samachara
www.samachara.com
ವಿಧಾನ ಸೌಧದತ್ತ ಮದ್ಯ ನಿಷೇಧ ಪಾದಯಾತ್ರೆ; ಸಂಜೆ ರಾಜಧಾನಿಗೆ ಮಹಿಳೆಯರ ದಂಡು
ಸುದ್ದಿ ಸಾರ

ವಿಧಾನ ಸೌಧದತ್ತ ಮದ್ಯ ನಿಷೇಧ ಪಾದಯಾತ್ರೆ; ಸಂಜೆ ರಾಜಧಾನಿಗೆ ಮಹಿಳೆಯರ ದಂಡು

ವಿಧಾನಸೌಧ ಹೊರತುಪಡಿಸಿ ಬೇರೆಡೆ ಪ್ರತಿಭಟಿಸುವುದಾದರೆ ಮಹಿಳೆಯರಿಗೆ ರಕ್ಷಣೆ ನೀಡುವುದಾಗಿಯೂ ಪೊಲೀಸ್ ಇಲಾಖೆ ತಿಳಿಸಿದೆ. ಆದರೆ ವಿಧಾನಸೌಧದ ಎದುರೇ ಪ್ರತಿಭಟಿಸುವ ತಮ್ಮ ಕೋರಿಕೆಯಿಂದ ಹಿಂದೆ ಸರಿಯಲು ಮಹಿಳೆಯರು ಸಿದ್ಧರಿಲ್ಲ.

Team Samachara

ಮದ್ಯ ನಿಷೇಧ ಆಂದೋಲನಾ ಪಾದಯಾತ್ರೆ ನೆಲಮಂಗಳ ತಲುಪಿದ್ದು ಇಂದು ಸಂಜೆ (ಜನವರಿ.29) 3 ಗಂಟೆಯ ಒಳಗಾಗಿ ಬೆಂಗಳೂರು ನಗರ ಪ್ರವೇಶಿಸಲಿದ್ದಾರೆ. ಅಲ್ಲದೆ 3 ಸಾವಿರ ರೈತ ಮಹಿಳೆಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ನಾಳೆ ಬೆಳಗ್ಗೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮದ್ಯ ನಿಷೇಧವನ್ನು ಒತ್ತಾಯಿಸಿ ರೈತ ಮಹಿಳೆಯರು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಹೋರಾಟದ ಸ್ವರೂಪ ಇದೀಗ ತೀವ್ರವಾಗುತ್ತಿದೆ. ಪರಿಣಾಮ 'ಬೆಂಗಳೂರು ಚಲೋ’ 'ವಿಧಾನ ಸೌಧ ಮುತ್ತಿಗೆಗೆ' ಮುಂದಾದ ಮಹಿಳೆಯರು ಕಳೆದ ಜನವರಿ.19 ರಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಬೆಳೆಸಿದ್ದರು. ಮಧ್ಯ ನಿಷೇಧಕ್ಕಾಗಿ ಕಳೆದ 11 ದಿನಗಳಿಂದ ಪಾದಯಾತ್ರೆ ನಡೆಸುತ್ತಿರುವ ಮಹಿಳೆಯರು ಇಂದು ಬೆಂಗಳೂರಿಗೆ ತಲುಪಲಿದ್ದಾರೆ.

ಈ ನಡುವೆ ಭಾನುವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರವೇಶಿಸಿ ಕುಲುವನಹಳ್ಳಿ ಬಳಿ ಊಟ ಮುಗಿಸಿ ರಸ್ತೆ ದಾಟುತ್ತಿದ್ದ ವೇಳೆ ರಾಯಚೂರು ಜಿಲ್ಲೆ, ಲಿಂಗಸಗೂರು ತಾಲ್ಲೂಕಿನ ಕೈರವಾಡಿ ಗ್ರಾಮದ ಮಹಿಳೆ ರೇಣುಕಮ್ಮ (60) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಘಟನೆಯ ನಂತರವೂ ಯಾವೊಬ್ಬ ಅಧಿಕಾರಿಯಾಗಲಿ, ರಾಜಕಾರಣಿಯಾಗಲಿ ಹೋರಾಟದಲ್ಲಿ ನಿರತರಾಗಿರುವ ಮಹಿಳೆಯರ ಬಳಿ ಮಾತುಕತೆಗೆ ಬಾರದಿರುವುದು ಮಹಿಳೆಯರಲ್ಲಿ ಮತ್ತಷ್ಟು ಆಕ್ರೋಶ ಭುಗಿಲೇಳಲು ಕಾರಣವಾಗಿದೆ. ಹೀಗಾಗಿ ನಾಳಿನ ಹೋರಾಟ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

