samachara
www.samachara.com
ಉಪ ಚುನಾವಣೆ: ರಾಜಸ್ಥಾನದಲ್ಲಿ ಕಾಂಗ್ರೆಸ್‌ ಶತಕ ಸಾಧನೆ, ಹರ್ಯಾಣದಲ್ಲಿ ಬಿಜೆಪಿಗೆ ಗೆಲುವು
ಸುದ್ದಿ ಸಾರ

ಉಪ ಚುನಾವಣೆ: ರಾಜಸ್ಥಾನದಲ್ಲಿ ಕಾಂಗ್ರೆಸ್‌ ಶತಕ ಸಾಧನೆ, ಹರ್ಯಾಣದಲ್ಲಿ ಬಿಜೆಪಿಗೆ ಗೆಲುವು

ಗೆಲುವಿನಿಂದ ಖುಷಿಯಾಗಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, “ಜನರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ,” ಎಂದಿದ್ದಾರೆ.

Team Samachara

ರಾಜಸ್ಥಾನದ ರಾಮ್‌ಘರ್‌ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ತನ್ನ ಶಾಸಕರ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಿಕೊಂಡಿದೆ.

ಹರ್ಯಾಣದ ಜಿಂದ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಯೂ ನಡೆಯುತ್ತಿದ್ದು ಇಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆಡಳಿತರೂಢ ಪಕ್ಷದ ಅಭ್ಯರ್ಥಿ ಡಾ. ಕ್ರಿಶನ್‌ ಲಾಲ್‌ ಮಿದ್ಧಾ 12,000 ಮತಗಳಿಂದ ಎಎಪಿ-ಜೆಪಿಪಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

ರಾಮ್‌ಘರ್‌ನಲ್ಲಿ ಬಿಎಸ್‌ಪಿ ಅಭ್ಯರ್ಥಿ ಡಿಸೆಂಬರ್‌ 7ರ ಚುನಾವಣೆಗೂ ಮುನ್ನ ಸಾವನ್ನಪ್ಪಿದ್ದರಿಂದ ಚುನಾವಣೆ ಮುಂದೂಡಲಾಗಿತ್ತು. ಇಲ್ಲೀಗ ಕಾಂಗ್ರೆಸ್‌ ಅಭ್ಯರ್ಥಿ ಸಾಫಿಯಾ ಜುಬೇರ್‌ ಜಯ ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಬಂಡಾಯದ ಬಿಸಿ ಅನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಸುಖ್ವಂತ್‌ ಸಿಂಗ್‌ ಸೋಲೊಪ್ಪಿಕೊಂಡಿದ್ದಾರೆ. ಬಿಜೆಪಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಮಾಜಿ ಕಾಂಗ್ರೆಸ್‌ ನಾಯಕ ನಟವರ್‌ ಸಿಂಗ್‌ ಪುತ್ರ ಜಗತ್‌ ಸಿಂಗ್‌ ಬಿಎಸ್‌ಪಿಯಿಂದ ಕಣಕ್ಕಿಳಿದಿದ್ದರು. ಇದು ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿದೆ.

ಜತೆಗೆ ಇಲ್ಲಿ ವರ್ಷದ ಹಿಂದೆ ಗೋ ರಕ್ಷಕರು ರಕ್ಬರ್‌ ಖಾನ್‌ ಎಂಬ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದರು. ಇದು ಚುನಾವಣೆ ಮೇಲೆ ಪರಿಣಾಮ ಬೀರಿದ್ದು ಬಿಜೆಪಿಯ ಸೋಲಿಗೆ ಮುನ್ನುಡಿ ಬರೆದಿದೆ.

ಈ ಜಯದೊಂದಿಗೆ ಕಾಂಗ್ರೆಸ್‌ ರಾಜಸ್ಥಾನ ವಿಧಾನಸಭೆಯಲ್ಲಿ ಶತಕ ಸಾಧನೆ ಮಾಡಿದ್ದು ಮಿತ್ರ ಪಕ್ಷ ರಾಷ್ಟ್ರೀಯ ಲೋಕ ದಳದ ಬೆಂಬಲದೊಂದಿಗೆ ಸರಳ ಬಹುಮತ ಸಂಪಾದಿಸಿದೆ. ಇದು ಇತರ ಸಣ್ಣ ಪುಟ್ಟ ಪಕ್ಷಗಳ ಮೇಲಿನ ಕಾಂಗ್ರೆಸ್‌ ಅವಲಂಬನೆಯನ್ನು ತಪ್ಪಿಸಿದೆ.

ಗೆಲುವಿನಿಂದ ಖುಷಿಯಾಗಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, “ಜನರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ,” ಎಂದಿದ್ದಾರೆ. ಜತೆಗೆ ಜನರ ಈ ತೀರ್ಮಾನ ಲೋಕಸಭೆ ಚುನಾವಣೆಗೆ ಹೆಚ್ಚಿನ ಉತ್ಸಾಹ ನೀಡಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಹರ್ಯಾಣದ ಜಿಂದ್ ಉಪಚುನಾವಣೆಯನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು. ಇಲ್ಲಿ ಕಾಂಗ್ರೆಸ್‌ನಿಂದ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸ್ಪರ್ಧಿಸಿದ್ದರು. ಆದರೆ ಅವರು ಇಲ್ಲಿ ಮೂರನೇ ಸ್ಥಾನ ಪಡೆದು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಜಯಶಾಲಿಯಾಗಿರುವ ಬಿಜೆಪಿ ಅಭ್ಯರ್ಥಿ ಕ್ರಿಶನ್‌ ಮಿದ್ಧಾ ಅವರ ತಂದೆ ಹರಿ ಚಣ್‌ ಮಿದ್ಧಾ ಇಲ್ಲಿನ ಶಾಸಕರಾಗಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮಗನನ್ನೇ ಬಿಜೆಪಿ ಕಣಕ್ಕಿಳಿಸಿ ಅನುಕಂಪದ ಮತಗಳಿಗೆ ಬಲೆ ಬೀಸಿತ್ತು. ಬಿಜೆಪಿ ಈ ಯತ್ನ ಫಲ ನೀಡಿದ್ದು ಅವರು ಜಯಶಾಲಿಯಾಗಿದ್ದಾರೆ.

ಇಲ್ಲಿ ಆರಂಭದಲ್ಲಿ ಮಾಜಿ ಮುಖ್ಯಮಂತ್ರಿ ಅಜಯ್‌ ಸಿಂಗ್‌ ಚೌಟಾಲಾ ಪುತ್ರ ದಿಗ್ವಿಜಯ್‌ ಚೌಟಾಲಾ ಮುನ್ನಡೆ ಕಾಯ್ದುಕೊಂಡಿದ್ದರು. ತಂದೆಯ ಜತೆ ಮುನಿಸಿಕೊಂಡು ಡಿಸೆಂಬರ್‌ನಲ್ಲಿ ತಮ್ಮದೇ ಜನನಾಯಕ್‌ ಜನತಾ ಪಕ್ಷ ಹುಟ್ಟು ಹಾಕಿದ್ದ ಅವರು ಎಎಪಿ ಬೆಂಬಲದೊಂದಿಗೆ ಇಲ್ಲಿ ಕಣಕ್ಕಿಳಿದಿದ್ದರು. ಗೆಲುವು ಸಾಧಿಸುವುದು ಅವರಿಗೆ ಸಾಧ್ಯವಾಗಿಲ್ಲವಾದರೂ ಮೊದಲ ಯತ್ನದಲ್ಲೇ ಎರಡನೇ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.