
‘ಕಾಂಗ್ರೆಸ್ ಶಾಸಕರು ಮಿತಿ ಮೀರಿದರೆ ನನ್ನ ದಾರಿ ನನಗೆ’: ಸಮ್ಮಿಶ್ರ ಸರಕಾರದ ಸಿಎಂ ಎಚ್ಚರಿಕೆ!
“ಶಾಸಕರು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ” ಎಂದಿದ್ದಾರೆ ಕುಮಾರಸ್ವಾಮಿ.
ಸಮ್ಮಿಶ್ರ ಸರಕಾರದ ಸಾಂದರ್ಭಿಕ ಶಿಶು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಭಿನ್ನರಾಗ ಹಾಡಿದ್ದಾರೆ. ಕಾಂಗ್ರೆಸ್ ಶಾಸಕರ ವಿರುದ್ಧ ಸಿಟ್ಟಾಗಿರುವ ಕುಮಾರಸ್ವಾಮಿ ಈ ಬಾರಿ ರಾಜೀನಾಮೆಯ ಮಾತನ್ನಾಡಿದ್ದಾರೆ.
"ಶಾಸಕರು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ" ಎಂದಿದ್ದಾರೆ ಕುಮಾರಸ್ವಾಮಿ. ಅವರ ಈ ಹೇಳಿಕೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಿದೆ.
ಒಂದೆಡೆ ಆಪರೇಷನ್ ಕಮಲದ ಭೀತಿಯಿಂದ ದೋಸ್ತಿ ಸರ್ಕಾರದ ಭವಿಷ್ಯ ಏನಾಗಲಿದೆಯೋ ಎಂಬ ಅತಂತ್ರ ಸ್ಥಿತಿಯಲ್ಲಿ ಸರಕಾರ ನಡೆಯುತ್ತಿರುವ ಸಂದರ್ಣದಲ್ಲಿ ಕುಮಾರಸ್ವಾಮಿ ಹೇಳಿಕೆ ಸರಕಾರದ ಅಸ್ತಿತ್ವವನ್ನೇ ಅಲುಗಾಡಿಸುವಂತಿದೆ.
ಭಾನುವಾರ ಬೆಂಗಳೂರಿನಲ್ಲಿ ಕನಕಭವನ ಉದ್ಘಾಟನೆ ವೇಳೆ ಕಾಂಗ್ರೆಸ್ನ ಕೆಲ ಸಚಿವರು ಮತ್ತು ಶಾಸಕರು ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯನವರನ್ನು ಹೊಗಳಿ, ತಮ್ಮನ್ನು ಟೀಕಿಸಿರುವುದು ಕುಮಾರಸ್ವಾಮಿ ಸಿಟ್ಟಿಗೇಳುವಂತೆ ಮಾಡಿದೆ.
ಇತ್ತ ತಿಪ್ಪೆ ಸಾರಿಸಿಕೊಳ್ಳಲು ಮುಂದಾಗಿರುವ ಕೆಪಿಸಿಸಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ತಮ್ಮ ಹೇಳಿಕೆ ಕುರಿತು ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
"ಕಾಂಗ್ರೆಸ್ ಶಾಸಕರ ವರ್ತನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೂ ಇತಿಮಿತಿ ಎಂಬುದು ಇದೆ. ಅವರ ವರ್ತನೆಗಳು ಇದೇ ರೀತಿ ಮುಂದುವರಿದರೆ ಅಧಿಕಾರದಿಂದ ಕೆಳಗಿಳಿಯಲು ನಾನು ಸಿದ್ಧ" ಎಂದು ಕಾಂಗ್ರೆಸ್ಗೆ ನೇರವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ ಕುಮಾರಸ್ವಾಮಿ.
"ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತವನಲ್ಲ. ಸಮ್ಮಿಶ್ರ ಸರ್ಕಾರ ಎಂದ ಮೇಲೆ ಮೈತ್ರಿ ಪಾಲನೆಯಾಗಲೇಬೇಕು. ನಮ್ಮ ಶಾಸಕರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ದೊಡ್ಡವರಂತೆ ವರ್ತಿಸಿದರೆ ಸಹಿಸಲು ಸಾಧ್ಯವೇ ಇಲ್ಲ" ಎಂದು ಕಾಂಗ್ರೆಸ್ ವಿರುದ್ಧ ಸಿಟ್ಟಾದರು.