ಸರಕಾರಕ್ಕೆ ಪತ್ರ ಬರೆದ ಹಿರೇಮಠ್, ದೇವನೂರು

ರಾಜ್ಯಾದ್ಯಂತ ಮದ್ಯ ನಿಷೇಧಿಸುವಂತೆ ತೀವ್ರ ಹೋರಾಟ ನಡೆಸಿತ್ತಿರುವ ಮಹಿಳೆಯರಿಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮಹಿಳೆಯರ ಹೋರಾಟಕ್ಕೆ ಈಗಾಗಲೇ ಹಿರಿಯ ಸ್ವತಂತ್ರ್ಯ ಹೋರಾಟಗಾರ ಹೆಚ್‌.ಎಸ್.ದೊರೆಸ್ವಾಮಿ ಬೆಂಬಲ ಸೂಚಿಸಿದ್ದಾರೆ. ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಸೇರಿದಂತೆ ರಾಜ್ಯದ ನಾನಾ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಅಲ್ಲದೆ ಎಲ್ಲಾ ಸಂಘಟನೆಗಳು ಮುಖ್ಯಮಂತ್ರಿ ಮೇಲೆ ಒತ್ತಡ ತರಲು ಪ್ರಯತ್ನಿಸಿವೆ. ಸಾಮಾಜಿಕ ಹೋರಾಟಗಾರರಾದ ಎಸ್.ಆರ್. ಹಿರೇಮಠ ಹಾಗೂ ಸಾಹಿತಿ ದೇವನೂರು ಮಹಾದೇವ ಸರಕಾರಕ್ಕೆ ಪತ್ರ ಬರೆದಿದ್ದು ಮಹಿಳೆಯರ ಅಹವಾಲಿಗೆ ಕಿವಿಗೊಡಿ ಎಂದು ಒತ್ತಾಯಿಸಿದ್ದರು.

ಆದರೆ ಸರಕಾರ ಈವರೆಗೆ ಮಹಿಳೆಯರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿರುವಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಈವರೆಗೆ ಮಹಿಳೆಯರ ಹೋರಾಟದ ಕುರಿತು ತುಟಿ ಬಿಚ್ಚಿಲ್ಲ. ಇದು ಸಾಮಾನ್ಯವಾಗಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ‘ಸಮಾಚಾರದ ಜೊತೆಗೆ ಮಾತನಾಡಿದ ನಿಷೇಧ ಆಂದೋಲನದ ಸಂಚಾಲಕಿ ವಿದ್ಯಾ ಪಾಟೀಲ್ ಸರಕಾರಕ್ಕೆ ಹೋರಾಟಗಾರರ ಅಹವಾಲನ್ನು ಆಲಿಸುವ ಕನಿಷ್ಟ ಸೌಜನ್ಯವೂ ಇಲ್ಲ ಎಂದು ಕಿಡಿಕಾರಿದರು.

ಏನೇ ಆದರೂ ಸರಿ ಮಹಿಳೆಯರು ಒಟ್ಟಾಗಿ ನಾಳೆ ವಿಧಾನ ಸೌಧ ಮುತ್ತಿಗೆ ಹಾಕೇ ಹಾಕುತ್ತೇವೆ. ಕನಿಷ್ಟ 200 ರಿಂದ 300 ಜನ ಅರೆಸ್ಟ್ ಆಗುವುದು ಖಚಿತ.
ವಿದ್ಯಾ ಪಾಟೀಲ್. ಮದ್ಯ ನಿಷೇಧ ಆಂದೋಲನ ಸಂಚಾಲಕಿ.

ನಾಳೆ ವಿಧಾನ ಸೌಧ ಮುತ್ತಿಗೆ?

ಮದ್ಯ ನಿಷೇಧ ಮಾಡುವಂತೆ ಒತ್ತಾಯಿಸಿ ಮಹಿಳೆಯರು ನಡೆಸುತ್ತಿರುವ ಹೋರಾಟದ ತೀವ್ರತೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಪಾದಯಾತ್ರೆ ನಿರತ ರೇಣುಕಮ್ಮ ಅಪಘಾತದಲ್ಲಿ ಮೃತಪಟ್ಟ ನಂತರ ಇಡೀ ಹೋರಾಟದ ಸ್ವರೂಪವೇ ಬದಲಾಗಿದೆ.

ಈಗಾಗಲೇ 3 ಸಾವಿರಕ್ಕೂ ಅಧಿಕ ಜನ ಮಹಿಳೆಯರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಮಹಿಳೆಯರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದು ನಾಳೆ ಮತ್ತಷ್ಟು ಸಂಖ್ಯೆಯ ಜನ ಹೋರಾಟದ ಭಾಗವಾಗುವ ನಿರೀಕ್ಷೆ ಇದೆ. ಇದಲ್ಲದೆ ನಾಳಿನ ಹೋರಾಟಕ್ಕೆ ಹಿರಿಯ ಸ್ವತಂತ್ರ್ಯ ಹೋರಾಟಗಾರರಾದ ಹೆಚ್‌.ಎಸ್.ದೊರೆಸ್ವಾಮಿ ಮುಂದಾಳತ್ವ ವಹಿಸಲಿದ್ದು, ಮಹಿಳೆಯರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇದೆ.

ಆದರೆ ಸಂಜೆ ಮಲ್ಲೇಶ್ವರದಿಂದ ಮೆಜೆಸ್ಟಿಕ್ ಬರಲಿರುವ ಮಹಿಳೆಯರನ್ನು ಸ್ವಾತಂತ್ರ್ಯ ಉದ್ಯಾನವನದ ಬಳಿಯೇ ತಡೆದು ನಿಲ್ಲಿಸಲು ಡಿಸಿಪಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ವಿಧಾನಸೌಧ ಹೊರತುಪಡಿಸಿ ಬೇರೆಡೆ ಪ್ರತಿಭಟಿಸುವುದಾದರೆ ಮಹಿಳೆಯರಿಗೆ ರಕ್ಷಣೆ ನೀಡುವುದಾಗಿಯೂ ಪೊಲೀಸ್ ಇಲಾಖೆ ತಿಳಿಸಿದೆ. ಆದರೆ ವಿಧಾನಸೌಧದ ಎದುರೇ ಪ್ರತಿಭಟಿಸುವ ತಮ್ಮ ಕೋರಿಕೆಯಿಂದ ಹಿಂದೆ ಸರಿಯಲು ಮಹಿಳೆಯರು ಸಿದ್ಧರಿಲ್ಲ.