samachara
www.samachara.com
ಉದ್ಯೋಗ ಸಮೀಕ್ಷಾ ವರದಿ ಬಿಡುಗಡೆಗೆ ಕೇಂದ್ರ ಹಿಂದೇಟು; ತಜ್ಞರ ರಾಜೀನಾಮೆ
ಸುದ್ದಿ ಸಾರ

ಉದ್ಯೋಗ ಸಮೀಕ್ಷಾ ವರದಿ ಬಿಡುಗಡೆಗೆ ಕೇಂದ್ರ ಹಿಂದೇಟು; ತಜ್ಞರ ರಾಜೀನಾಮೆ

‘ಎನ್‌ಎಸ್‌ಎಸ್‌ಒ ಉದ್ಯೋಗ ಸಮೀಕ್ಷೆ’ಯನ್ನು ಬಿಡುಗಡೆ ಮಾಡಲು ಕೇಂದ್ರ ಸರಕಾರ ವಿಳಂಬ ಮಾಡುತ್ತಿರುವುದು ಅಂಕಿ ಅಂಶಗಳ ಆಯೋಗದ ಸದಸ್ಯರ ರಾಜೀನಾಮೆಗೆ ಕಾರಣವಾಗಿದೆ.

ಉದ್ಯೋಗ ಸಮೀಕ್ಷಾ ವರದಿ ಬಿಡುಗಡೆಗೆ ತೋರುತ್ತಿರುವ ವಿಳಂಬ ಖಂಡಿಸಿ ಹಾಗೂ ಕೇಂದ್ರ ಸರಕಾರದ ನಿರಂತರ ಹಸ್ತಕ್ಷೇಪಕ್ಕೆ ವಿರೋಧ ವ್ಯಕ್ತಪಡಿಸಿರುವ ರಾಷ್ಟ್ರೀಯ ಅಂಕಿ ಅಂಶಗಳ ಆಯೋಗದ ಇಬ್ಬರೂ ಸರಕಾರೇತರ ಸದಸ್ಯರು ಸೋಮವಾರ ರಾಜೀನಾಮೆ ನೀಡಿದ್ದಾರೆ. ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರವೀಣ್‌ ಶ್ರೀವಾತ್ಸವ ಮತ್ತು ನೀತಿ ಆಯೋಗದ ಅಮಿತಾಭ್‌ ಕಾಂತ್‌ ಮಾತ್ರ ತಂಡದಲ್ಲಿ ಉಳಿದುಕೊಂಡಿದ್ದಾರೆ.

ದೇಶದ ಎಲ್ಲಾ ಅಂಕಿ ಅಂಶಗಳ ಚಟುವಟಿಕೆಯ ಮೇಲುಸ್ತುವಾರಿ ವಹಿಸುವ ಆಯೋಗ ಇದಾಗಿದ್ದು, ಇದೇ ತಂಡದ ಪ್ರಭಾರ ಅಧ್ಯಕ್ಷರಾಗಿದ್ದ ಪಿ. ಸಿ. ಮೋಹನನ್‌ ಮತ್ತು ಜೆ. ವಿ. ಮೀನಾಕ್ಷಿ ರಾಜೀನಾಮೆ ನೀಡಿದ್ದಾರೆ (ಸದ್ಯ ಏಳು ಜನರ ತಂಡದಲ್ಲಿ ಇಬ್ಬರು ಮಾತ್ರ ಉಳಿದುಕೊಂಡಿದ್ದಾರೆ). ಮೋಹನನ್‌ ಭಾರತೀಯ ಅಂಕಿ ಅಂಶಗಳ ಸೇವೆಯ ಮಾಜಿ ಸದಸ್ಯರಾಗಿದ್ದು, ಮೀನಾಕ್ಷಿ ದೆಹಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ರಾಜೀನಾಮೆ ಕುರಿತು ಎನ್‌ಡಿಟಿವಿ ಜತೆಗೆ ಮಾತನಾಡಿರುವ ಮೋಹನನ್‌, “ತನ್ನ ಕರ್ತವ್ಯ ನಿರ್ವಹಿಸಲು ಆಯೋಗಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇತ್ತೀಚೆಗೆ ನಮ್ಮನ್ನು ಕಡೆಗಣಿಸಲಾಗುತ್ತಿದೆ ಅಥವಾ ನಮ್ಮನ್ನು ಗಂಭೀರವಾಗಿ ಸ್ವೀಕರಿಸಿಲ್ಲ ಎಂದು ಅನಿಸುತ್ತಿದೆ,” ಎಂದಿದ್ದಾರೆ.

