samachara
www.samachara.com
ಬೆಂಗಳೂರಿನತ್ತ ಪಾದಯಾತ್ರೆ; ಮದ್ಯ ನಿಷೇಧದ ಹಾದಿಯಲ್ಲಿ ರೇಣುಕಮ್ಮ ಸಾವು
ಸುದ್ದಿ ಸಾರ

ಬೆಂಗಳೂರಿನತ್ತ ಪಾದಯಾತ್ರೆ; ಮದ್ಯ ನಿಷೇಧದ ಹಾದಿಯಲ್ಲಿ ರೇಣುಕಮ್ಮ ಸಾವು

ರೇಣುಕಮ್ಮ ಅವರ ಸಾವಿನ ನಂತರ ಹೋರಾಟದ ಸ್ವರೂಪ ಬದಲಾಗುತ್ತಿದೆ. ಹೋರಾಟ ತೀವ್ರಗೊಳಿಸಲು ಪ್ರತಿಭಟನಾಕಾರರು ಮುಂದಾಗಿದ್ದಾರೆ.

Team Samachara

ಮದ್ಯ ನಿಷೇಧ ಆಂದೋಲನದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ರಾಯಚೂರು ಜಿಲ್ಲೆ, ಲಿಂಗಸಗೂರು ತಾಲ್ಲೂಕಿನ ಕೈರವಾಡಿ ಗ್ರಾಮದ ಮಹಿಳೆ ರೇಣುಕಮ್ಮ (60) ಡಾಬಸ್‌ಪೇಟೆ ಬಳಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿನ ನಂತರ ಹೋರಾಟದ ಸ್ವರೂಪ ಬದಲಾಗುತ್ತಿದೆ.

ಭಾನುವಾರ ತುಮಕೂರಿನಿಂದ ಹೊರಟ ಪಾದಯಾತ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರವೇಶಿಸಿ ಕುಲುವನಹಳ್ಳಿ ಬಳಿ ಪ್ರತಿಭಟನಾಕಾರರು ರಾತ್ರಿ ಊಟ ಮುಗಿಸಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದ ರೇಣುಕಮ್ಮ ಅವರಿಗೆ ಬೈಕ್‌ ಗುದ್ದಿದೆ. ತೀವ್ರವಾಗಿ ಗಾಯಗೊಂಡ ರೇಣುಕಮ್ಮ ಅವರನ್ನು ಅವರ ಜತೆಗಿದ್ದವರು ಹರ್ಷ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ರೇಣುಕಮ್ಮ ಅವರನ್ನು ಉಳಿಸಿಕೊಳ್ಳಲಾಗಿಲ್ಲ.

“ರೇಣುಕಮ್ಮ ಸುಮಾರು 5 ವರ್ಷದಿಂದ ನಮ್ಮ ಹೋರಾಟದ ಜತೆಗಿದ್ದರು. ಅವರಿಗೆ ಮೂರು ಮಂದಿ ಹೆಣ್ಣುಮಕ್ಕಳು. ಇಬ್ಬರ ಮದುವೆಯಾಗಿದೆ. ಒಬ್ಬ ಅಂಗವಿಕಲ ಹೆಣ್ಣುಮಗಳು ಇವರನ್ನೇ ನೆಚ್ಚಿಕೊಂಡಿದ್ದರು. ರೇಣುಕಮ್ಮ ಅವರ ಸಾವು ಕೂಡಾ ಈ ಜಡ್ಡು ಬಿದ್ದ ಸರಕಾರಕ್ಕೆ ಸ್ಪಂದನೆ ತರುತ್ತಿಲ್ಲ” ಎಂದು ಮದ್ಯ ನಿಷೇಧ ಆಂದೋಲನದ ಸಂಚಾಲಕಿ ವಿದ್ಯಾ ಪಾಟೀಲ್‌ ತಿಳಿಸಿದರು.

“ತುಮಕೂರು ಜಿಲ್ಲೆಯವರೆಗೂ ನಮಗೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ನಮಗೆ ಯಾವ ಭದ್ರತೆಯೂ ಇಲ್ಲದಂತಾಯಿತು. ಹೆದ್ದಾರಿಯಲ್ಲಿ ಪಾದಯಾತ್ರೆ ಹೊರಟಿರುವ ಮಹಿಳೆಯರಿಗೆ ಭದ್ರತೆ ಒದಗಿಸಬೇಕು ಎಂಬ ಸೂಕ್ಷ್ಮತೆಯೂ ಪೊಲೀಸರಿಗೆ ಇಲ್ಲದೇ ಹೋಗಿದ್ದು ವಿಪರ್ಯಾಸ” ಎಂದರು.

