samachara
www.samachara.com
ತಾಳ್ಮೆ ಕಳೆದುಕೊಂಡ ತಂದೆ, ಕ್ಷಮೆ ಕೋರಿದ ಪುತ್ರ, ಬಿಜೆಪಿಗೆ ನೆನಪಾದ ‘ಸೀರೆ ಎಳೆದ’ ದುಶ್ಯಾಸನ
ಸುದ್ದಿ ಸಾರ

ತಾಳ್ಮೆ ಕಳೆದುಕೊಂಡ ತಂದೆ, ಕ್ಷಮೆ ಕೋರಿದ ಪುತ್ರ, ಬಿಜೆಪಿಗೆ ನೆನಪಾದ ‘ಸೀರೆ ಎಳೆದ’ ದುಶ್ಯಾಸನ

ಅಧಿಕಾರಿಗಳ ವಿರುದ್ಧ ದೂರು ಕೇಳುತ್ತಾ ಕುಳಿತಿದ್ದ ಸಿದ್ದರಾಮಯ್ಯ, ಜಮಲಾರ್‌ ತಮ್ಮ ಮಗನ ವಿರುದ್ಧವೇ ದೂರಲು ಮುಂದಾದಾಗ ಮೈಕ್‌ ಕಿತ್ತುಕೊಂಡು ಅಸಭ್ಯವಾಗಿ ವರ್ತಿಸಿದರು.

Team Samachara

ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳೆಯೊಬ್ಬರ ಮೇಲೆ ಸಿಟ್ಟಿಗೆದ್ದು ಕೂಗಾಡಿ, ಅಸಭ್ಯವಾಗಿ ವರ್ತಿಸಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಸ್ಥಳೀಯ ಸಮಸ್ಯೆಗಳ ಬಗ್ಗೆ ಕುಂದು ಕೊರತೆ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಜಮಲಾರ್‌ ಎಂಬುವರು ಮೈಕ್‌ ಹಿಡಿದು ಸಿದ್ದರಾಮಯ್ಯ ಕುಳಿತಿದ್ದ ಟೇಬಲ್‌ ಮುಂದೆಯೇ ಅಧಿಕಾರಿಗಳ ವಿರುದ್ಧ ದೀರ್ಘವಾಗಿ ದೂರುಗಳನ್ನು ಒಪ್ಪಿಸುತ್ತಿದ್ದರು.

ಒಂದು ಹಂತದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಚೆಸ್ಕಾಂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುವ ವೇಳೆ ಜಮಲಾರ್‌ ಸಿದ್ದರಾಮಯ್ಯ ಮುಂದಿದ್ದ ಟೇಬಲ್‌ ಕುಟ್ಟಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

“ಅಧಿಕಾರಿಗಳೂ ಕೆಲಸ ಮಾಡುತ್ತಿಲ್ಲ. ಶಾಸಕರೂ ನಮ್ಮನ್ನು ತಿರುಗಿ ನೋಡುತ್ತಿಲ್ಲ” ಎಂದು ಜಮಲಾರ್‌ ಹೇಳುತ್ತಿದ್ದ ವೇಳೆ ಟೇಬಲ್‌ ಕುಟ್ಟಿದ್ದರಿಂದ ಸಿಟ್ಟಾದ ಸಿದ್ದರಾಮಯ್ಯ ಜಮಲಾರ್‌ ಅವರ ಕೈಯಿಂದ ಮೈಕ್‌ ಕಿತ್ತುಕೊಂಡರು. ಈ ವೇಳೆ ಜಮಲಾರ್‌ ಅವರು ಹೊದ್ದಿದ್ದ ದುಪಟ್ಟಾ ಕೂಡಾ ಸಿದ್ದರಾಮಯ್ಯ ಕೈಗೆ ಬಂತು.

ಅಧಿಕಾರಿಗಳ ವಿರುದ್ಧ ಮಾತನಾಡುವಾಗ ಸುಮ್ಮನೇ ಕುಳಿತಿದ್ದ ಸಿದ್ದರಾಮಯ್ಯ ತಮ್ಮ ಮಗ, ಶಾಸಕ ಯತೀಂದ್ರ ವಿರುದ್ಧ ಜಮಲಾರ್‌ ಅವರು ಆರೋಪ ಮಾಡುವ ವೇಳೆ ಕುಪಿತರಾದರು. ಜಮಲಾರ್‌ ಟೇಬಲ್‌ ಕುಟ್ಟಿ ಕುಟ್ಟಿ ಮಾತನಾಡುತ್ತಿದ್ದಂತೆ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡು ವ್ಯಗ್ರರಾಗಿ ವರ್ತಿಸಿದರು.

