samachara
www.samachara.com
‘ರೈತರ ಅಪಮಾನಿಸಲು ದಿನಕ್ಕೆ 17 ರೂಪಾಯಿ’; ಕೇಂದ್ರ ಬಜೆಟ್‌ ಟೀಕಿಸಿದ ರಾಹುಲ್‌ ಗಾಂಧಿ
ಸುದ್ದಿ ಸಾರ

‘ರೈತರ ಅಪಮಾನಿಸಲು ದಿನಕ್ಕೆ 17 ರೂಪಾಯಿ’; ಕೇಂದ್ರ ಬಜೆಟ್‌ ಟೀಕಿಸಿದ ರಾಹುಲ್‌ ಗಾಂಧಿ

ಕೇಂದ್ರದ ಓಲೈಕೆಯ ನಡೆಯನ್ನು ವಿರೋಧಿಸಿರುವ ರಾಹುಲ್‌ ಗಾಂಧಿ ಟ್ವಿಟರ್‌ ಮೂಲಕ ನೇರವಾಗಿ ನರೇಂದ್ರ ಮೋದಿ (ನಮೋ) ಅವರನ್ನು ಟೀಕಿಸಿದ್ದಾರೆ.

Team Samachara

ಕೇಂದ್ರ ಸರಕಾರ ಮಧ್ಯಂತರ ಬಜೆಟ್‌ನಲ್ಲಿ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಿರುವುದು ರೈತರ ಶ್ರಮವನ್ನು ಅಪಮಾನ ಮಾಡಿದಂತೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ವಾರ್ಷಿಕ 6 ಸಾವಿರ ಎಂದರೆ ದಿನಕ್ಕೆ ಸುಮಾರು 17 ರೂಪಾಯಿ ಆಗುತ್ತದೆ. ದಿನಕ್ಕೆ 17 ರೂಪಾಯಿ ಕೊಡುವ ಮೂಲಕ ರೈತರ ಶ್ರಮಕ್ಕೆ ಅಪಮಾನ ಮಾಡಲಾಗುತ್ತಿದೆ. 5 ವರ್ಷದಿಂದ ಕೃಷಿ ವಲಯವನ್ನು ನಿರ್ಲಕ್ಷಿಸುತ್ತಾ ಬಂದ ಪರಿಣಾಮ ಕೃಷಿಕರ ಬದುಕು ಹಾಳಾಗಿದೆ. ಈಗ 17 ರೂಪಾಯಿ ಕೊಡುವ ಮೂಲಕ ರೈತರ ಶ್ರಮವನ್ನು ಅಪಮಾನಿಸಲಾಗುತ್ತಿದೆ ಎಂದು ರಾಹುಲ್‌ ಟ್ವೀಟ್ ಮಾಡಿದ್ದಾರೆ.

ಪಿಯೂಷ್‌ ಗೋಯಲ್‌ ಶುಕ್ರವಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಸಣ್ಣ ಹಾಗೂ ಮಧ್ಯಮ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದ್ದರು. 'ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ'ಯ ಮೂಲಕ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ದೇಶದ ಸುಮಾರು 12 ಕೋಟಿ ರೈತ ಕುಟುಂಬಗಳಿಗೆ ಈ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಗೋಯಲ್‌ ಹೇಳಿದ್ದರು.

ವಾರ್ಷಿಕವಾಗಿ 3 ಕಂತುಗಳಲ್ಲಿ ಈ ಪ್ರೋತ್ಸಾಹ ಧನವನ್ನು ರೈತರ ಖಾತೆಗಳಿಗೇ ನೇರವಾಗಿ ಜಮಾ ಮಾಡಲು ಕೇಂದ್ರ ಮುಂದಾಗಿದೆ. 2018ರ ಡಿಸೆಂಬರ್‌ನಿಂದಲೇ ಈ ಯೋಜನೆ ಪೂರ್ವಾನ್ವಯವಾಗುವುದರಿಂದ ಚುನಾವಣೆಗೂ ಮೊದಲೇ ಈ ಯೋಜನೆಯ ಮೊದಲ ಕಂತಿನ 2 ಸಾವಿರ ರೂಪಾಯಿ ಹಣ ರೈತರ ಖಾತೆಗೆ ಜಮೆಯಾಗಲಿದೆ. ಈ ಮೂಲಕ ಚುನಾವಣೆಗೂ ಮುನ್ನಾ ರೈತರ ಮನವೊಲಿಸುವ ಕೆಲಸಕ್ಕೆ ಕೇಂದ್ರ ಮುಂದಾಗಿದೆ.

ಆದರೆ, ಕೇಂದ್ರದ ಈ ಓಲೈಕೆಯ ನಡೆಯನ್ನು ವಿರೋಧಿಸಿರುವ ರಾಹುಲ್‌ #AakhriJumlaBudget ಎಂಬ ಹ್ಯಾಷ್‌ ಟ್ಯಾಗ್‌ ಮೂಲಕ ನೇರವಾಗಿ ನರೇಂದ್ರ ಮೋದಿ (ನಮೋ) ಅವರನ್ನು ಟೀಕಿಸಿದ್ದಾರೆ.