samachara
www.samachara.com
ನಿಲ್ಲದ ‘ನಗರ ನಕ್ಸಲ’ರ ಬಂಧನ ಸರಣಿ; ಮುಂಬೈನಲ್ಲಿ ಮುಂಜಾನೆ 3.30ಕ್ಕೆ ತೇಲ್ತುಂಬ್ದೆ ಬಂಧನ
ಸುದ್ದಿ ಸಾರ

ನಿಲ್ಲದ ‘ನಗರ ನಕ್ಸಲ’ರ ಬಂಧನ ಸರಣಿ; ಮುಂಬೈನಲ್ಲಿ ಮುಂಜಾನೆ 3.30ಕ್ಕೆ ತೇಲ್ತುಂಬ್ದೆ ಬಂಧನ

ತೇಲ್ತುಂಬ್ದೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ವಜಾಗೊಳಿಸಿತ್ತು. ಅರ್ಜಿ ವಜಾಗೊಳಿಸುತ್ತಿದ್ದಂತೆ ಚುರುಕಾದ ಪುಣೆ ಪೊಲೀಸರು ರಾತೋ ರಾತ್ರಿ ತೇಲ್ತುಂಬ್ದೆ ಅವರನ್ನು ಬಂಧಿಸಿದ್ದಾರೆ.

Team Samachara

ದೇಶದಲ್ಲಿ ಬಂಧಿತರಾದ ‘ಅರ್ಬನ್‌ ನಕ್ಸಲೈಟ್‌’ಗಳ ಪಟ್ಟಿಗೆ ಆನಂದ್‌ ತೇಲ್ತುಂಬ್ದೆ ಎಂಬ ಹೊಸ ಹೆಸರು ಸೇರ್ಪಡೆಯಾಗಿದೆ. ದೇಶದ ದಲಿತ ಚಿಂತನೆಗಳ ಕೇಂದ್ರದಲ್ಲಿದ್ದ ಸಾಮಾಜಿಕ ಹೋರಾಟಗಾರ, ಗೋವಾ ಇನ್ಸಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಪ್ರಾಧ್ಯಾಪಕ ಆನಂದ್‌ ತೇಲ್ತುಂಬ್ದೆ ಅವರನ್ನು ಪುಣೆ ಪೊಲೀಸರು ಬೆಳಗ್ಗಿನ ಜಾವ 3.30ಕ್ಕೆ ಮುಂಬೈ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ.

2017ರ ಭೀಮಾ ಕೊರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ತೇಲ್ತುಂಬ್ದೆ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಈ ಎಫ್‌ಐಆರ್ ರದ್ದು ಕೋರಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್‌ ಎಫ್‌ಐಆರ್‌ ರದ್ದಿಗೆ ನಿರಾಕರಿಸಿ ಅವರಿಗೆ ಬಂಧನದಿಂದ ನಾಲ್ಕು ವಾರಗಳ ಮುಕ್ತಿ ನೀಡಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.

ಇದರ ಬಳಿಕ ಅವರು ನಿರೀಕ್ಷಣಾ ಜಾಮೀನು ಕೋರಿ ಪುಣೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಪುಣೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿತ್ತು. ನ್ಯಾಯಾಲಯ ಅರ್ಜಿ ವಜಾಗೊಳಿಸುತ್ತಿದ್ದಂತೆ ಚುರುಕಾದ ಪುಣೆ ಪೊಲೀಸರು ರಾತೋ ರಾತ್ರಿ ಅವರನ್ನು ಬಂಧಿಸಿದ್ದಾರೆ.

Also read: ಯಾರು ಈ ‘ನಗರ ನಕ್ಸಲರು’; ಏನಿದು ಸರಕಾರಿ ಪ್ರಾಯೋಜಿತ ‘ಸಂಚಿ’ನ ನಾಟಕ?

ಡಿಸೆಂಬರ್‌ 31, 2017ರಲ್ಲಿ ಪುಣೆಯ ಶನಿವಾರ್‌ವಾಡಾದಲ್ಲಿ ನಡೆದ ಎಲ್ಗಾರ್‌ ಪರಿಷತ್‌ ಹಿಂದೆ ನಕ್ಸಲೀಯರು ಇದ್ದಾರೆ ಎನ್ನುವುದು ಪುಣೆ ಪೊಲೀಸರ ಆರೋಪವಾಗಿದೆ. ಈ ಎಲ್ಗಾರ್‌ ಪರಿಷತ್‌ನಲ್ಲಿ ಹಲವು ಸಾಮಾಜಿಕ ಹೋರಾಟಗಾರರು ಉದ್ರೇಕಕಾರಿ ಭಾಷಣಗಳನ್ನು ಮಾಡಿದ್ದರು ಮತ್ತು ಇದು ಭೀಮಾ ಕೊರೆಗಾಂವ್‌ ಯುದ್ಧ ಸ್ಮಾರಕ ಪ್ರದೇಶದಲ್ಲಿ ಹಿಂಸಾತ್ಮಕ ಸಂಘರ್ಷಕ್ಕೆ ಕಾರಣವಾಯಿತು ಎಂಬುದು ಪೊಲೀಸರ ವಾದ.

ಇದೇ ಸಂಘರ್ಷಕ್ಕೆ ಸಂಬಂಧಿಸಿದಂತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎನ್ನುವ ಆರೋಪದ ಮೇಲೆ ಈ ಹಿಂದೆಯೇ ಅರುಣ್‌ ಫೆರೇರಾ, ವರುಣ್‌ ಗೊನ್ಸಾಲ್ವೆಸ್‌, ಸುಧಾ ಭಾರಧ್ವಾಜ್‌, ಪಿ. ವರವರ ರಾವ್, ಗೌತಮ್‌ ನವಲೇಖ ಸೇರಿದಂತೆ 9 ಜನರನ್ನು ಪೊಲೀಸರು ಬಂಧಿಸಿದ್ದರು.

ಮುಂದೆ ಅವರನ್ನು ಸುಪ್ರೀಂ ಕೋರ್ಟ್‌ ಗೃಹ ಬಂಧನಕ್ಕೆ ದೂಡಿತ್ತು. ಈ ಅವಧಿ ಮುಗಿದ ಬಳಿಕ ಒಂಬತ್ತೂ ಜನರು ಜೈಲು ಪಾಲಾಗಿದ್ದರು. ಈ 'ನಗರ ನಕ್ಸಲ'ರ ಬಂಧನದ ವೇಳೆ ಆನಂದ್‌ ತೇಲ್ತುಂಬ್ದೆ ಬಂಧಿತರಾಗದೆ ಆರೋಪ ಹೊತ್ತೇ ಹೊರಗೆ ಉಳಿದಿದ್ದರು. ಈಗ ಅವರನ್ನೂ ಪುಣೆ ಪೊಲೀಸರು ಬಂಧಿಸಿದ್ದಾರೆ.

ಅವರ ಬಂಧನವನ್ನು ಸಹಾಯಕ ಆಯುಕ್ತ ಶಿವಾಜಿ ಪವಾರ್‌ ಖಚಿತ ಪಡಿಸಿದ್ದು, ಪುಣೆ ವಿಶೇಷ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ. ಪ್ರಕರಣದ ತನಿಖೆಗಾಗಿ ಅವರನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲು ಕೋರಲಿದ್ದೇವೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ.