samachara
www.samachara.com
ಸುಪ್ರೀಂ ತೀರ್ಪಿಗೂ ಮುನ್ನ ಬಡ್ತಿ ಮೀಸಲು ಕಾಯ್ದೆ ಜಾರಿ; ರಾಜ್ಯ ಸಂಪುಟ ತೀರ್ಮಾನ
ಸುದ್ದಿ ಸಾರ

ಸುಪ್ರೀಂ ತೀರ್ಪಿಗೂ ಮುನ್ನ ಬಡ್ತಿ ಮೀಸಲು ಕಾಯ್ದೆ ಜಾರಿ; ರಾಜ್ಯ ಸಂಪುಟ ತೀರ್ಮಾನ

“ಸುಪ್ರೀಂಕೋರ್ಟ್ ಇದಕ್ಕೆ ಒಪ್ಪಿಗೆಯನ್ನೂ ನೀಡಿಲ್ಲ. ನಿರಾಕರಣೆಯನ್ನೂ ಮಾಡಿಲ್ಲ. ಬದಲಿಗೆ ರಾಜ್ಯದ ಪರ ವಕೀಲರು ಹೇಳಿದ್ದನ್ನು ಸುಪ್ರೀಂಕೋರ್ಟ್ ದಾಖಲಿಸಿಕೊಂಡಿದೆ,” - ಕೃಷ್ಣ ಬೈರೇಗೌಡ.

Team Samachara

ಸರ್ವೋಚ್ಚ ನ್ಯಾಯಾಲಯ ಅಂತಿಮ ತೀರ್ಪು ಹೊರ ಬೀಳುವ ಮುನ್ನವೇ ಬಡ್ತಿ ಮೀಸಲಾತಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಕರ್ನಾಟಕ ಸರಕಾರ ಹೊರಟಿದೆ. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಯನ್ನೂ ನೀಡಲಾಗಿದೆ.

ಈ ಹಿಂದೆ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶಕ್ಕೆ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ವಿಧಾನಮಂಡಲದ ಮುಂದೆ ಮಂಡಿಸಿ ಅಂಗೀಕಾರ ಪಡೆದುಕೊಂಡಿತ್ತು.

ಹೀಗೆ ಅಂಗೀಕರಿಸಲಾದ ತಿದ್ದುಪಡಿ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿ ಅಂಕಿತ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾದ ಕಾಯ್ದೆಯನ್ನು ಇದೀಗ ಸರ್ಕಾರ ಅಂಗೀಕರಿಸಿದೆ. ಆದರೆ “ಸುಪ್ರೀಂಕೋರ್ಟ್ ನೀಡುವ ಅಂತಿಮ ಆದೇಶಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ,” ಎಂದು ಗ್ರಾಮೀಣಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ವಿವರ ನೀಡುತ್ತಿದ್ದ ಅವರಿಗೆ, ಸರಕಾರದ ಈ ನಡೆಯಿಂದ ನ್ಯಾಯಾಂಗ ನಿಂದನೆಯಾದಂತಾಗುವುದಿಲ್ಲವೇ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಅವರು, “ಸದರಿ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದರಿಂದ ಇದನ್ನು ಯಥಾವತ್ತಾಗಿ ಜಾರಿಗೆ ತರುತ್ತೇವೆ ಎಂದು ಸುಪ್ರೀಂಕೋರ್ಟ್‍ಗೆ ರಾಜ್ಯದ ಪರ ವಕೀಲರಾದ ಮುಕುಲ್ ರೋಹ್ಟಗಿ ಅವರು ವಿವರಿಸಿದ್ದಾರೆ.” ಎಂದರು.

