samachara
www.samachara.com
ಲೇಖಕಿ ಗೀತಾ ಮೇಹ್ತಾ ಪದ್ಮಶ್ರೀ ಪುರಸ್ಕಾರ ನಿರಾಕರಿಸಿದ್ದೇಕೆ?
ಸುದ್ದಿ ಸಾರ

ಲೇಖಕಿ ಗೀತಾ ಮೇಹ್ತಾ ಪದ್ಮಶ್ರೀ ಪುರಸ್ಕಾರ ನಿರಾಕರಿಸಿದ್ದೇಕೆ?

ಚುನಾವಣೆಯ ದಿನಗಳಲ್ಲಿ ಘೋಷಣೆಯಾಗಿರುವ ಈ ಪ್ರಶಸ್ತಿಗಳಿಂದ ಅಂತರ ಕಾಯ್ದುಕೊಳ್ಳಲು ಗೀತಾ ಮೆಹ್ತಾ ನಿರ್ಧರಿಸಿದ್ದಾರೆ.

Team Samachara

ಕೇಂದ್ರ ಸರಕಾರ ಘೋಷಿಸಿರುವ ಪ್ರದ್ಮಶ್ರೀ ಪ್ರಶಸ್ತಿಯನ್ನು ಓಡಿಶಾ ಬರಹಗಾರ್ತಿ ಗೀತಾ ಮೇಹ್ತಾ ನಿರಾಕರಿಸಿದ್ದಾರೆ. ಚುನಾವಣೆಯ ದಿನಗಳಲ್ಲಿ ಘೋಷಣೆಯಾಗಿರುವ ಈ ಪ್ರಶಸ್ತಿಗಳಿಂದ ಅಂತರ ಕಾಯ್ದುಕೊಳ್ಳಲು ಮೆಹ್ತಾ ನಿರ್ಧರಿಸಿದ್ದಾರೆ.

ಗಣರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸರಕಾರ ಶುಕ್ರವಾರ ಭಾರತ ರತ್ನ, ಪದ್ಮಶ್ರೀ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಿತ್ತು. ಗೀತಾ ಮೇಹ್ತಾ ಅವರಿಗೆ ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

ಓಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಸೋದರಿಯೂ ಆಗಿರುವ ಗೀತಾ, “ಪದ್ಮಶ್ರೀ ಪ್ರಶಸ್ತಿಗೆ ನಾನು ಅರ್ಹ ವ್ಯಕ್ತಿ ಎಂದು ಕೇಂದ್ರ ಸರಕಾರ ಆಯ್ಕೆ ಮಾಡಿದ್ದಕ್ಕೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆದರೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪ್ರಶಸ್ತಿ ಘೋಷಿಸಿರುವ ಸಮಯ ತಪ್ಪಾಗಿದೆ ಎಂಬುದು ನನ್ನ ಭಾವನೆ. ಇಂತಹ ಸಂದರ್ಭದಲ್ಲಿ ಪ್ರಶಸ್ತಿ ಸಮಾರಂಭ ಸರಕಾರ ಹಾಗೂ ನನಗೆ ಮುಜುಗರಕ್ಕೀಡು ಮಾಡುವ ಸಾಧ್ಯತೆ ಇದೆ” ಎಂದು ವಿನಯದಿಂದಲೇ ಪ್ರಶಸ್ತಿ ಬೇಡ ಎಂದಿದ್ದಾರೆ.

ಗೀತಾ ಮೆಹ್ತಾ ಇಂಗ್ಲಿಷ್‌ನಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ‘ಕರ್ಮ ಕೋಲಾ’, ‘ರಾಜ್, ಎ ರಿವರ್ ಸೂತ್ರ’, ‘ಸ್ನೇಕ್ಸ್‌ ಅಂಡ್ ಲಾಡರ್ಸ್ : ಗ್ಲಿಂಪ್ಸೆಸ್ ಆಫ್ ಮಾಡರ್ನ್ ಇಂಡಿಯಾ’, ‘ಎಟರ್ನಲ್ ಗಣೇಶ : ಫ್ರಮ್ ಬ್ರಿಟಿಷ್ ಟು ರಿಬರ್ತ್’ ಗೀತಾ ಅವರ ಪ್ರಮುಖ ಕೃತಿಗಳು. ಪುಸ್ತಕಗಳಲ್ಲದೆ ಗೀತಾ ದೂರದರ್ಶನಕ್ಕಾಗಿ 14 ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.

ಗೀತಾ ಓಡಿಶಾ ರಾಜಕಾರಣಕ್ಕೆ ಪ್ರವೇಶಿಸುವ ಕುರಿತು ಅವರ ಹೆಸರನ್ನು ಉಲ್ಲೇಖಿಸದೆ ಬಿಜೆಡಿ ಸಂಸದ ಬೈಜಯಂತ್ ಪಾಂಡ 2017 ರಲ್ಲಿ ಪತ್ರಿಕೆಯೊಂದಕ್ಕೆ ಅಂಕಣ ಬರೆದಿದ್ದರು. ಅಲ್ಲದೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಉದ್ದೇಶಿಸಿ, “ನಿಮ್ಮ ತಂದೆ ಎಂದೂ ಕುಟುಂಬ ರಾಜಕಾರಣ ಮಾಡಿದವರಲ್ಲ, ನೀವು ಅವರ ಆದರ್ಶಗಳನ್ನೇ ಪಾಲಿಸುತ್ತೀರಿ ಎಂದು ಭಾವಿಸಿದ್ದೇನೆ” ಎಂದು ಬರೆದಿದ್ದರು.

ಈ ಅಂಕಣ ಪ್ರಕಟವಾದ ನಂತರ ಬಿಜು ಜನತಾದಳ ಪಕ್ಷ ಗೀತಾ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಿದೆ ಎಂಬ ವದಂತಿ ಹರಡಿತ್ತು. ಆದರೆ ಈ ಕುರಿತು ಸ್ಪಷ್ಟಣೆ ನೀಡಿದ್ದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಜೆಪಿ ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದೆ ಎಂದು ದೂರಿದ್ದರು. ಅಲ್ಲದೆ ಬೈಜಯಂತ್ ಪಾಂಡ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ನಂತರ ಅವರೇ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.