"ನನ್ನ ಯೋಜನೆಗಳು ಯಶಸ್ವಿಯಾಗಬೇಕೆಂಬ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅದರಲ್ಲಿ ಯಶಸ್ವಿಯಾಗದಿದ್ದರೆ ಅಧಿಕಾರದಲ್ಲಿ ನಾನು ಮುಂದುವರೆಯುವುದಿಲ್ಲ. ಮೈತ್ರಿ ಧರ್ಮವನ್ನು ಎಲ್ಲರೂ ಪಾಲಿಸಬೇಕು. ಕಾಂಗ್ರೆಸ್ ಇದನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ನನ್ನ ದಾರಿ ನನಗೆ" ಎನ್ನುವ ಮೂಲಕ ಮೈತ್ರಿಯನ್ನು ಕಡಿದುಕೊಳ್ಳಲು ಸಿದ್ಧ ಎಂಬ ಸಂದೇಶವನ್ನು ರವಾನಿಸಿದರು.
ಕಾಂಗ್ರೆಸ್ ಮುಖಂಡರು ಹೇಳಿದ್ದೇನು?
ಕಾಂಗ್ರೆಸ್ ಶಾಸಕರು ಇತ್ತೀಚೆಗೆ ಕುಮಾರಸ್ವಾಮಿಗೆ ಮುಜುಗರವಾಗುವಂಥ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಸಚಿವ ಪುಟ್ಟರಂಗಶೆಟ್ಟಿ, "ಈಗಲೂ ಸಿದ್ದರಾಮಯ್ಯನವರೇ ನನಗೆ ಮುಖ್ಯಮಂತ್ರಿ" ಎಂದು ಹೇಳಿದ್ದರು. ಮತ್ತೋರ್ವ ಸಚಿವ ಎಂ.ಟಿ.ಬಿ. ನಾಗರಾಜ್, "ಹನುಮಂತನ ಎದೆ ಬಗೆದರೆ ರಾಮ-ಸೀತೆ-ಲಕ್ಷ್ಮಣ ಹೇಗೆ ಕಾಣುತ್ತಾರೋ ಅದೇ ರೀತಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ" ಎಂದಿದ್ದರು.
"ಕಳೆದ ಏಳು ತಿಂಗಳಿಂದ ಬೆಂಗಳೂರು ಅಭಿವೃದ್ಧಿ ಆಗಿಲ್ಲ. ಒಂದೇ ಒಂದು ರಸ್ತೆ ಗುಂಡಿಯನ್ನೂ ಮುಚ್ಚಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೆ ಬೆಂಗಳೂರಿನ ಅಭಿವೃದ್ಧಿಯ ಚಿತ್ರಣವೇ ಬದಲಾಗುತ್ತಿತ್ತು" ಮತ್ತೊಬ್ಬ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದರು.
"ಕೆಲವರು ರಾಜಕಾರಣದಲ್ಲಿ ಬೇರೆಯವರನ್ನು ಬೆಳೆಯಲು ಬಿಡುವುದೇ ಇಲ್ಲ. ಸೊಸೆ, ಮಕ್ಕಳು, ಮೊಮ್ಮಕ್ಕಳು ಮಾತ್ರ ಬೆಳೆಯಲಿ ಎಂದು ಆಶಿಸುತ್ತಾರೆ" ಎಂದು ಹೇಳುವ ಮೂಲಕ ಸೋಮಶೇಖರ್ ಜೆಡಿಎಸ್ನ ಕುಟುಂಬ ರಾಜಕಾರಣವನ್ನು ಪರೋಕ್ಷವಾಗಿ ಟೀಕಿಸಿದ್ದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಪ್ರಾದೇಶಿಕ ಪಕ್ಷಗಳೆಲ್ಲವೂ ಒಂದಾಗಬೇಕೆಂದು ಹೇಳುತ್ತಿರುವಾಗಲೇ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದೊಳಗಿನ ಅಸಮಾಧಾನ, ಹಳಹಳಿಕೆಗಳು ಲೋಕಸಭಾ ಚುನಾವಣೆಯ ನಂತರ ಈ ಸರಕಾರ ಹೇಗೋ ಏನೋ ಎಂಬ ಅನುಮಾನಗಳನ್ನು ಹುಟ್ಟುಹಾಕಿವೆ.