‘ಎನ್‌ಎಸ್‌ಎಸ್‌ಒ ಉದ್ಯೋಗ ಸಮೀಕ್ಷೆ’ಯನ್ನು ಬಿಡುಗಡೆ ಮಾಡಲು ಕೇಂದ್ರ ಸರಕಾರ ವಿಳಂಬ ಮಾಡುತ್ತಿರುವುದು ಆಯೋಗದ ಸದಸ್ಯರ ರಾಜೀನಾಮೆಗೆ ಪ್ರಮುಖ ಕಾರಣ ಎಂದು ಅವರು ಒಪ್ಪಿಕೊಂಡಿದ್ದಾರೆ. ‘ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ ' ಎಂದು ಕರೆಯಲಾಗುವ ಈ ಸಮೀಕ್ಷೆಗೆ ರಾಷ್ಟ್ರೀಯ ಅಂಕಿ ಅಂಶಗಳ ಆಯೋಗ ಡಿಸೆಂಬರ್‌ನಲ್ಲಿಯೇ ಒಪ್ಪಿಗೆಯನ್ನು ನೀಡಿದ್ದರೂ ಕೇಂದ್ರ ಸರಕಾರ ಬಿಡುಗಡೆ ಮಾಡಿಲ್ಲ.

ಇದರ ಜತೆಗೆ ಕಳೆದೊಂದು ವರ್ಷದಲ್ಲಿ ಕೇಂದ್ರ ಸರಕಾರ ಮತ್ತು ಅಂಕಿ ಅಂಶಗಳ ಆಯೋಗದ ಮಧ್ಯೆ ಹಲವಾರು ವಿಚಾರಗಳಿಗೆ ತಿಕ್ಕಾಟ ನಡೆದಿದೆ. ಅದರಲ್ಲಿ ಮುಖ್ಯವಾಗಿ ಇತ್ತೀಚೆಗೆ ಬಿಡುಗಡೆ ಮಾಡಿದ ಯುಪಿಎ ಅವಧಿಯ ಜಿಡಿಪಿ ಡೇಟಾವೂ ಒಂದು.

ಕೇಂದ್ರ ಸರಕಾರ ಜಿಡಿಪಿ, ಉದ್ಯೋಗದ ಮಾಹಿತಿಗಳಿಗೆ ಸಂಬಂಧಿಸಿದಂತೆ ಆಟವಾಡುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪದ ನಡುವೆಯೇ ಅಯೋಗದ ಸದಸ್ಯರು ರಾಜೀನಾಮೆ ನೀಡಿರುವುದು ಕೇಂದ್ರ ಸರಕಾರವನ್ನು ಮುಜುಗರಕ್ಕೀಡು ಮಾಡಿದೆ.

ಈ ಹಿಂದೆ ಕಳೆದ ಮೇನಲ್ಲೊಮ್ಮೆ ಕೇಂದ್ರ ಸರಕಾರ ರಾಷ್ಟ್ರೀಯ ಅಂಕಿ ಅಂಶಗಳ ಆಯೋಗಕ್ಕೆ ಹೆಚ್ಚಿನ ಬಲ ನೀಡಲು ಉದ್ದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆಯೋಗವನ್ನು ಸಾರ್ವಜನಿಕ ನಿಗಮವಾಗಿ ಬದಲಾಯಿಸಿ ದೇಶದ ಪ್ರಮುಖ ಅಂಕಿ ಅಂಶಿಗಳ ಬಗ್ಗೆ ಆಡಿಟ್‌ ನಡೆಸುವ, ನಿಯಂತ್ರಕ ಸಂಸ್ಥೆಯಾಗಿ ರೂಪಿಸುವ ಬಗ್ಗೆ ಮಾತುಗಳು ಬಂದಿತ್ತು. ಆದರೆ ಇದರ ಬದಲು ಕೇಂದ್ರ ಸರಕಾರ ನಿರಂತರ ಹಸ್ತಕ್ಷೇಪ ನಡೆಸುತ್ತಿರುುದು ಸದಸ್ಯರನ್ನು ಕೆರಳಿಸಿದೆ ಮತ್ತು ಇದೇ ಕಾರಣಕ್ಕೆ ಇಬ್ಬರು ರಾಜೀನಾಮೆ ನೀಡಿದ್ದಾರೆ.

ಚಿತ್ರ ಕೃಪೆ: ದಿ ವೈರ್‌