿಸುತ್ತಿಲ್ಲ ಎಂದು ದೂರಿದರು.