ಆದರೆ ಸುಪ್ರೀಂಕೋರ್ಟ್ ಇದಕ್ಕೆ ಒಪ್ಪಿಗೆಯನ್ನೂ ನೀಡಿಲ್ಲ. ನಿರಾಕರಣೆಯನ್ನೂ ಮಾಡಿಲ್ಲ. ಬದಲಿಗೆ ರಾಜ್ಯದ ಪರ ವಕೀಲರು ಹೇಳಿದ್ದನ್ನು ಸುಪ್ರೀಂಕೋರ್ಟ್ ದಾಖಲಿಸಿಕೊಂಡಿದೆ. ಅದೇ ರೀತಿ ನಮ್ಮ ವಕೀಲರೂ, ಸರ್ವೋಚ್ಚ ನ್ಯಾಯಾಲಯದ ಅಂತಿಮ ಆದೇಶವನ್ನು ಜಾರಿಗೊಳಿಸುವುದು ಅನಿವಾರ್ಯ ಎಂದಿದ್ದಾರೆ.

ಇದನ್ನು ಗಮನದಲ್ಲಿಟ್ಟುಕೊಂಡೇ ರಾಜ್ಯ ವಿಧಾನಮಂಡಲ ಅಂಗೀಕರಿಸಿದ ವಿಧೇಯಕವನ್ನು ಜಾರಿಗೊಳಿಸಲು ಇಂದು ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಇದರಿಂದ ಉದ್ಭವಿಸುವ ಅಡೆ-ತಡೆಗಳನ್ನು ನಿವಾರಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಬಾಕಿ ಉಳಿಸಿಕೊಂಡ ಕೇಂದ್ರ:

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಬಾಬ್ತಿನಲ್ಲಿ ರಾಜ್ಯಕ್ಕೆ ನೀಡಬೇಕಾದ 850 ಕೋಟಿ ರೂ. ಸೇರಿದಂತೆ ಒಟ್ಟು 1,500 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಪಾಪ, ಕೂಲಿ ಕಾರ್ಮಿಕರ ಹಣ ಕೊಡಲು ಅದರ ಬಳಿ ದುಡ್ಡಿಲ್ಲ. ಬರೀ ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಲು ದುಡ್ಡಿದೆ ಎಂದು ಅವರು ವ್ಯಂಗ್ಯವಾಡಿದರು.

ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರವೇ ಹಣ ಕೊಡಬೇಕು. ಯಾವ ಕಾರಣಕ್ಕೂ ಆ ಹಣ ಕೊಡಲು ವಿಳಂಬ ಮಾಡುವಂತಿಲ್ಲ. ಆದರೆ ಕೇಂದ್ರ ವಿಳಂಬ ಮಾಡುತ್ತಿದೆ. ಕೇಳಿದರೆ ಈಗಾಗಲೇ ಆ ಬಾಬ್ತಿನ ಕುರಿತು ಸಲ್ಲಿಸಲಾದ ಅರ್ಜಿಗಳನ್ನು ರದ್ದು ಮಾಡಿ, ಹೊಸ ಅರ್ಜಿಗಳನ್ನು ಹಾಕಿ ಎಂದು ಹೇಳುತ್ತಿದೆ.

ಸುಮಾರು ಒಂದೂವರೆ ಲಕ್ಷ ಅರ್ಜಿಗಳು ಇದ್ದು ಅದನ್ನು ರದ್ದುಪಡಿಸುವುದು, ಹೊಸತಾಗಿ ಅರ್ಜಿ ಸಲ್ಲಿಸುವುದು ಕಷ್ಟದ ಕೆಲಸ. ಹೀಗಾಗಿ ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಾದ ಹಣವನ್ನು ಜನರಿಗೆ ನೀಡಲು ಮುಖ್ಯಮಂತ್ರಿಗಳು ಐನೂರು ಕೋಟಿ ರೂಪಾಯಿ ಹಣವನ್ನು ಒದಗಿಸಿದ್ದಾರೆ.

ಆದರೆ ಅದು ಕೇಂದ್ರ ಸರ್ಕಾರದ ಮೂಲಕವೇ ಫಲಾನುಭವಿಗಳಿಗೆ ತಲುಪಬೇಕಾಗಿದೆ. ಹೀಗಾಗಿ ನಾವು ಈಗ ರವಾನಿಸಿರುವ ಒಂದೂವರೆ ಲಕ್ಷ ಅರ್ಜಿಗಳನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅವರು ವಿಷಾದಿಸಿದರು.