ಪಾದಯಾತ್ರೆಗೆ ಬಂದಿದ್ದ ಮಹಿಳೆಯರು ಡಾಬಸ್‌ಪೇಟ್ ಬಳಿ ಹೊಲದಲ್ಲಿ ತಂಗಿದ್ದ ಸ್ಥಳ
ಪಾದಯಾತ್ರೆಗೆ ಬಂದಿದ್ದ ಮಹಿಳೆಯರು ಡಾಬಸ್‌ಪೇಟ್ ಬಳಿ ಹೊಲದಲ್ಲಿ ತಂಗಿದ್ದ ಸ್ಥಳ
ರೇಣುಕಮ್ಮ ಅವರ ಸಾವಿಗೆ ನಾವು ಕೇಳುತ್ತಿರುವ ಪರಿಹಾರ ಹಣವಲ್ಲ. ಈ ಸರಕಾರಕ್ಕೆ ನಿಜಕ್ಕೂ ರೇಣುಕಮ್ಮ ಸಾವಿಗೆ ಪರಿಹಾರ ಕೊಡುವ ಪ್ರಾಮಾಣಿಕ ಮನಸ್ಸಿದ್ದರೆ ಸಂಪೂರ್ಣ ಮದ್ಯ ನಿಷೇದ ಮಾಡಲಿ. ಸರಕಾರ ನಮ್ಮ ಹೋರಾಟವನ್ನು ಗಂಭೀರವಾಗಿ ತೆಗದುಕೊಳ್ಳದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ.
- ವಿದ್ಯಾ ಪಾಟೀಲ್, ಮದ್ಯ ನಿಷೇಧ ಆಂದೋಲನದ ಸಂಚಾಲಕಿ

ಜನವರಿ 19ರಂದು ಚಿತ್ರದುರ್ಗದ ಆರಂಭವಾಗಿರುವ ಈ ಪಾದಯಾತ್ರೆ ಸದ್ಯ ನೆಲಮಂಗಳ ಸಮೀಪಿಸಿದೆ. ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಬಗ್ಗೆಯೂ ಪ್ರತಿಭಟನಾಕಾರರು ಚಿಂತನೆ ನಡೆಸಿದ್ದಾರೆ. ಮತ್ತೊಂದು ಕಡೆ ಮುಖ್ಯಮಂತ್ರಿ ಮೇಲೆ ಒತ್ತಡ ತರಲು ರಾಜಧಾನಿಯಲ್ಲಿ ಕೆಲವು ಸಂಘಟನೆಗಳು ಮುಂದಾಗಿವೆ. ಮಧ್ಯಾಹ್ನ 3 ಗಂಟೆಗೆ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಮದ್ಯ ನಿಷೇಧಕ್ಕಾಗಿ ಸಾವಿರಾರು ಮಹಿಳೆಯರು ಪಾದಯಾತ್ರೆ ಹೊರಟು ಇಂದಿಗೆ 10ನೇ ದಿನ. ಸರಕಾರದ ಯಾವ ಪ್ರತಿನಿಧಿಯೂ ಈವರೆಗೆ ತಮ್ಮನ್ನು ಭೇಟಿಯಾಗಿಲ್ಲ ಎಂಬ ತೀವ್ರ ಆಕ್ರೋಶ ಈ ಮಹಿಳೆಯರಲ್ಲಿದೆ. ಅದರೊಂದಿಗೆ ರೇಣುಕಮ್ಮ ಅವರ ಸಾವು ಕೂಡಾ ಈ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆ.

“ಈ ಹೋರಾಟದಲ್ಲಿ ಸುಮಾರು 3 ಲಕ್ಷ ಜನರಿದ್ದೇವೆ. ನಾವೆಲ್ಲರೂ ತಲಾ 10 ರೂಪಾಯಿ ಕೊಟ್ಟರೂ ರೇಣುಕಮ್ಮ ಕುಟುಂಬಕ್ಕೆ 30 ಲಕ್ಷ ರೂಪಾಯಿ ಕೊಡಬಹುದು. ಹೀಗಾಗಿ ನಾವು ಪರಿಹಾರದ ಹಣಕ್ಕಾಗಿ ಸರಕಾರದ ಮುಂದೆ ಭಿಕ್ಷೆ ಬೇಡುವುದಿಲ್ಲ. ನಮ್ಮ ಮೊದಲ ಹಾಗೂ ಕೊನೆಯ ಬೇಡಿಕೆ ಮದ್ಯ ನಿಷೇಧ ಆಗಬೇಕು ಎಂಬುದೊಂದೇ” ಎನ್ನುತ್ತಾರೆ ವಿದ್ಯಾ ಪಾಟೀಲ್‌.

ಈ ಹಿಂದೆ ಜನವರಿ 30ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ನಿರ್ಧರಿಸಿದ್ದರು. ಆದರೆ, ರೇಣುಕಮ್ಮ ಅವರ ಸಾವಿನ ಬಳಿಕ ಹೋರಾಟದ ಸ್ವರೂಪ ಬದಲಿಸಲು ಆಂದೋಲನದ ಪ್ರಮುಖರು ತೀರ್ಮಾನಿಸಿದ್ದಾರೆ. ಬೇರೆ ಬೇರೆ ಸಂಘಟನೆಗಳ ಬೆಂಬಲದೊಂದಿಗೆ ಸರಕಾರದ ಮೇಲೆ ತೀವ್ರ ಒತ್ತಡ ತರಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.

Also read: ಮದ್ಯನಿಷೇಧ ಆಂದೋಲನ: ಮಾದರಿಯಾಗಬೇಕಿದ್ದ ಎ. ಟಿ. ಬಾಬುರನ್ನು ಮರೆಯೋದು ಹೆಂಗೆ?