ಮೈಕ್‌ ಕಿತ್ತುಕೊಂಡ ಮೇಲೆ ಜಮಲಾರ್‌ ಅವರ ಮೇಲೆ ರೇಗಲು ಶುರು ಮಾಡಿದ ಸಿದ್ದರಾಮಯ್ಯ, "ಏಯ್ ಕೂತ್ಕೋಳಮ್ಮ ಸುಮ್ನೆ ನೀನು" ಎಂದು ಎದ್ದು ನಿಂತು ಜಮಲಾರ್‌ ಅವರ ಮೇಲೆ ಕೂಗಾಡಲು ಶುರು ಮಾಡಿದರು.

ತಾಳ್ಮೆ ಕಳೆದುಕೊಂಡ ತಂದೆ, ಕ್ಷಮೆ ಕೋರಿದ ಪುತ್ರ, ಬಿಜೆಪಿಗೆ ನೆನಪಾದ ‘ಸೀರೆ ಎಳೆದ’ ದುಶ್ಯಾಸನ

ಜಮಲಾರ್‌ ಅವರು ತಮ್ಮ ಮಾತನ್ನು ಮುಂದುವರಿಸಲು ಮೇಲೆ ಏಳುತ್ತಿದ್ದಾಗೆಲ್ಲಾ ಸಿದ್ದರಾಮಯ್ಯ ಅವರ ಮೇಲೆ, “ದೊಡ್ಡ ಲೀಡರ್ರಾ ನೀನು” ಎಂದು ರೇಗುತ್ತಾ ಬಲವಂತವಾಗಿ ಕೂರಿಸುತ್ತಿದ್ದರು. ಜಮಲಾರ್‌ ಮರು ಮಾತನಾಡಂತೆ, ಉಸಿರೆತ್ತದಂತೆ ತಡೆದ ಸಿದ್ದರಾಮಯ್ಯ ತಮ್ಮನ್ನು ಸಮರ್ಥಿಸಿಕೊಂಡು ಮಾತನಾಡಿ, ಅಲ್ಲಿಗೇ ಆ ಸಭೆ ಮುಗಿಸಿ ಮಗ ಯತೀಂದ್ರ ಅವರೊಂದಿಗೆ ಅಲ್ಲಿಂದ ಹೊರಟರು.

ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಮಲಾರ್‌, "ಸಿದ್ದರಾಮಯ್ಯ ಒಳ್ಳೆಯವರು. ನನ್ನ ಮಾತಿನಿಂದ ಅವರು ಯಾಕೆ ತಾಳ್ಮೆ ಕಳೆದುಕೊಂಡರೋ ಗೊತ್ತಿಲ್ಲ. ಅವರ ಮಗ ಕ್ಷೇತ್ರಕ್ಕೆ ಯಾವಾಗ ಬರುತ್ತಾರೆ ಎಂಬ ಮಾಹಿತಿಯನ್ನು ಅವರ ಹಿಂಬಾಲಕರು ಕೊಡುತ್ತಿಲ್ಲ. ಈ ಕಾರಣಕ್ಕೆ ನಾನೂ ಏರು ದನಿಯಲ್ಲಿ ಮಾತನಾಡಿದೆ. ನಾನು ಟೇಬಲ್‌ ಕುಟ್ಟಿದ್ದು ನನ್ನ ತಪ್ಪು" ಎಂದಿದ್ದಾರೆ.

ಆ ಮಹಿಳೆ ನನಗೆ 15 ವರ್ಷಗಳಿಂದಲೂ ಪರಿಚಯ. ದೀರ್ಘವಾಗಿ ಮಾತನಾಡುತ್ತಿದ್ದಅವರನ್ನು ತಡೆಯಲು ನಾನು ಮುಂದಾದಾಗ ಈ ಘಟನೆ ನಡೆದಿದೆ. ನಾನು ದುರುದ್ದೇಶದಿಂದ ಹೀಗೆ ನಡೆದುಕೊಂಡಿಲ್ಲ.ಆಕೆ ನನಗೆ ಸಹೋದರಿ ಇದ್ದಂತೆ.
- ಸಿದ್ದರಾಮಯ್ಯ

ಈ ಘಟನೆಯ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಯತೀಂದ್ರ, "ನಮ್ಮ ತಂದೆ ತಾಳ್ಮೆ ಕಳೆದುಕೊಂಡಿದ್ದು ನಿಜ. ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ" ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ವರ್ತನೆಯನ್ನು ಬಿಜೆಪಿ ವಿರೋಧಿಸಿದೆ. 'ಕೌರವರ ಸರಕಾರದ ಆಧುನಿಕ ದುಶ್ಯಾಸನ?' ಎಂದು ಬಿಜೆಪಿ ಕರ್ನಾಟಕ ಘಟಕ ಟ್ವೀಟ್‌ ಮಾಡಿದೆ.