ಇದೇ ರೀತಿ ನರೇಗಾ ಯೋಜನೆಯಡಿ ಒದಗಿಸಬೇಕಾದ ಸಾಮಾಗ್ರಿಗಳ ಬಾಬ್ತಿನಲ್ಲಿ ಶೇಕಡಾ 75ರಷ್ಟು ಹಣವನ್ನು ಕೇಂದ್ರ ಸರ್ಕಾರ ಒದಗಿಸಬೇಕು. ನಾವು ಶೇಕಡಾ ಇಪ್ಪತ್ತೈದರಷ್ಟನ್ನು ಒದಗಿಸಬೇಕು. ನಮ್ಮ ಪಾಲಿನ ಹಣ ಒದಗಿಸಲು ನಾವು ಸಿದ್ಧವಿದ್ದರೂ ಕೇಂದ್ರ ಸರ್ಕಾರ ಆ ಹಣ ಒದಗಿಸುತ್ತಿಲ್ಲ ಎಂದು ಹೇಳಿದರು.

ಇಲ್ಲಿ ನೋಡಿದರೆ ಬಿಜೆಪಿ ನಾಯಕರು ಬರಗಾಲದ ಅಧ್ಯಯನಕ್ಕೆ ಪ್ರವಾಸ ನಡೆಸುತ್ತಾರೆ. ಆದರೆ ಅಲ್ಲಿ ನೋಡಿದರೆ ಕೇಂದ್ರ ಸರ್ಕಾರ ರಾಜ್ಯದ ಕೂಲಿ ಕಾರ್ಮಿಕರಿಗೆ ನೀಡಬೇಕಾದ ಹಣ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರದ ಮೇಲೆ ನಾವು ಒತ್ತಡ ಹೇರಿಯಾಗಿದೆ. ಪ್ರವಾಸದ ಬದಲು ಬಿಜೆಪಿಯವರೂ ಹೋಗಿ ಕೇಂದ್ರದ ಮೇಲೆ ಒತ್ತಡ ಹಾಕಿ ಈ ಹಣ ಬಿಡುಗಡೆ ಮಾಡಿಸಿಕೊಂಡು ಬರಲಿ ಎಂದು ಸವಾಲೆಸೆದರು.

ಈ ಮಧ್ಯೆ ಬೆಂಗಳೂರಿನ ಅಭಿವೃದ್ಧಿಗಾಗಿ ಮುಂದಿನ ಮೂರು ವರ್ಷಗಳಲ್ಲಿ 8,415 ಕೋಟಿ ರೂಪಾಯಿಗಳನ್ನು ಒದಗಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹಣದಲ್ಲಿ ಕೆರೆಗಳನ್ನು ಸಂರಕ್ಷಿಸುವುದು, ರಾಜಾಕಾಲುವೆಗಳನ್ನು ದುರಸ್ಥಿಪಡಿಸುವುದು, ಮೇಲ್ಸೇತುವೆಗಳ ನಿರ್ಮಾಣ, ಫುಟ್ ಪಾತ್‍ಗಳ ರಚನೆ ಸೇರಿದಂತೆ ಹಲವು ಕೆಲಸಗಳನ್ನು ಮಾಡಿಸಲು ತೀರ್ಮಾನಿಸಲಾಗಿದೆ ಎಂದರು.

ಬಿಬಿಎಂಪಿ ವತಿಯಿಂದ ಬಿಡುಗಡೆಯಾಗುವ ಹಣವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಈ ಹಣವನ್ನು ನೀಡಲಾಗುತ್ತಿದ್ದು, ಮುಖ್ಯಮಂತ್ರಿಗಳ ನಗರ ಯೋಜನೆಯಡಿ ಇದು ಜಾರಿಯಾಗಲಿದೆ ಎಂದು ವಿವರಿಸಿದರು.

ಚಿತ್ರ ಕೃಪೆ: ದಿ ಹಿಂದೂ (ಸಾಂದರ್ಭಿಕ)