samachara
www.samachara.com
ಅಕ್ರಮ ಹಣ ವಹಿವಾಟು ಆರೋಪ; ಗೌತಮ್‌ ಖೇತಾನ್ ಬಂಧನ
ಸುದ್ದಿ ಸಾರ

ಅಕ್ರಮ ಹಣ ವಹಿವಾಟು ಆರೋಪ; ಗೌತಮ್‌ ಖೇತಾನ್ ಬಂಧನ

ಗೌತಮ್ ಖೇತಾನ್ ಕಾನೂನು ಬಾಹಿರವಾಗಿ ಅನೇಕ ವಿದೇಶಿ ಖಾತೆಗಳ ಮೂಲಕ ಹಣಕಾಸು ವ್ಯವಹಾರ ನಡೆಸುತ್ತಿದ್ದ ಎಂಬ ಆರೋಪವಿದೆ.

ಬಹುಕೋಟಿ ಮೌಲ್ಯದ ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ, ವಕೀಲ ಗೌತಮ್ ಖೇತಾನ್‌ನನ್ನು ಅಕ್ರಮ ಹಣಕಾಸು ವಹಿವಾಟು ನಡೆಸಿರುವ ಆರೋಪದ ಮೇಲೆ ಜಾರಿ ನಿರ್ದೆಶನಾಲಯ ಅಧಿಕಾರಿಗಳು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.

ಗೌತಮ್ ಖೇತಾನ್‌ನನ್ನು ಕಪ್ಪುಹಣ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದ್ದು, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಗೌತನ್ ಖೇತಾನ್ ಕಾನೂನು ಬಾಹಿರವಾಗಿ ಅನೇಕ ವಿದೇಶಿ ಖಾತೆಗಳ ಮೂಲಕ ವ್ಯವಹಾರ ನಡೆಸಿದ್ದು, ಅಪಾರ ಪ್ರಮಾಣದ ಕಪ್ಪುಹಣ ವಹಿವಾಟು ನಡೆದಿದೆ ಎನ್ನಲಾಗಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ವಾರವೇ ಖೇತಾನ್‌ಗೆ ಸೇರಿದ ದೆಹಲಿಯಲ್ಲಿರುವ ಕಚೇರಿ ಹಾಗೂ ಇತರೆಡೆ ದಾಳಿ ನಡೆಸಿ, ಸಾಕಷ್ಟು ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದರು. ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ವಿಚಾರಣೆ ವೇಳೆ ಗೌತಮ್‌ ಅಕ್ರಮ ವಹಿವಾಟು ಕೂಡಾ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಖೇತಾನ್ ಮೇಲೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಪ್ಪುಹಣ ಮತ್ತು ತೆರಿಗೆ ಕಾಯ್ದೆ 2015 ಸೆಕ್ಷನ್ 51 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

3,600 ಕೋಟಿಯ ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಈ ಹಿಂದೆಯೇ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಗೌತಮ್ ಖೇತಾನ್‌ನನ್ನು ಬಂಧಿಸಿತ್ತು. ಅಲ್ಲದೆ ಎರಡೂ ಇಲಾಖೆಗಳು ಈತನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿವೆ. ಈ ಪ್ರಕರಣಗಳಲ್ಲಿ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಿದ್ದ ಗೌತಮ್ ಅಕ್ರಮ ಹಣ ವ್ಯವಹಾರದಲ್ಲಿ ಮತ್ತೆ ಜೈಲು ಪಾಲಾಗಿದ್ದಾನೆ.