samachara
www.samachara.com
ಮಂಗಳವಾರವೂ ನಡೆಯದು ಅಯೋಧ್ಯೆ ಪ್ರಕರಣದ ವಿಚಾರಣೆ: ಸುಪ್ರೀಂ ಸುತ್ತೋಲೆ
ಸುದ್ದಿ ಸಾರ

ಮಂಗಳವಾರವೂ ನಡೆಯದು ಅಯೋಧ್ಯೆ ಪ್ರಕರಣದ ವಿಚಾರಣೆ: ಸುಪ್ರೀಂ ಸುತ್ತೋಲೆ

ಜನವರಿ 29ರಂದು ನಡೆಯಬೇಕಿದ್ದ ಅಯೋಧ್ಯೆ ಪ್ರಕರಣದ ವಿಚಾರಣೆ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಅಲಭ್ಯದ ಕಾರಣಕ್ಕೆ ಮುಂದೂಡಿಕೆಯಾಗಿದೆ.

Team Samachara

ಅಯೋಧ್ಯೆ ಭೂ ವಿವಾದ ಪ್ರಕರಣದ ವಿಚಾರಣೆ ಮಂಗಳವಾರವೂ (ಜ.29) ನಡೆಯದು ಎಂದು ಸುಪ್ರೀಂಕೋರ್ಟ್ ಸುತ್ತೋಲೆ ಸ್ಪಷ್ಟಪಡಿಸಿದೆ. ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ಮಂಗಳವಾರ ಈ ಪ್ರಕರಣದ ವಿಚಾರಣೆ ಆರಂಭವಾಗಬೇಕಿತ್ತು.

ನ್ಯಾಯಪೀಠದ ಸದಸ್ಯರಾದ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಮಂಗಳವಾರ ಲಭ್ಯವಿರದ ಕಾರಣಕ್ಕೆ ಮಂಗಳವಾರ ವಿಚಾರಣೆ ನಡೆಯದು ಎಂದು ಒಂದು ಸುಪ್ರೀಂಕೋರ್ಟ್‌ನ ಹೆಚ್ಚುವರಿ ರಿಜಿಸ್ಟ್ರಾರ್‌ ಭಾನುವಾರ ಒಂದು ಪ್ಯಾರಾದ ಸುತ್ತೋಲೆ ಹೊರಡಿಸಿದ್ದಾರೆ. ಆದರೆ, ಮುಂದಿನ ವಿಚಾರಣೆಯ ದಿನಾಂಕವನ್ನು ಸ್ಪಷ್ಟಪಡಿಸಿಲ್ಲ.

ಸುಪ್ರೀಂಕೋರ್ಟ್‌ ಭಾನುವಾರ ಹೊರಡಿಸಿರುವ ಸುತ್ತೋಲೆ
ಸುಪ್ರೀಂಕೋರ್ಟ್‌ ಭಾನುವಾರ ಹೊರಡಿಸಿರುವ ಸುತ್ತೋಲೆ

ಜನವರಿ 4ರಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ನ್ಯಾಯಪೀಠದ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಅಂದು ಒಂದು ನಿಮಿಷದೊಳಗೆ ಈ ಪ್ರಕರಣದ ಕಲಾಪ ಮುಗಿಸಿದ್ದ ಗೊಗೋಯಿ ಈ ಪ್ರಕರಣ ಜ.10ರಂದು ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಗೆ ಬರಲಿದೆ ಎಂದಿದ್ದರು.

ಈ ಪ್ರಕರಣ ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿ ಗೊಗೋಯಿ ನೇತೃತ್ವದಲ್ಲಿ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚಿಸಲಾಗಿತ್ತು. ಮೊದಲು ಈ ಪೀಠದಲ್ಲಿ ಗೊಗೋಯಿ, ಎಸ್‌.ಎ. ಬೊಬ್ಡೆ, ಎನ್‌.ವಿ. ರಮಣ, ಯು. ಉದಯ್ ಲಲಿತ್ ಮತ್ತು ಡಿ.ವೈ. ಚಂದ್ರಚೂಡ್ ಅವರಿದ್ದರು. ಆದರೆ ಜ.10 ರಂದು ವಿಚಾರಣೆ ಆರಂಭವಾಗುತ್ತಿದ್ದಂತೆ ಉದಯ್ ಲಲಿತ್ ಈ ಪ್ರಕರಣ ವಿಚಾರಣೆಯಿಂದ ಹಿಂದೆ ಸರಿದಿದ್ದರು.

ಉದಯ್‌ ಲಲಿತ್‌ 1994ರಲ್ಲಿ ಆಗಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಪರ ವಕೀಲರಾಗಿದ್ದರು ಎಂಬುದನ್ನು ಮುಸ್ಲಿಂ ಪಾರ್ಟಿ ಪರ ವಕೀಲರಾಗಿದ್ದ ರಾಜೀವ್ ಧವನ್ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆದರೆ, ಉದಯ್ ಲಲಿತ್ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಧವನ್ ಮನವಿ ಮಾಡಿರಲಿಲ್ಲ. ಆದರೂ ಉದಯ್‌ ಲಲಿತ್ ತಾವಾಗಿಯೇ ಈ ಪ್ರಕರಣದ ವಿಚಾರಣೆಯಿಂದ ಹೊರಬಂದಿದ್ದರು.

ಗೊಗೋಯಿ, ಬೊಬ್ಡೆ, ಚಂದ್ರಚೂಡ್, ಅಶೋಕ್‌ ಭೂಷಣ್‌ ಮತ್ತು ಎಸ್‌. ಅಬ್ದುಲ್‌ ನಜೀರ್‌ ಅವರಿದ್ದ ಪೀಠದ ಮುಂದೆ ಜ.29ಕ್ಕೆ ಈ ಪ್ರಕರಣ ವಿಚಾರಣೆಗೆ ಬರಬೇಕಿತ್ತು. ಆದರೆ, ಬೊಬ್ಡೆ ಅಲಭ್ಯದ ಕಾರಣಕ್ಕೆ ಈಗ ವಿಚಾರಣೆ ಮುಂದೂಡಿಕೆಯಾಗಿದೆ.

“ಅಯೋಧ್ಯೆಯ ರಾಮ ಜನ್ಮಭೂಮಿಯ ಜಾಗದಲ್ಲಿ 16ನೇ ಶತಮಾನದಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗಿದೆ” ಎಂದು ವಾದಿಸಿದ್ದ ಹಿಂದುತ್ವ ಸಂಘಟನೆಗಳು 1992ರ ಡಿಸೆಂಬರ್‌ 6ರಂದು ಬಾಬ್ರಿ ಮಸೀದಿಯನ್ನು ಕೆಡವಿದ್ದವು.

2.7 ಎಕರೆ ಜಾಗದ ವಿವಾದಿತ ಭೂಮಿಯಲ್ಲಿ ಬಾಬ್ರಿ ಮಸೀದಿಯನ್ನು ನೆಲಸಮಗೊಳಿಸಿ ಆ ಜಾಗದಲ್ಲಿ ರಾಮ ಮಂದಿರ ನಿರ್ಮಿಸಬೇಕು ಎಂಬುದು ಹಿಂದುತ್ವ ಸಂಘಟನೆಗಳ ವಾದ. ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದೂ ಹಿಂದುತ್ವ ಸಂಘಟನೆಗಳು ಒತ್ತಾಯಿಸುತ್ತಿವೆ. ಆದರೆ, ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿರುವುದರಿಂದ ಸದ್ಯಕ್ಕೆ ಸುಗ್ರೀವಾಜ್ಞೆ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.