samachara
www.samachara.com
ಇಂದು ‘ಗೌರಿ ದಿನ’; ಗೌರಿ ಲಂಕೇಶ್‌ ನೆನಪುಗಳ ಜತೆಗೆ ‘ಅಮ್ಮಿ’ ಪ್ರದರ್ಶನ
ಸುದ್ದಿ ಸಾರ

ಇಂದು ‘ಗೌರಿ ದಿನ’; ಗೌರಿ ಲಂಕೇಶ್‌ ನೆನಪುಗಳ ಜತೆಗೆ ‘ಅಮ್ಮಿ’ ಪ್ರದರ್ಶನ

ಗೌರಿ ಲಂಕೇಶ್‌ ನೆನಪಿನ ‘ಗೌರಿ ದಿನ’ ಕಾರ್ಯಕ್ರಮದಲ್ಲಿ ಜೆಎನ್‌ಯು ವಿದ್ಯಾರ್ಥಿ ನಜೀಬ್‌ ಕಾಣೆಯಾದ ಕುರಿತ ‘ಅಮ್ಮಿ’ ಕಿರುಚಿತ್ರ ಪ್ರದರ್ಶನಗೊಳ್ಳಲಿದೆ.

ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿಯಾಗಿದ್ದ ಗೌರಿ ಲಂಕೇಶ್ ಹುಟ್ಟುಹಬ್ಬದ ಪ್ರಯುಕ್ತ ಗೌರಿ ಸ್ಮಾರಕ ಟ್ರಸ್ಟ್‌ ಬೆಂಗಳೂರಿನಲ್ಲಿಂದು (ಜನವರಿ 29) ‘ಗೌರಿ ದಿನ’ ಆಚರಿಸುತ್ತಿದೆ.

ನಗರದ ಸೇಂಟ್ ಜೋಸೆಫ್ ಕಾಲೇಜಿನ ಕ್ಸೇವಿಯರ್ ಹಾಲ್‌ನಲ್ಲಿ ಸಂಜೆ 4 ಗಂಟೆಯಿಂದ ‘ಗೌರಿ ದಿನ’ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ‘ನಾನು ಗೌರಿ’ ಪತ್ರಿಕೆಯ ವೆಬ್ ಆವೃತ್ತಿ www.nanugauri.com ಲೋಕಾರ್ಪಣೆಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ‘ಅಮ್ಮಿ’ ಕಿರುಚಿತ್ರ ಪ್ರದರ್ಶನ ನಡೆಯಲಿದೆ. ಕಳೆದ ಎರಡು ವರ್ಷಗಳಿಂದ ಕಾಣೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಕುರಿತ ಕಿರುಚಿತ್ರ ಇದಾಗಿದೆ. ಜತೆಗೆ ನಜೀಬ್ ತಾಯಿಯೊಂದಿಗೆ ಸಂವಾದವನ್ನೂ ಏರ್ಪಡಿಸಲಾಗಿದೆ.

Also read: ಗೌರಿ ಲಂಕೇಶ್‌ ನೆನಪು ಬಿತ್ತಿದ ‘ಗೌರಿ ದಿನ’; ಅಭಿವ್ಯಕ್ತಿ ಹತ್ತಿಕ್ಕುವ ಶಕ್ತಿಗಳ ವಿರುದ್ಧ ಆಕ್ರೋಶ

27 ವರ್ಷದ ನಜೀಬ್ ದೆಹಲಿಯ ಜವಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರು. ವಿಶ್ವವಿದ್ಯಾಲಯದ ಮಹಿ-ಮಂದವಿ ಹಾಸ್ಟೆಲ್‌ನಲ್ಲಿದ್ದ ನಜೀಬ್‌ ಅವರ ಮೇಲೆ 2016ರ ಅಕ್ಟೋಬರ್ 14ರ ರಾತ್ರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು, ಹಾಸ್ಟೆಲ್‌ಗೆ ನುಗ್ಗಿ ಹಲ್ಲೆ ನಡೆಸಿದ್ದರು. ಇದಾದ ಮರುದಿನದಿಂದ ನಜೀಬ್‌ ಕಾಣೆಯಾಗಿದ್ದಾರೆ.

ಕಾಣೆಯಾದ ಮಗನನ್ನು ಹುಡುಕಿಕೊಡಿ ಎಂದು ನಜೀಬ್‌ ತಾಯಿ ಸರಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರೆ. ನಜೀಬ್‌ ಹುಡುಕಾಟದಲ್ಲಿದ್ದ ಸಿಬಿಐ ಅಧಿಕಾರಿಗಳು ಸಹ ಇದೀಗ ಹುಡುಕಾಟವನ್ನು ಕೈಬಿಟ್ಟಿದ್ದಾರೆ. ಎಲ್ಲಾ ಈ ಮಾಹಿತಿಗಳನ್ನು ಒಳಗೊಂಡ ‘ಅಮ್ಮಿ’ ಕಿರುಚಿತ್ರ ‘ಗೌರಿ ದಿನ’ದಲ್ಲಿ ಪ್ರದರ್ಶನಗೊಳ್ಳಲಿದೆ.

ವಾರ್ತಾ ಭಾರತಿ ದಿನ ಪತ್ರಿಕೆಯ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ವಿಶೇಷ ಉಪನ್ಯಾಸ ನೀಡಲಿದ್ದು, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ, ಎ.ಕೆ. ಸುಬ್ಬಯ್ಯ, ಜಿ.ಎನ್. ಗಣೇಶ್ ದೇವಿ, ವಿ.ಎಸ್. ಶ್ರೀಧರ್, ಕೆ.ಎಲ್. ಅಶೋಕ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.